ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಡಿಸೆಂಬರ್ ತಿಂಗಳಿಂದ ಹಾಲಿನ ಜೊತೆಗೆ ರಾಗಿ ಮಾಲ್ಟ್ ನೀಡುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ಘೋಷಣೆ ಮಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗಾಗಿ ನಡೆಸುತ್ತಿರುವ ಮಾಧ್ಯಾಹ್ನದ ಊಟ ಯೋಜನೆ ಚೆನ್ನಾಗಿ ಸಾಗುತ್ತಿದೆ. ಮಕ್ಕಳಿಗೆ ಪೌಷ್ಟಿಕಾಹಾರ ನೀಡಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆ ರಾಗಿ ಮಾಲ್ಟ್ ಕೊಡುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಮುಂದಿನ ತಿಂಗಳಿಂದ ರಾಗಿ ಮಾಲ್ಟ್ ಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದೇವೆ. ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ನಿಟ್ಟಿನಲ್ಲಿ ರಾಗಿ ಮಾಲ್ಟ್ ನೀಡುವ ನಿರ್ಧಾರ ಕೈಗೊಂಡಿದ್ದೇವೆ. ಒಂದು ಎನ್ಜಿಒದವರು ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದರು. ಅದು ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಕ್ಷೀರಭಾಗ್ಯದ ಹಾಲಿನ ಜೊತೆ ಬೆಳಗ್ಗೆ ರಾಗಿಗಂಜಿ ಕೊಡುವ ನಿರ್ಧಾರ ಕೂಡ ಕೈಗೊಳ್ಳಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ತೆರೆಯಲು ಉದ್ದೇಶಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ತಲಾ ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ ಮೂರು ಸಾವಿರ ಕೆಪಿಎಸ್ ಶಾಲೆಗಳನ್ನು ಸಿಎಸ್‌ಆರ್ ನಿಧಿಯ ನೆರವಿನಿಂದ ತೆರೆಯಲು ಚಿಂತನೆ ನಡೆದಿದೆ. ಇದಕ್ಕೆ 2500 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಈಗಾಗಲೇ 600 ಕೋಟಿಯಷ್ಟು ಸಿಎಸ್‌ಆರ್ ನಿಧಿ ಲಭ್ಯವಿದೆ ಎಂದರು.
ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಪ್ರಕರಣ: ನೆವಿಲ್ಲೆ ರಾಯ್ ಸಿಂಘಮ್‌ಗೆ ಹೊಸ ಸಮನ್ಸ್ ಜಾರಿ ಮಾಡಿದ ಇಡಿ
ಮೆಳೆಯಿಂದ ಶಿಥಿಲಗೊಂಡ ಶಾಲಾ ಕಟ್ಟಡಗಳಿಗೆ ಮೂಲಸೌಲಭ್ಯ ಒದಗಿಸುವ ಕೆಲಸವೂ ನಡೆಯುತ್ತಿದೆ. 7311 ಹೊಸ ಕೊಠಡಿಗಳ ನಿರ್ಮಾಣ, 3593 ಶಾಲೆಗಳಲ್ಲಿ ದುರಸ್ತಿ. 7100 ಶೌಚಾಲಯಗಳನ್ನು ಸುಮಾರು ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನರೇಗಾ ಯೋಜನೆಯಲ್ಲಿ ಶಾಲೆಗಳ ಆವರಣ ಗೋಡೆ, ಅಡುಗೆ ಕೋಣೆ, ಶೌಚಾಲಯಗಳ ನಿರ್ಮಾಣ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇನ್ನು ಎಸ್ಇಪಿ (ರಾಜ್ಯ ಶಿಕ್ಷಣ ನೀತಿ) ಬಗ್ಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ SEP ಅನುಷ್ಠಾನ ಆಗಲಿದೆ. ಈ ಬಗ್ಗೆ ಮೊದಲ ಸಭೆ ಆಗಿದೆ. ಎಸ್ಇಪಿ ಜಾರಿ ಮೂಲಕ ಉತ್ತಮ ಶಿಕ್ಷಣ ವ್ಯವಸ್ಥೆ ನಿರ್ಮಾಣ ಆಗಲಿದೆ. ಎಸ್ಇಪಿಗೆ ರಾಜ್ಯ ಪಠ್ಯ ಕ್ರಮವೋ, CBSE ಪಠ್ಯಕ್ಕೋ ಅಂತ ತಜ್ಞರ ವರದಿ ಬಂದ ಮೇಲೆ ಗೊತ್ತಾಗಲಿದೆ. ನಮ್ಮ ಸಿಲಬಸ್ CBSE ಗಿಂತ ಉತ್ತಮವಾಗಿ ಇರಲಿದೆ. ವರದಿ ಬಂದ ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡ್ತೀವಿ ಎಂದು ಮಧು ಬಂಗಾರಪ್ಪ ತಿಳಿಸಿದರು.
ವಿಡಿಯೋ ನೋಡಿ: ಇದು ಶಾಲೆಯಾ? ಅಥವಾ ಸ್ವಿಮ್ಮಿಂಗ್ ಫೂಲ್! ಶಾಸಕರೆ ಉತ್ತರಿಸಿ Janashakthi Media