ಬೆಂಗಳೂರು: ನಿಗಮ,ಮಂಡಳಿಗಳು ಸೇರಿದಂತೆ ವಿವಿಧ ನಾಮನಿರ್ದೇಶನಗಳಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರಿಗೆ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಗೆಲುವಿಗಾಗಿ ದುಡಿದ ಹೆಚ್ಚು ಜನರಿದ್ದಾರೆ. ಅವರಿಗೆ ಅಧಿಕಾರ ನೀಡುವ ಉದ್ದೇಶದಿಂದ ತಲಾ ಎರಡೂವರೆ ವರ್ಷಗಳ ಅವಧಿಗೆ ಅಧಿಕಾರ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ನೇಮಕಕ್ಕೆ ಅರ್ಹರಾಗಿರುವವರ ಪಟ್ಟಿ ಒದಗಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಇದನ್ನೂ ಓದಿ:ಬ್ಲ್ಯಾಕ್‌ಮೇಲ್‌ಗಳಿಗೆ ಹೆದರಲ್ಲ,ಕೆಲಸ ಮಾಡಿದವರ ಬಿಲ್ ಪಾವತಿ ಆಗಲಿದೆ:ಡಿ.ಕೆ.ಶಿವಕುಮಾರ್
ಪಕ್ಷಕ್ಕಾಗಿ ದುಡಿದವರಿಗೆ ಸ್ಥಾನಮಾನ ನೀಡಲಾಗುವುದು. ಅವರು ಪ್ರತಿನಿಧಿಸುವ ಮತಗಟ್ಟೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತಗಳು ಬಂದಿವೆ ಎಂಬುವುದನ್ನೂ ಪರಿಗಣಿಸಲಾಗುವುದು. ಮತಗಟ್ಟೆಯಲ್ಲಿ ಮುನ್ನಡೆ ಕೊಡಿಸಲಾಗದವರಿಗೆ ಹುದ್ದೆ ಕೊಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಜತೆ ಸಭೆ ನಡೆಸಿ ಅವರ ಅಹವಾಲು ಆಲಿಸಲಾಗುವುದು. ಸಚಿವರು ಪ್ರವಾಸದ ಅವಧಿಯಲ್ಲಿ ಬ್ಲಾಕ್ ಕಾಂಗ್ರೆಸ್ ಭೇಟಿ ನೀಡುವುದು ಕಡ್ಡಾಯ. ಬಿಬಿಎಂಪಿ,ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ ಸೇರಿದಂತೆ ಬಾಕಿ ಇರುವ ಎಲ್ಲ ಚುನಾವಣೆಗಳನ್ನು ನಡೆಸಲು ಕಾಂಗ್ರೆಸ್ ಸರ್ಕಾರ ಸಿದ್ಧವಿದೆ. ನ್ಯಾಯಲಯದ ಅನುಮತಿ ಪಡೆದು ಚುನಾವಣಾ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.