ಚೆನ್ನೈ: ಚೆನ್ನೈ ಪಾಲಿಕೆ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ ಮತ್ತು ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಆರ್ ಪ್ರಿಯಾ ಪಾತ್ರರಾಗಿದ್ದಾರೆ. 28 ವರ್ಷದ ಪ್ರಿಯಾ ಅವರನ್ನು ಮೇಯರ್ ಆಗಿ ಡಿಎಂಕೆ ಪಕ್ಷವು ಆಯ್ಕೆ ಮಾಡಿದೆ. ಈ ಮೂಲಕ ಮೇಯರ್ ಹುದ್ದೆಗೆ ಏರುತ್ತಿರುವ ಮೂರನೇ ಮಹಿಳೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಇದೇ ಮೊದಲ ಬಾರಿಗೆ ಚೆನ್ನೈನ ಮೇಯರ್ ಆಗಿ ದಲಿತ ಮಹಿಳೆಯೊಬ್ಬರು ಆಯ್ಕೆಯಾಗಿದ್ದು, ಎಲ್ಲರಲ್ಲೂ ಸಂತಸ ಮೂಡಿದೆ. ಚೆನ್ನೈನ ಇತಿಹಾಸದಲ್ಲಿ ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆ ಆರ್ ಪ್ರಿಯಾ ಆಗಿದ್ದಾರೆ.
ಚೆನ್ನೈ ಪಾಲಿಕೆಯಲ್ಲಿ ಡಿಎಂಕೆ ಬಹುಮತ ಹೊಂದಿದೆ. ಹಾಗಾಗಿ ಪ್ರಿಯಾ ಶೀಘ್ರದಲ್ಲೇ ಮೇಯರ್ ಆಗಿ ಔಪಚಾರಿಕವಾಗಿ ಆಯ್ಕೆಯಾಗಲಿದ್ದಾರೆ. ಉತ್ತರ ಚೆನ್ನೈನ ತಿರುವಿ ಕಾ ನಗರದಿಂದ ಆರ್ ಪ್ರಿಯಾ ಟಿಎನ್ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 74 ರಿಂದ ಗೆದ್ದಿದ್ದಾರೆ.
ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಎಂಕಾಂ ಪದವೀಧರರಾಗಿರುವ ಆರ್ ಪ್ರಿಯಾ ಅವರ ಮೊದಲ ಅಧಿಕೃತ ಹುದ್ದೆ ಮೇಯರ್ ಸ್ಥಾನವಾಗಿದೆ. ಆದರೂ, ಅವರು 18ನೇ ವಯಸ್ಸಿನಿಂದ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರದ ಬೆಳವಣಿಗೆಯಲ್ಲಿ ಅವರು ರಾಜಕೀಯದಲ್ಲಿ ತಮ್ಮ ಆಸಕ್ತಿ ಮತ್ತಷ್ಟು ಹೆಚ್ಚಿಸಿಕೊಂಡರು.
ವಿದ್ಯುತ್, ನೀರು ಸೇರಿದಂತೆ ಇಲ್ಲಿಯ ಜನರು ಎದುರಿಸುತ್ತಿರುವ ಸಮಸ್ಯೆ ಸಾಕಷ್ಟಿದೆ. ಅದನ್ನು ನಿವಾರಿಸಲು ನಾನು ಬಯಸುತ್ತೇನೆ ಎಂದು ಪ್ರಿಯಾ ಹೇಳಿದ್ದಾರೆ. ಪ್ರಿಯಾ ತಂದೆ ಆರ್ ರಾಜನ್ ಡಿಎಂಕೆಯ ಪ್ರದೇಶ ಸಹ ಕಾರ್ಯದರ್ಶಿ ಹಾಗೂ ಪೆರಂಬೂರ್ ಮಾಜಿ ಶಾಸಕ ಚೆಂಗೈ ಶಿವಂ ಅವರ ಮೊಮ್ಮಗಳು ಆಗಿದ್ದಾರೆ.
ಮಹೇಶ್ ಕುಮಾರ್ ಚೆನ್ನೈ ಪಾಲಿಕೆ ಉಪ ಮೇಯರ್ ಅಭ್ಯರ್ಥಿಯಾಗಲಿದ್ದಾರೆ.
11 ಮಳೆಯರಿಗೆ ಮೇಯರ್ ಸ್ಥಾನ
ಆಡಳಿತಾರೂಢ ಡಿಎಂಕೆ ಪಕ್ಷವು ಬೃಹತ್ ಚೆನ್ನೈ ಕಾರ್ಪೊರೇಷನ್‌ನ ನೂತನ ಮೇಯರ್ ಆಯ್ಕೆಯೊಂದಿಗೆ 20 ಮೇಯರ್ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಡಿಎಂಕೆ ಪಕ್ಷವು ಮೇಯರ್ ಸ್ಥಾನಕ್ಕೆ 11 ಮಹಿಳೆಯರಿಗೆ ಮತ್ತು ಒಂಬತ್ತು ಪುರುಷರಿಗೆ ಹಂಚಿಕೆ ಮಾಡಿದೆ.