ಕಾರವಾರ: ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಕೂಗು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹಳ ಹಿಂದಿನಿಂದಲೂ ಇದೆ. ತುರ್ತು ಸಂದರ್ಭದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಸಾವನ್ನಪ್ಪಿದವರ ಸಂಖ್ಯೆ ಲೆಕ್ಕವಿಲ್ಲದಷ್ಟು ದಾಖಲಾಗಿವೆ.
ಜಿಲ್ಲೆಯಲ್ಲಿ ಇರುವ ಜಿಲ್ಲಾ ಆಸ್ಪತ್ರೆಯೇ ಜಿಲ್ಲೆಯ ಜನರ ಸಂಜೀವಿನಿ ಆಗಿದೆ. ಬಹುತೇಕ ಜಿಲ್ಲೆಯ ಜನರು ಜಿಲ್ಲಾ ಆಸ್ಪತ್ರೆಗೆ ಆಗಮಿಸುತ್ತಾರೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಆರೋಪ ಹಿಂದಿನಿಂದಲೂ ಕೇಳುತ್ತಿತ್ತು. ಆಸ್ಪತ್ರೆಯ ಜಿಲ್ಲಾ ಸರ್ಜನ್ ಅವರೇ ಲಂಚ ಪಡೆಯುವಾಗ ಜುಲೈ 10 ಗುರುವಾರದಂದು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕಾರವಾರದ ಜಿಲ್ಲಾ ಆಸ್ಪತ್ರೆಯ ಸರ್ಜನ್ ಆಗಿರುವ ಡಾ. ಶಿವಾನಂದ ಕುಡ್ತಲಕರ್ ಗುತ್ತಿಗೆದಾರರೊಬ್ಬರಿಂದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಆಸ್ಪತ್ರೆಯ ರೋಗಿಗಳಿಗೆ ಬೆಡ್ ಶೀಟ್, ಪೀಠೋಪಕರಣ ಖರೀದಿಗೆ 3.43 ಲಕ್ಷದ ಟೆಂಡರ್ ಕರೆಯಲಾಗಿತ್ತು.
ಇದನ್ನೂ ಓದಿ: ಅಕ್ರಮ ಡ್ರಗ್ಸ್, ಜೂಜು, ಮರಳು ದಂಧೆಗಳಿಗೆ ಕಡಿವಾಣ ಹಾಕಬೇಕು: ಡಾ. ಜಿ. ಪರಮೇಶ್ವರ
ಅಂಕೋಲಾದ ವಿಶಾಲ್ ಫರ್ನಿಚರ್ ಎನ್ನುವ ಸಂಸ್ಥೆಯ ಮಾಲಿಕ ಮೌಸೀನ್ ಅಹಮ್ಮದ್ ಶೇಖ್ ಎನ್ನುವವರಿಗೆ ಈ ಟೆಂಡರ್ ಆಗಿತ್ತು. ಟೆಂಡರ್ ಹಣ ಬಿಡುಗಡೆ ಮಾಡಲು ಕುಡ್ತಲಕರ್ 75,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಗುರುವಾರ 30,000 ರೂ. ಹಣ ಪಡೆಯುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕುಡ್ತಲಕರ್ 75,000 ರೂ. ಹಣ ಕೊಡದೇ ಇದ್ದರೆ ಯಾವುದೇ ಕಾರಣಕ್ಕೂ ಟೆಂಡರ್ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಹೇಳಿದ್ದರು ಎಂಬ ಆರೋಪ ಇದೆ. ಬುಧವಾರ ರಾತ್ರಿ ಮನೆಗೆ ಕರೆಸಿ ಕೇಳಿದ್ದಕ್ಕೆ ಗುತ್ತಿಗೆದಾರರು 20,000 ರೂಪಾಯಿ ಕೊಟ್ಟಿದ್ದರು. ಆದರೆ, ಇನ್ನೂ ಹಣ ಬೇಕೆಂದು ಪಿಡಿಸುತ್ತಿದ್ದುದಕ್ಕೆ ಗುರುವಾರ 30 ಸಾವಿರ ರೂಪಾಯಿ ಕಚೇರಿಯಲ್ಲಿಯೇ ಕೊಡಲು ತೆರಳಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ ದಾಳಿ ನಡೆಸಿ ಕುಡ್ತಲಕರ್ರನ್ನು ಬಂಧಿಸಲಾಗಿದೆ.
ಪತ್ನಿ ತಾಳಿ ಅಡವಿಟ್ಟು ಹಣ ಕೊಟ್ಟಿದ್ದ ಗುತ್ತಿಗೆದಾರ
ಶಿವಾನಂದ ಕುಡ್ತಲಕರ್ ಕಳೆದ 15 ವರ್ಷದಿಂದ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದು ಇವರ ವಿರುದ್ಧ ಭ್ರಷ್ಟಾಚಾರದ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು. ಈ ಹಿಂದೆ ಇದೇ ಗುತ್ತಿಗೆದಾರ 16 ಲಕ್ಷ ರೂಪಾಯಿ ಟೆಂಡರ್ ಪಡೆದಾಗ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಕಾಟ ತಡೆಲಾಗದೆ ಪತ್ನಿಯ ಮಾಂಗಲ್ಯ ಅಡ ಇಟ್ಟು ಗುತ್ತಿಗೆದಾರ ಹಣ ಕೊಟ್ಟಿದ್ದರು ಎನ್ನಲಾಗಿದೆ. ಸದ್ಯ ವೈದ್ಯ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಕ್ಕೆ ಸಾರ್ವಜನಿಕರು ಖುಷಿ ಪಟ್ಟಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಗುಣಮಟ್ಟದ ಆರೋಗ್ಯ ವ್ಯವಸ್ಥೆ ಸಿಗಲು ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತದೆ. ಆದರೆ ಲಂಚಬಾಕ ಕೆಲ ವೈದ್ಯರು ಮಾನವೀಯತೆ ಮರೆತು ಹಣ ಮಾಡುತ್ತಿದ್ದು, ಸರ್ಜನ್ ಕುಡ್ತಲಕರ್ ಬಂಧನ ಲಂಚ ಪಡೆಯುವ ಇತರ ವೈದ್ಯರಿಗೂ ಪಾಠ ಆದಂತಾಗಿದೆ.
ಇದನ್ನೂ ನೋಡಿ: ಸಾರ್ವತ್ರಿಕ ಮುಷ್ಕರ | ಕೇಂದ್ರ – ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಸಿಡಿದೆದ್ದ ರೈತ – ಕಾರ್ಮಿಕರು Janashakthi
