ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನೂ ದೇಶದ್ರೋಹವೆಸಗಿದ ಆರೋಪದಲ್ಲಿ ಬಂಧಿಸಲಾಯಿತು. ದಿಶಾಳಿಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಜಾಮೀನು ನೀಡಿದೆ. ಆಗ ನ್ಯಾಯಾಧೀಶರು ಹೇಳಿದ ಕೆಲವು ಮಾತುಗಳು ಬಹಳ ಮಹತ್ವದ್ದಾಗಿವೆ. ಮಂಗಳೂರಿನ ವಕೀಲರಾದ ಪುನೀತ್ ಅಪ್ಪು ನ್ಯಾಯಾಲಯದ ಆದೇಶವನ್ನು ಅನುವಾದಿಸಿದ್ದಾರೆ.
ದಿಶಾ ರವಿಯ ಮೇಲೆ ಆರೋಪಿಸಲಾದ ಅಪರಾಧಿಕ ಕಲಂಗಳ ವ್ಯಾಖ್ಯಾನ ಮತ್ತು ವಿವರಣೆ
124-ಎ. ರಾಜದ್ರೋಹ (Sedition):
ಯಾವನೇ ವ್ಯಕ್ತಿಯು ಆಡಿದ ಮಾತುಗಳಿಂದ ಅಥವಾ ಬರೆದ ಶಬ್ದಗಳಿಂದ ಅಥವಾ ಸಂಜ್ಞೆಗಳಿಂದ ಅಥವಾ ದೃಶ್ಯ ನಿರೂಪಣೆಯಿಂದ ಅಥವ ಅನ್ಯತಾ ಭಾರತದಲ್ಲಿ ವಿಧಿಪ್ರಕಾರವಾಗಿ ಸ್ಥಾಪಿತವಾದ ಸರ್ಕಾರದ ವಿರುದ್ಧ ದ್ವೇಷವನ್ನು ಅಥವಾ ತಿರಸ್ಕಾರವನ್ನು ಉಂಟು ಮಾಡಿದರೆ ಅಥವಾ ಉಂಟು ಮಾಡಲು ಪ್ರಯತ್ನಿಸಿದರೆ, ಅಥವಾ ಅವಿಶ್ವಾಸವನ್ನು ಉದ್ರೇಕಿಸಿದರೆ ಅಥವಾ ಉದ್ರೇಕಿಸಲು ಪ್ರಯತ್ನಿಸಿದರೆ, ಅವನು ಆಜೀವ ಕಾರಾವಾಸದಿಂದ ದಂಡಿತನಾಗತಕ್ಕದ್ದು ಮತ್ತು ಆ ದಂಡನೆಗೆ ಜುಲ್ಮಾನೆಯನ್ನು ಸೇರಿಸಬಹುದು ಅಥವಾ ಮೂರು ವರ್ಷಗಳ ಕಾರಾವಾಸದಿಂದ ದಂಡಿತನಾಗತಕ್ಕದ್ದು ಮತ್ತು ಆ ದಂಡನೆಗೆ ಜುಲ್ಮಾನೆಯನ್ನೂ ಸೇರಿಸಬಹುದು ಅಥವಾ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು
ವಿವರಣೆ-1 (Explanation-1):
“ಅವಿಶ್ವಾಸ” ಎಂಬ ಪದಾವಳಿಯು ರಾಜದ್ರೋಹವನ್ನು ಮತ್ತು ಎಲ್ಲ ದ್ವೇಷ ಭಾವನೆಗಳನ್ನು ಒಳಗೊಳ್ಳುತ್ತದೆ.
ವಿವರಣೆ-2 (Explanation-2):
ಸರ್ಕಾರವು ಕೈಕೊಂಡ ಕ್ರಮಗಳನ್ನು ದ್ವೇಷ, ತಿರಸ್ಕಾರ ಅಥವಾ ಅವಿಶ್ವಾಸ ಇವುಗಳನ್ನು ಉದ್ರೇಕಿಸದೆ ಅಥವಾ ಉದ್ರೇಕಿಸುವ ಪ್ರಯತ್ನ ಮಾಡದೆ ವಿಧಿಸಮ್ಮತ ಉಪಾಯಗಳಿಂದ ಬದಲಾಯಿಸುವಂತೆ ಮಾಡುವ ಉದ್ದೇಶದಿಂದ ಅವುಗಳನ್ನು ಕುರಿತು ಅಸಮ್ಮತಿಯನ್ನು ವ್ಯಕ್ತಪಡಿಸುವ ಟೀಕೆಗಳು ಈ ಪ್ರಕರಣದ ಮೇರೆಗೆ ಅಪರಾಧವಾಗುವುದಿಲ್ಲ.
