ಬೆಂಗಳೂರು: ಡಿಸೆಂಬರ್ 17 ರಂದು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮತ್ತು ಅಗೌರವದ ಹೇಳಿಕೆಯನ್ನು ನೀಡಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕೇಂದ್ರ ಕಾರ್ಯಕಾರಿ ಸಮಿತಿ ಹಾಗೂ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಗೇಲಿ ಮಾಡುವ ಅಮಿತ್ ಶಾ ಹೇಳಿಕೆಯು ಬಿಜೆಪಿ ಮತ್ತು ಅದರ ಸಿದ್ಧಾಂತವು ಅಂಬೇಡ್ಕರ್ ಅವರ ಜೀವನ, ಪರಂಪರೆ ಮತ್ತು ಪಾಠಗಳ ಬಗ್ಗೆ ಹೊಂದಿರುವ ಆಳವಾದ ತಿರಸ್ಕಾರವನ್ನು ಬಹಿರಂಗಪಡಿಸುತ್ತದೆ ಎಂದು ಆರೋಪಿಸುತ್ತದೆ ಡಿವೈಎಫ್‌ಐ ಅಧ್ಯಕ್ಷರಾದ ಲವಿತ್ರ ವಸ್ತ್ರದ್ ಬಸವರಾಜ ಪೂಜಾರ ತಿಳಿಸಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಕೇವಲ ಹೆಸರಲ್ಲ; ಅವರು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಐಕಾನ್ ಆಗಿದ್ದಾರೆ. ಆಧುನಿಕ ಭಾರತವನ್ನು ನಿರ್ಮಿಸಲು ಅವರು ನೀಡಿದ ಕೊಡುಗೆಗಳು ಸಾಟಿಯಿಲ್ಲದವು ಮತ್ತು ಅವರಿಗೆ ಮಾಡುವ ಯಾವುದೇ ಅಗೌರವವು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆದರ್ಶಗಳಿಗೆ ತೋರುವ ಅಗೌರವವಾಗುತ್ತದೆ.
ಇದನ್ನೂ ಓದಿ : ವಿಧಾನಸಭಾ ಕಲಾಪ: ವಿವಾದಾತ್ಮಕ ಹೇಳಿಕೆ ನೀಡಿದ್ದ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಗೃಹ ಸಚಿವರು ತಮ್ಮ ನಾಚಿಕೆಗೇಡಿನ ಹೇಳಿಕೆಯನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆಯಾಚಿಸಬೇಕು ಎಂದು ಡಿವೈಎಫ್‌ಐ ಆಗ್ರಹಿಸುತ್ತದೆ. ಇದಲ್ಲದೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ದುರ್ಬಲಗೊಳಿಸುವ ಇಂತಹ ಪ್ರಯತ್ನಗಳ ವಿರುದ್ಧ ಒಗ್ಗೂಡಿ ಪ್ರತಿಭಟಿಸುವಂತೆ ಡಿವೈಎಫ್ಐ ಈ ರಾಷ್ಟ್ರದ ಯುವಕರು ಮತ್ತು ನಾಗರಿಕರಿಗೆ ಕರೆ ನೀಡುತ್ತದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಬೋಧನೆಗಳನ್ನು ಎತ್ತಿಹಿಡಿಯುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಮತ್ತು ಅವರು ಪ್ರತಿಪಾದಿಸಿದ ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ವಿರೋಧಿಸಲು ಪ್ರತಿಜ್ಞೆ ಮಾಡುತ್ತೇವೆ. ಇಂತಹ ಘೋರ ಅಗೌರವದ ವಿರುದ್ಧ ಸಾಮಾಜಿಕ ನ್ಯಾಯದ ಆದರ್ಶಗಳನ್ನು ಎತ್ತಿಹಿಡಿಯಲು ಮತ್ತು ಸಂವಿಧಾನವನ್ನು ರಕ್ಷಿಸಲು ಡಿವೈಎಫ್‌ಐ ಸದಾ ಬದ್ಧವಾಗಿದೆ. ಅಮಿತ್ ಶಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತ ಅಗೌರವದ ಹೇಳಿಕೆಯನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆಯಾಚಿಸದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸುತ್ತದೆ ಎಂದು ಹೇಳಿದರು.
ಇದನ್ನೂ ನೋಡಿ : ಅಂಬೇಡ್ಕರ್ ಕುರಿತ ಹೇಳಿಕೆ | ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ Janashakthi Media