ಕರಾವಳಿಯ ಕಾಂಗ್ರೆಸ್ ಪಕ್ಷದ ಸ್ಥಿತಿ ಹೀಗೆ ಯಾಕಾಗಿದೆ ಗೊತ್ತಾ?

ಕಾಂಗ್ರೆಸ್ ನಾಯಕ ಮಂಜುನಾಥ ಭಂಡಾರಿ ಅವರಿಗೆ ನಾನೊಂದು ‘’ಪ್ರೇಮಪತ್ರ’’ ಬರೆದ ನಂತರ ಕಾಂಗ್ರೆಸ್ ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರ ವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಬರುತ್ತಿರುವ ಪೋನ್ ಕರೆಗಳು ಇನ್ನೂ ನಿಂತಿಲ್ಲ. ನನ್ನ ಎಡ-ಬಲ ಕಿವಿಗಳು ನೋಯಲು ಪ್ರಾರಂಭಿಸಿದ ನಂತರ ಸ್ಪೀಕರ್ ಆನ್ ಇಟ್ಟು ಮಾತನಾಡುಬೇಕಾಯಿತು. ಸಾಲ ತೀರಿಸಿಕೊಳ್ಳಲು ಪಕ್ಷ ಸೇರಿದವರು ಮತ್ತು ಮರಳು ಬಿಸಿನೆಸ್ ನಲ್ಲಿ ಚಿಲ್ಲರೆ ಕಾಸು ಮಾಡಿಕೊಂಡ ಕೆಲವರು ಟ್ರೋಲ್ ಮಾಡಿದ್ದನ್ನು ಬಿಟ್ಟರೆ ಉಳಿದವರೆಲ್ಲರದ್ದು ಪುಲ್ ಸಪೋರ್ಟ್. ಕರಾವಳಿ

-ದಿನೇಶ್ ಅಮಿನ್ ಮಟ್ಟು

‘ಬಾರಿ ಸೋಕಿತ್ತ್ಂಡ್ (ಬಹಳ ಚೆನ್ನಾಗಿತ್ತು) ಆಯನ್ ಬುಡೊಚ್ಚಿ ( ಅವನನ್ನು ಬಿಡಬೇಡಿ), ಎಂಕುಲು ಪೂರಾ ಈರೆನೊಟ್ಟು ಉಲ್ಲ ( ನಾವೆಲ್ಲ ನಿಮ್ಮ ಜೊತೆ ಇದ್ದೇವೆ) ನನಾತ್ ಬರೆಲೆ (ಇನ್ನಷ್ಟು ಬರೆಯಿರಿ) ವಾಟ್ಸಪ್ ತೂಲೆ ಯಾನ್ ದಾದನಾ ಕಡಪುರ್ದೆ ( ವಾಟ್ಸಪ್ ನೋಡಿ ನಾನು ಏನೋ ಕಳಿಸಿದ್ದೇನೆ) ‘’ ಎಂಕ್ ಅಂಚ ಮಲ್ದೆ, ಇಂಚ ಮಲ್ದೆ (ನನಗೆ ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ) … ಇಂತಹದ್ದೇ ಮಾತುಗಳು. ಪ್ರಾರಂಭದಲ್ಲಿ ಇಷ್ಟೆಲ್ಲ ಜನ ಸಪೋರ್ಟ್ ಮಾಡುತ್ತಾ ಇದ್ದಾರಲ್ಲಾ ಎಂದು ನನಗೂ ಖುಷಿ ಆಗಿತ್ತು.

ಆಮೇಲೆ ನನ್ನ ಪೋಸ್ಟ್ ನಲ್ಲಿನ ಪ್ರತಿಕ್ರಿಯೆಗಳನ್ನು ನೋಡುತ್ತಾ ಹೋದರೆ ನನಗೆ ಪೋನ್ ಮಾಡಿದ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಪತ್ತೆನೇ ಇಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದವರು ನನ್ನ ಪೋಸ್ಟ್ ಗೆ ಕನಿಷ್ಠ ಲೈಕ್ ಕೂಡಾ ಒತ್ತಿಲ್ಲ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಎಸ್‌ಐಟಿ ಮುಂದುವರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ

ಅದರ ನಂತರ ಯಾರಾದರು ಪೋನ್ ಮಾಡಿದರೆ ‘’ ನೀವು ಈ ರೀತಿ ಬೆಂಬಲಿಸಿದ್ದೀರಿ ಎಂದು ನಾನು ಬರೆಯಲಾ?’’ ಎಂದು ಕೇಳತೊಡಗಿದೆ. ‘’ ನಿಮ್ಮ ಜೊತೆ ಮಾತನಾಡುವುದೇ ಡೇಂಜರ್ ಅಣ್ಣಾ’’ ಎಂದು ಕೆಲವರು ಪೋನ್ ಕಟ್ ಮಾಡಿದರೆ, ‘’ಸದ್ಯ ಬೇಡ, ಆ ಮೇಲೆ ನಾನೇ ಬರೆಯುತ್ತೇನೆ’’ ಎಂದು ಇನ್ನು ಕೆಲವರು ಜಾರತೊಡಗಿದರು.

