ಪ್ರಶಸ್ತಿಗಳ ಪ್ರತಿಷ್ಠೆ ಮತ್ತು ಖ್ಯಾತಿಯ ಮೇಲೆ ದುಷ್ಪರಿಣಾಮ ಬೀರದಿರಲು ಕ್ರಮ ಪ್ರಶಸ್ತಿ ವಾಪಸಾತಿ
ನವದೆಹಲಿ: ಪ್ರಶಸ್ತಿ ಪಡೆದ ಸಾಧಕರು ನಂತರದ ದಿನಗಳಲ್ಲಿ ಸರ್ಕಾರಗಳ ನೀತಿಗಳನ್ನು ವಿರೋಧಿಸಿ ‘ಪ್ರಶಸ್ತಿ ವಾಪಸಾತಿ’ ಮಾಡುವುದನ್ನು ತಪ್ಪಿಸಲು ಸಂಸದೀಯ ಸಮಿತಿ ಹೊಸತಾಗಿ ನಿಯಮವೊಂದು ತರುವ ಬಗ್ಗೆ ಶಿಪಾರಸು ಮಾಡಿದೆ. ಸಂಸದೀಯ ಸಮಿತಿಯ ಈ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ವ್ಯಂಗ್ಯಕ್ಕೀಡಾಗಿದೆ.
ಸರ್ಕಾರಕ್ಕೆ ಮುಜುಗರ ಮಾಡುವಂತಹ ಪ್ರಶಸ್ತಿ ವಾಪಸಾತಿಯನ್ನು ತಪ್ಪಿಸಲು, ಉನ್ನತ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಅಕಾಡೆಮಿಗಳು ಸರ್ಕಾರಿ ಪ್ರಶಸ್ತಿಗಳನ್ನು ಸ್ವೀಕರಿಸುವವರಿಂದ ಪ್ರಶಸ್ತಿ ವಾಪಸಾತಿ ಮಾಡುವುದಿಲ್ಲ ಎಂದು ಸಹಿ ಹಾಕಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಹೇಳಿದೆ. ರಾಜಕೀಯ ವಿಷಯಗಳ ವಿರುದ್ಧ ಪ್ರತಿಭಟಿಸಿ ಪುರಸ್ಕೃತರು ಪ್ರಶಸ್ತಿಗಳನ್ನು ಹಿಂದಿರುಗಿಸುವುದರಿಂದ ಪ್ರಶಸ್ತಿಗಳ ಒಟ್ಟಾರೆ ಪ್ರತಿಷ್ಠೆ ಮತ್ತು ಖ್ಯಾತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮಿತಿಯು ಹೇಳಿದೆ.
ಇದನ್ನೂ ಓದಿ: ಏಷ್ಯಾದ ನೊಬೆಲ್ ಎಂದೇ ಖ್ಯಾತಿ ಹೊಂದಿರುವ ಪ್ರತಿಷ್ಟಿತ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಶೈಲಜಾ ಟೀಚರ್
“ಸರ್ಕಾರಿ ಪ್ರಶಸ್ತಿಗಳನ್ನು ಸ್ವೀಕರಿಸುವವರು ತಮ್ಮ ಲಿಖಿತ ಒಪ್ಪಿಗೆಯನ್ನು ನೀಡಬೇಕು. ಅಲ್ಲದೆ ಪ್ರಶಸ್ತಿಗಳನ್ನು ಹಿಂದಿರುಗಿಸದಂತೆ ಒಪ್ಪಂದಕ್ಕೆ ಸಹಿ ಹಾಕಬೇಕು. ಯಾವುದೇ ಸಂಸ್ಥೆಯ ಪ್ರಶಸ್ತಿಗಳು ಕಲಾವಿದರನ್ನು ಗೌರವಿಸುತ್ತವೆ. ಅದರಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು” ಎಂದು ಸಂಸದೀಯ ಸಮಿತಿ ಹೇಳಿದೆ.
ಪ್ರಶಸ್ತಿ ವಾಪಾಸಾತಿಯು ‘ಅವಮಾನಕರ’ ಎಂದು ಬಣ್ಣಿಸಿರುವ ಸಮಿತಿ, ಯಾವುದೇ ರಾಜಕೀಯ ಕಾರಣಗಳಿಂದ ಪ್ರಶಸ್ತಿಯನ್ನು ಹಿಂತಿರುಗಿಸದಂತೆ ಪ್ರಶಸ್ತಿಯನ್ನು ಸ್ವೀಕರಿಸುವವರ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
“ಪ್ರಶಸ್ತಿ ಸ್ವೀಕಾರವನ್ನು ಉಲ್ಲೇಖಿಸಿ ಪ್ರಸ್ತಾವಿತ ಪ್ರಶಸ್ತಿ ಪುರಸ್ಕೃತರಿಂದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬಹುದು. ಪ್ರಶಸ್ತಿ ಪುರಸ್ಕೃತರು ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಪ್ರಶಸ್ತಿಯನ್ನು ಅವಮಾನಿಸುವಂತಿಲ್ಲ. ಒಂದು ವೇಳೆ ಪ್ರಶಸ್ತಿಗಳನ್ನು ಹಿಂತಿರುಗಿಸಿದರೆ, ಭವಿಷ್ಯದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಅಂತಹ ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ” ಎಂದು ಸಮಿತಿ ಹೇಳಿದೆ.
ವಿಡಿಯೊ ನೋಡಿ: “ಸೋತ ರಾಜನಿಗೆ ತಿಥಿ ಮಾಡಿಸುವವರು ಅವರೆ, ಗೆದ್ದ ರಾಜನಿಗೆ ಪಟ್ಟಾಭಿಷೇಕ ಮಾಡಿಸುವವರು ಅವರೆ” – ಚಿತ್ರನಟ ಅಶೋಕ್