ಮೈಸೂರು: ಎಸ್ ಎಂ ಕೃಷ್ಣರ ನಂತರ ಒಕ್ಕಲಿಗ ಸಮುದಾಯದಿಂದ ನನಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಹಂತ ತಲುಪಿದ್ದೇನೆ. ಹಾಗಾಗಿ ನನ್ನ ಕೈ ಬಲಪಡಿಸಿ ಎಂದು ಒಕ್ಕಲಿಗ ಸಮುದಾಯವನ್ನು ಮನವಿ ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಮೇಲಿನಂತೆ ಉತ್ತರಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ ಕೆ ಶಿವಕುಮಾರ್ ಬಣ ಅಂತೇನಿಲ್ಲ.
ನಮ್ಮದು ಕಾಂಗ್ರೆಸ್ ಬಣ ಮಾತ್ರ, ಮತ್ಯಾವುದೇ ಬಣವಿಲ್ಲ. ಒಕ್ಕಲಿಗ ಸಮುದಾಯದ ಜೊತೆಗೆ ರಾಜ್ಯದ ಎಲ್ಲಾ ಸಮುದಾಯಗಳಿಂದಲೂ ಬೆಂಬಲ ಸಿಗುವ ವಿಶ್ವಾಸವಿದೆ. ನಾನೇನು ಸನ್ಯಾಸೀನಾ? ನಾನೇನು ಕಾವಿ ಬಟ್ಟೆ ತೊಟ್ಟಿದ್ದೇನಾ? ಮೊದಲು ಕಾಂಗ್ರೆಸ್ ಸರ್ಕಾರ ಬರಬೇಕು. ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇರಿಸಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಗಾಗಿ ಸರ್ವೇ ಮಾಡುತ್ತೇವೆಂದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಭ್ರಷ್ಟಾತಿಭ್ರಷ್ಟ ಸರ್ಕಾರವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲಾಗುವುದು. ನಾವು ನಡೆಸಿರುವ ಆಂತರೀಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವರದಿ ನೀಡಿದೆ ಎಂದರು.