ಎಸ್‌ಐಆರ್ ಮೂಲಕ ಭಾರತವನ್ನು ಎರಡು ಭಾಗ ಮಾಡುವ ಪ್ರಯತ್ನ: ಪ್ರಕಾಶ್ ರಾಜ್

ಮತಪಟ್ಟಿಯಿಂದ ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನು ಹೊರಗಿಡುವ ಹುನ್ನಾರ: ಆರೋಪ
ಬೆಂಗಳೂರು: ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ನಿರ್ದಿಷ್ಟ ಧರ್ಮಗಳಿಗೆ ಸೇರಿದ ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವ ಪ್ರಕ್ರಿಯೆಯಾಗಿದೆ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದರು. ಇದು ಕೇವಲ ಚುನಾವಣೆ ಅಥವಾ ಗೆಲುವಿನ ಪ್ರಶ್ನೆಯಲ್ಲ. ಎಸ್‌ಐಆರ್ ಮೂಲಕ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು. ಎಸ್‌ಐಆರ್ 

ನಗರದ ಶಾಸಕರ ಭವನದಲ್ಲಿ ಬುಧವಾರ ಎಸ್‌ಐಆರ್ ವಿರೋಧಿ ಒಕ್ಕೂಟ ಆಯೋಜಿಸಿದ್ದ ಎಸ್‌ಐಆರ್ ಪರಿಶೋಧನಾ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಅನ್ನು ಬಿಜೆಪಿಯನ್ನು ಗೆಲ್ಲಿಸುವ ರಾಜಕೀಯ ತಂತ್ರ ಎಂದು ಮಾತ್ರ ನೋಡಿದರೆ ತಪ್ಪಾಗುತ್ತದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಮತ ಹಾಕುವುದು ಕೆಲವರಿಗೆ ಬೇಕಿಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ತಾವು ಹೇಳುವುದನ್ನೇ ಅದು ಮಾತನಾಡಬೇಕು ಎಂಬ ಮನಸ್ಥಿತಿ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಮತದಾನದ ಹಕ್ಕಿನ ಪ್ರಶ್ನೆಯಷ್ಟೇ ಅಲ್ಲ

ಎಸ್‌ಐಆರ್‌ ವಿಚಾರವನ್ನು ಕೇವಲ ಮತದಾರರ ಪಟ್ಟಿಯ ಸಮಸ್ಯೆ ಅಥವಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಯಾಗಿ ನೋಡಬಾರದು ಎಂದು ಪ್ರಕಾಶ್ ರಾಜ್ ಹೇಳಿದರು. ಇದು ಸಂವಿಧಾನ ಮತ್ತು ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದರು.

ಇತ್ತೀಚಿನ ಎರಡು ರಾಜಕೀಯ ಬೆಳವಣಿಗೆಗಳು ಸರ್ವಾಧಿಕಾರದತ್ತ ಸಾಗುತ್ತಿದ್ದ ಪರಿಸ್ಥಿತಿಗೆ ಪ್ರಶ್ನೆಗಳನ್ನು ಎತ್ತಿವೆ ಎಂದು ಅವರು ಹೇಳಿದರು. ಸಿಜೆಪಿ ಹೋರಾಟದ ಮೂಲಕ ಯುವಜನರು ಅಧಿಕಾರದಲ್ಲಿರುವವರನ್ನು ಪ್ರಶ್ನಿಸಬಹುದು ಎಂಬ ಧೈರ್ಯ ತೋರಿಸಿದ್ದಾರೆ. ಮತ್ತೊಂದೆಡೆ, ಮಾಧ್ಯಮಗಳ ದೊಡ್ಡ ಭಾಗದ ಧ್ವನಿ ಕುಗ್ಗಿದ ಸಂದರ್ಭದಲ್ಲಿ ಅದೇ ಮಾಧ್ಯಮ ವಲಯದಿಂದ ಬಂದ ಪತ್ರಕರ್ತೆಯೊಬ್ಬರು ದೇಶದ ದಿಕ್ಕಿನ ಕುರಿತು ಪ್ರಶ್ನೆಗಳನ್ನು ಎತ್ತುವ ಮೂಲಕ ಜನರ ಗಮನ ಸೆಳೆದಿದ್ದಾರೆ ಎಂದು ಪ್ರಕಾಶ್ ರಾಜ್ ಹೇಳಿದರು. ಎಸ್‌ಐಆರ್ 