ಇದು ಕರಾವಳಿ ಕಾಂಗ್ರೆಸ್ ಪಕ್ಷದ ಸಮಸ್ಯೆ. ಬೆಂಕಿಗೆ ಗಂಟೆ ಕಟ್ಟಲು ಯಾರೂ ತಯಾರಿಲ್ಲ, ಯಾರಾದರೂ ಕಟ್ಟಲು ಹೋದರೆ ಹಿಂದಿನಿಂದ ಗಂಟೆ ಅಲ್ಲಾಡಿಸಲು ಎಲ್ಲರೂ ರೆಡಿ ಇದ್ದಾರೆ. ‘’ಇದನ್ನೆಲ್ಲ ನೀವು ಏನಾದರೂ ಮಾಡಿ ಹೈಕಮಾಂಡ್ ಕಳಿಸಬೇಕು’’ ಎನ್ನುವುದೇ ಕೆಲವರ ಗೋಳು.

ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಮೊದಲಿನಿಂದಲೂ ಬೆಂಗಳೂರಿಗಿಂತಲೂ ಮಂಗಳೂರು-ಉಡುಪಿಯೇ ಪವರ ಪುಲ್. ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಮತ್ತು ವೀರಪ್ಪ ಮೊಯಿಲಿ ಎಂಬ ತ್ರಿಮೂರ್ತಿಗಳು ನೆಹರೂ ಕುಟುಂಬಕ್ಕೆ ಪರಮಾಪ್ತರಾಗಿದ್ದವರು. ಅವರ ಜೊತೆ ಮಾರ್ಗರೇಟ್ ಆಳ್ವ ಕೂಡಾ. ಈಗ ಬಿ. ಕೆ. ಹರಿಪ್ರಸಾದ್ ಇದ್ದಾರೆ.

ಡೆಲ್ಲಿ ಕನೆಕ್ಷನ್ ವಿಚಾರದಲ್ಲಿ ವಿನಯಕುಮಾರ್ ಸೊರಕೆ ಅವರೂ ಹಿಂದೆ ಬಿದ್ದಿಲ್ಲ. ರಮೇಶ್ ಚನ್ನಿತೆಲ, ಎ.ಕೆ.ಆ್ಯಂಟನಿ, ವಯಲಾರ್ ರವಿ, ವೇಣುಗೋಪಾಲ್ ಸೇರಿದಂತೆ ಕರ್ನಾಟಕದ ಉಸ್ತುವಾರಿಗೆ ಬಂದವರಲ್ಲಿ ಹೆಚ್ಚಿನವರು ಪಕ್ಕದ ಕೇರಳದವರೇ ಆಗಿರುವುದರಿಂದ ಸಣ್ಣಪುಟ್ಟ ಲೀಡರ್ ಗಳಿಗೂ ಕೇರಳದ ಮೂಲಕ ದೆಹಲಿ ಲಿಂಕ್ ಇದೆ. ‘’ ಹೈಕಮಾಂಡ್ ಗೆ ಹೇಳಿ’’ ಎಂದು ಕೇಳಿಕೊಂಡವರಿಗೆಲ್ಲ ಇದನ್ನೇ ನಾನು ಹೇಳಿದ್ದು.

ಇನ್ನು ನನ್ನ ಕೆಲವು ಕಾಂಗ್ರೆಸೇತರ ಗೆಳೆಯರು ಕರಾವಳಿಯ ಕಾಂಗ್ರೆಸ್ ಪಕ್ಷದಲ್ಲಿರುವ ಜಾತ್ಯತೀತ ಮತ್ತು ಸಜ್ಜನ ನಾಯಕರ ಪೋಟೊಗಳನ್ನು ಹಾಕಿ ಸರ್ಟಿಫಿಕೇಟ್ ನೀಡಿದ್ದಾರೆ.

ಇದರಿಂದ ಏನೂ ಆಗೋದಿಲ್ಲ, ಕರಾವಳಿಯಲ್ಲಿನ ಕೋಮುವಾದದ. ವಿರುದ್ದ ಹೋರಾಡುತ್ತಿರುವವರು ಕಾಂಗ್ರೆಸ್ ಪಕ್ಷದಲ್ಲಿರುವ ಕೋಮುವಾದಿಗಳು, ಅಡ್ಜೆಸ್ಟ್ ಮೆಂಟ್ ಗಿರಾಕಿಗಳ ಹೆಸರೆತ್ತಿ, ಪೋಟೊಗಳನ್ನು ಹಾಕಿ ಬರೆಯಬೇಕು.

ಇದನ್ನೆಲ್ಲ ಹಾಕಲು ಕಾಂಗ್ರೆಸ್ ನಲ್ಲಿದ್ದವರಿಗೆ ಸಮಸ್ಯೆ ಇರಬಹುದು, ಉಳಿದವರಿಗೆ ಏನು ಸಮಸ್ಯೆ ಇದೆ?

ಇದನ್ನೂ ನೋಡಿ: ಸರ್ಕಾರಿ ಜಾಗಗಳಲ್ಲಿ RSS ಕಾರ್ಯಕ್ರಮ ನಿಷೇಧ | ಪ್ರಿಯಾಂಕ್‌ ಖರ್ಗೆಗೆ ಕೊಲೆ ಬೆದರಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *