ಚೆನ್ನೈ : ಖಾಸಗಿ ವಲಯದಲ್ಲಿ ಮೀಸಲಾತಿ, ಎಲ್‌ಪಿಜಿ ಸಿಲಿಂಡರ್‌ಗಳಿಗೆ ತಿಂಗಳ ಸಬ್ಸಿಡಿ, ಶಿಕ್ಷಣ ಸಾಲಗಳ ಮನ್ನ ಸೇರಿದಂತೆ ವಿವಿಧ ಘೋಷಣೆಗಳ ಮೂಲಕ ಡ್ರಾವೀಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಚೆನ್ನೈನಲ್ಲಿರುವ ಪಕ್ಷದ ಕಚೇರಿ ಅನ್ನಾ ಅರಿವಲಯಂನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ನೆನ್ನೆ 173 ಕ್ಷೇತ್ರಗಳಲ್ಲಿ ಸ್ಪರ್ಧೆಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಸ್ಟಾಲಿನ್ ಅವರು ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ತನಿಖೆಗಾಗಿ ಆಯೋಗದ ಪ್ರಾಥಮಿಕ ವರದಿಯನ್ನು ಪಡೆಯಲು ಕ್ರಮವಹಿಸುವುದು ಮತ್ತು 30 ವರ್ಷದೊಳಗಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಮನ್ನ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ನೀಡುವ ಬಗ್ಗೆ ಡಿಎಂಕೆ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಭರವಸೆಯನ್ನು ನೀಡಿದೆ.
ಪೆಟ್ರೋಲ್ ಗೆ 5 ರೂ. ಹಾಗೂ ಡೀಸೆಲ್ ಗೆ 4 ರೂ.ಗಳ ಬೆಲೆಯನ್ನು ಇಳಿಸುವುದು, ಗೃಹಬಳಕೆ ಸಿಲಿಂಡರ್ ಗಳಿಗೆ ರೂ.100ಗಳ ಸಬ್ಸಿಡಿ ಸೇರಿದಂತೆ ಮಹಿಳೆಯರಿಗೆ ಮಾತೃತ್ವ ರಜೆಯನ್ನು 12 ತಿಂಗಳವರೆಗೆ ವಿಸ್ತರಣೆ, ಶಾಲಾ ಮಕ್ಕಳಿಗೆ ಬೆಳಗಿನ ತಿಂಡಿಯೊಂದಿಗೆ ಹಾಲು ವಿತರಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಸರಕಾರಿ ಉದ್ಯೋಗಗಳಲ್ಲಿ ಶೇ.75ರಷ್ಟು ತಮಿಳುನಾಡಿನ ಯುವಜನತೆ ಉದ್ಯೋಗದ ಕಲ್ಪಿಸುವ ಬಗ್ಗೆ ಕಾನೂನು ಜಾರಿಗೊಳಿಸಲು ಭರವಸೆ ಪದವೀಧರರಿಗೆ ಸರಕಾರಿ ಉದ್ಯೋಗದಲ್ಲಿ ಆದ್ಯತೆ ನೀಡುವುದು.
ತಮಿಳುನಾಡು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ನಡೆಯಲಿರುವ ಚುನಾವಣೆ ಕಣದಲ್ಲಿರುವ ಡಿಎಂಕೆ ಪಕ್ಷ ಕಾಂಗ್ರೆಸ್ ಪಕ್ಷ ಮತ್ತು ಇನ್ನಿತರೆ ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.