ಇದನ್ನೂ ಓದಿ : ಎಸ್‌ಐಆರ್‌ ವಿರುದ್ಧ INDIA ಒಕ್ಕೂಟದ ಹೋರಾಟ ತೀವ್ರ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಎಸ್‌ಐಆರ್ ಸಂಪೂರ್ಣ ರದ್ದಾಗಬೇಕು

ಈಗಿನ ಪ್ರಮುಖ ಬೇಡಿಕೆ ಅರ್ಜಿ ಅಥವಾ ವಿವಿಧ ನಮೂನೆಗಳನ್ನು ತುಂಬಿಸಿ ಎಲ್ಲರನ್ನೂ ಮತಪಟ್ಟಿಯೊಳಗೆ ಸೇರಿಸುವುದಲ್ಲ, ಎಸ್‌ಐಆರ್ ಪ್ರಕ್ರಿಯೆಯನ್ನೇ ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು. ಪ್ರಕ್ರಿಯೆಯಲ್ಲೇ ದೋಷವಿದೆ. ಅದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಎಸ್‌ಐಆರ್ ಮತದಾರರನ್ನು ಪಟ್ಟಿಯಿಂದ ಹೊರಗೆ ತಳ್ಳುವ ಪ್ರಕ್ರಿಯೆಯಾಗಿದೆ ಎಂದು ಅವರು ಆರೋಪಿಸಿದರು.

ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಯ ಬಗ್ಗೆಯೂ ಪ್ರಶ್ನೆ ಎತ್ತಿದ ಅವರು, ಚುನಾವಣಾ ಆಯೋಗದ ಆಯುಕ್ತರನ್ನು ಆಯ್ಕೆ ಮಾಡುವ ವಿಧಾನದಲ್ಲೇ ಬದಲಾವಣೆ ಅಗತ್ಯವಿದೆ ಎಂದರು.

‘18 ವರ್ಷ ತುಂಬಿದ ಯುವಕನಿಗೆ ಪೋಷಕರ ದಾಖಲೆ ಏಕೆ?’

ನಮೂನೆ-6 ಮತ್ತು 2002ರ ಮತದಾರರ ಪಟ್ಟಿಯ ಮ್ಯಾಪಿಂಗ್‌ ಕುರಿತು ಪ್ರಶ್ನಿಸಿದ ಪ್ರಕಾಶ್ ರಾಜ್, 18 ವರ್ಷ ತುಂಬಿದ ಯುವಕ ಅಥವಾ ಯುವತಿ ತಾನು 18 ವರ್ಷ ಪೂರ್ಣಗೊಳಿಸಿದ್ದು, ನಿರ್ದಿಷ್ಟ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಅಗತ್ಯ ದಾಖಲೆ ನೀಡಿದರೆ ಮತದಾರನಾಗಿ ನೋಂದಾಯಿಸಲು ಅವಕಾಶ ಇರಬೇಕು ಎಂದರು.

ಅಂತಹ ಸಂದರ್ಭದಲ್ಲಿ ಅವರ ತಂದೆ-ತಾಯಿಯ ಹಿಂದಿನ ದಾಖಲೆಗಳು ಅಥವಾ ವಿವರಗಳನ್ನು ಏಕೆ ಕೇಳಬೇಕು ಎಂದು ಪ್ರಶ್ನಿಸಿದ ಅವರು, 2002ರ ಮಾಹಿತಿಯಲ್ಲಿರುವ ತಪ್ಪುಗಳನ್ನು ಸರಿಪಡಿಸದೆ ಮ್ಯಾಪಿಂಗ್ ಮಾಡಲು ಮುಂದಾಗಿರುವುದರಿಂದ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು. ಕಾಗುಣಿತದ ತಪ್ಪುಗಳನ್ನು ಮಾಡಿದ್ದು ಅಧಿಕಾರಿಗಳು ಅಥವಾ ವ್ಯವಸ್ಥೆಯೇ ಆಗಿದ್ದರೂ, ಅದರ ಪರಿಣಾಮವನ್ನು ಮತದಾರರು ಅನುಭವಿಸುವಂತಾಗಿದೆ. ಮ್ಯಾಪಿಂಗ್‌ ಪ್ರಕ್ರಿಯೆಯಲ್ಲಿ ಮಾನವ ಪರಿಶೀಲನೆಯ ಬದಲು ಯಂತ್ರಾಧಾರಿತ ವ್ಯವಸ್ಥೆಗೆ ಹೆಚ್ಚಿನ ಅವಲಂಬನೆ ಇರುವುದರ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಜನರು ಬೀದಿಗಿಳಿದಾಗ ಮಾತ್ರ ಹೋರಾಟ ಗೆಲುವು

