ತಮಿಳುನಾಡು ರಾಜ್ಯಪಾಲರನ್ನು ವಜಾ ಮಾಡಿ: ಆಡಳಿತರೂಢ ಡಿಎಂಕೆ ರಾಷ್ಟ್ರಪತಿಗೆ ಪತ್ರ

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷವು ರಾಜ್ಯಪಾಲರನ್ನು ವಜಾ ಮಾಡಿ ಎಂದು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ ಸಲ್ಲಿಸಿದೆ. ‘ಸಂವಿಧಾನ‌ ಬದ್ಧವಾಗಿ ಆಯ್ಕೆಯಾದ ಸರ್ಕಾರಕ್ಕೆ ಜನರ ಸೇವೆ ಮಾಡಲು ರಾಜ್ಯಪಾಲರು ಅಡ್ಡಿಪಡಿಸುತ್ತಿದ್ದಾರೆ. ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ‘ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯಪಾಲ ಆರ್‌.ಎನ್‌ ರವಿ ‘ಸಂವಿಧಾನವನ್ನು ರಕ್ಷಣೆ ಮಾಡುತ್ತೇನೆ ಎಂದು ಪ್ರತಿಜ್ಞೆ ಸ್ವೀಕರಿಸಿ ಅದನ್ನು ಪಾಲನೆ ಮಾಡುತ್ತಿಲ್ಲ. ಅಲ್ಲದೆ, ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡ ಮಸೂದೆಗಳಿಗೆ ಒಪ್ಪಿಗೆ ನೀಡಲು ತಡ ಮಾಡುತ್ತಿದ್ದಾರೆ‘ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಪಕ್ಷವು ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯಪಾಲ ಆರ್‌.ಎನ್ ರವಿಯವರು ಸಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರು. ಅವರನ್ನು ಪದಚ್ಯುತಗೊಳಿಸುವಂತೆ ರಾಷ್ಟ್ರಪತಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಲಾಗಿದೆ. ಸರ್ಕಾರದ ವಿರುದ್ಧ ತಮ್ಮನ್ನು ತಾವು ಸಮರ್ಥಿಸಿಕೊಳ್ಳವ ಭರದಲ್ಲಿ ಅವರು ನೀಡುವ ಹೇಳಿಕೆಗಳು ಕೆಲವೊಮ್ಮೆ ದೇಶದ್ರೋಹ ಹೇಳಿಕೆ ಎಂದು ಪರಿಗಣಿಸಬಹುದು‘ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಿಜೆಪಿಯೇತರ ಸರ್ಕಾರ ಇರುವ ದಕ್ಷಿಣದ ರಾಜ್ಯಗಳಾದ ಕೇರಳ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಮೂರೂ ರಾಜ್ಯಗಳಲ್ಲಿ ಆಡಳಿತರೂಢ ಪಕ್ಷಗಳು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

Donate Janashakthi Media

Leave a Reply

Your email address will not be published. Required fields are marked *