ಎಸ್‌ಐಆರ್ ವಿರುದ್ಧದ ಹೋರಾಟ ಯಶಸ್ವಿಯಾಗಬೇಕಾದರೆ ಜನರು ಬೀದಿಗಿಳಿಯಬೇಕು ಎಂದು ಪ್ರಕಾಶ್ ರಾಜ್ ಹೇಳಿದರು. ಕೇವಲ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ ಮಾಡುವುದರಿಂದ ಅಥವಾ ಯಾರಾದರೂ ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.

2023ರಿಂದ ಇದುವರೆಗೆ ಚುನಾವಣಾ ಆಯೋಗ ತೆಗೆದುಕೊಂಡಿರುವ ನಿರ್ಧಾರಗಳು ಮತ್ತು ಅವುಗಳಿಂದ ಉಂಟಾಗಿರುವ ಪರಿಣಾಮಗಳ ಕುರಿತು ಸಮಗ್ರ ಪರಿಶೋಧನೆ ನಡೆಯಬೇಕು. ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಬದಲಾಯಿಸಿ ಹೊಸ ಚುನಾವಣಾ ಆಯೋಗವನ್ನು ರಚಿಸಬೇಕು. ಎಸ್‌ಐಆರ್‌ ಮೂಲಕ ಮತಪಟ್ಟಿಯಿಂದ ಹೊರಗಿಡಲಾಗಿರುವ ಮತದಾರರನ್ನು ಮತ್ತೆ ಮತಪಟ್ಟಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದರು. ಎಸ್‌ಐಆರ್ 

ಸಂವಿಧಾನ, ಪ್ರಜಾಪ್ರಭುತ್ವಕ್ಕಾಗಿ ಜನಾಂದೋಲನಕ್ಕೆ ಕರೆ

ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಹೋರಾಟದ ಭಾಗವಾಗಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದರು. ಯುವಜನರು ಸತ್ಯಾಗ್ರಹ ಮತ್ತು ಪ್ರತಿರೋಧದ ಶಕ್ತಿ ಏನೆಂಬುದನ್ನು ಈಗಾಗಲೇ ತೋರಿಸಿದ್ದಾರೆ. ಈ ಶಕ್ತಿಯನ್ನು ಬಳಸಿಕೊಂಡು ಅಹಿಂಸಾತ್ಮಕವಾಗಿ, ಪ್ರೀತಿಯಿಂದ ಹಾಗೂ ಒಗ್ಗಟ್ಟಿನಿಂದ ಜನರು ಬೀದಿಗಿಳಿಯಬೇಕು. ಇಲ್ಲದಿದ್ದರೆ ಎಸ್‌ಐಆರ್‌ನ ಪರಿಣಾಮವನ್ನು ತಡೆಯುವುದು ಕಷ್ಟವಾಗಲಿದೆ ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ, ನಿರ್ದೇಶಕ ಬಿ. ಸುರೇಶ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜ್, ಹೋರಾಟಗಾರರಾದ ಕೆ.ಎಲ್. ಅಶೋಕ್, ಮುಹಮ್ಮದ್ ಯೂಸುಫ್ ಕನ್ನಿ, ವೀರಸಂಗಯ್ಯ, ಅಬ್ದುಲ್ ಮಜೀದ್, ತಾಹೇರ್ ಹುಸೇನ್, ಕೆ.ಎಸ್. ವಿಮಲಾ, ಕೆ.ವಿ. ಭಟ್, ಶಿವಸುಂದರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸೀತಾರಂ ಗುಂಡಪ್ಪ, ಇಂದಿರಮ್ಮ, ಪ್ರೊ. ವಿ.ಎಸ್. ಶ್ರೀಧರ, ಕುಮಾರ್ ಸಮತಳ, ಪ್ರೊ. ನಗರಿ ಬಾಬಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ನೋಡಿ : LIVE : SIR -ದ್ರೋಹ ಮತ್ತು ಕಣ್ಣೀರ ಕಥನ (ಪರಿಶೋಧನಾ ವರದಿ ಬಿಡುಗಡೆ) ನೇರಪ್ರಸಾರ

Donate Janashakthi Media

Leave a Reply

Your email address will not be published. Required fields are marked *