ವಿವರಣೆ-3 (Explanation-3):
ದ್ವೇಷ, ತಿರಸ್ಕಾರ ಅಥವಾ ಅವಿಶ್ವಾಸ ಇವುಗಳನ್ನು ಉದ್ರೇಕಿಸದೆ ಅಥವಾ ಉದ್ರೇಕಿಸುವ ಪ್ರಯತ್ನ ಮಾಡದೆ, ಸರ್ಕಾರವು ಕೈಗೊಂಡ ಆಡಳಿತ ಕ್ರಮಗಳನ್ನು ಅಥವಾ ಇತರ ಯಾವುದೇ ಕ್ರಮವನ್ನು ಕುರಿತು ಅಸಮ್ಮತಿಯನ್ನು ವ್ಯಕ್ತಪಡಿಸುವ ಟೀಕೆಗಳು ಈ ಪ್ರಕರಣದ ಮೇರೆಗೆ ಅಪರಾಧವಾಗುವುದಿಲ್ಲ.
153-ಎ. ವಿವಿಧ ಗುಂಪುಗಳ ಮಧ್ಯೆ, ಮತ್ತು ಮೂಲವಂಶ, ಜನ್ಮಸ್ಥಳ, ನಿವಾಸ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉಂಟು ಮಾಡುವುದು ಮತ್ತು ಸೌಹಾರ್ದತೆಗೆ ಬಾಧಕವಾಗುವ ಕೃತ್ಯಗಳನ್ನು ಮಾಡುವುದು (Promoting enmity between different groups on grounds of religion, race, place of birth, residence, language, etc., and doing acts prejudicial to maintenance, of harmony):
1) ಯಾವನೇ ವ್ಯಕ್ತಿಯು-
ಎ) ಆಡಿದ ಮಾತುಗಳಿಂದ ಇಲ್ಲವೆ ಬರೆದ ಶಬ್ದಗಳಿಂದ ಅಥವಾ ಸಂಜ್ಞೆಗಳಿಂದ ಅಥವಾ ದೃಶ್ಯ ನಿರೂಪಣೆಗಳಿಂದ ಅಥವಾ ಬೇರೆ ರೀತಿಯಲ್ಲಿ ಮತ, ಮೂಲ ವಂಶ, ಜನ್ಮ ಸ್ಥಳ, ನಿವಾಸ, ಭಾಷೆ, ಜಾತಿ ಅಥವಾ ಕೋಮು ಅಥವಾ ಇತರ ಯಾವುದೇ ಆಧಾರದ ಮೇಲೆ ವಿವಿಧ ಮತೀಯ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವೆ ಅಥವಾ ಜಾತಿಗಳ ಅಥವಾ ಕೋಮುಗಳ ನಡುವ ಅಸೌಹಾರ್ದವನ್ನು ಅಥವಾ ವೈರ, ದ್ವೇಷ ಅಥವಾ ವೈಮನಸ್ಸಿನ ಭಾವನೆಗಳನ್ನು ಹೆಚ್ಚಿಸಿದರೆ ಅಥವಾ ಹೆಚ್ಚಿಸಲು ಪ್ರಯತ್ನಿಸಿದರೆ; ಅಥವಾ
ಇದನ್ನು ಓದಿ : ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಜಾಮೀನು
ಬಿ) ವಿವಿಧ ಮತೀಯ, ಮೂಲವಂಶೀಯ; ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವಣ ಅಥವಾ ಜಾತಿ ಅಥವಾ ಕೋಮುಗಳ ನಡುವಣ ಸೌಹಾರ್ದಕ್ಕೆ ಭಾಧಕವಾಗುವ ಯಾವುದೇ ಕೃತ್ಯವನ್ನು ಮಾಡಿದರೆ, ಮತ್ತು ಅದರಿಂದ ಸಾರ್ವಜನಿಕ ನೆಮ್ಮದಿಯು ಕದಡಿದರೆ ಅಥವಾ ಕದಡುವ ಸಂಭವವಿದ್ದರೆ; ಅಥವಾ
ಸಿ) ಯಾವುದೇ ಅಂಗ ಸಾಧನೆಯನ್ನು; ಚಲನವಲನವನ್ನು ಅಥವಾ ಕವಾಯತನ್ನು ಅಥವಾ ಅಂಥದೇ ಇತರ ಚಟುವಟಿಕೆಯನ್ನು, ಅಂಥ ಚಟುವಟಿಕೆಯಲ್ಲಿ ಭಾಗವಹಿಸುವವರು ಯಾವುದೇ ಮತೀಯ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪಿನ ವಿರುದ್ಧ ಅಥವಾ ಜಾತಿಯ ಅಥವಾ ಕೋಮಿನ ವಿರುದ್ಧ ಆಪರಾಧಿಕ ಬಲವನ್ನು ಅಥವಾ ಹಿಂಸೆಯನ್ನು ಪ್ರಯೋಗಿಸತಕ್ಕುದು ಅಥವಾ ಪ್ರಯೋಗಿಸಲು ತರಬೇತಿ ಪಡೆಯತಕ್ಕುದು ಎಂಬ ಉದ್ದೇಶದಿಂದ ಅಥವಾ ಅಂಥ ಚಟುವಟಿಕೆಯಲ್ಲಿ ಭಾಗವಹಿಸುವವರು ಆಪರಾಧಿಕ ಬಲವನ್ನು ಅಥವಾ ಹಿಂಸೆಯನ್ನು ಪ್ರಯೋಗಿಸುವ ಅಥವಾ ಪ್ರಯೋಗಿಸಲು ತರಬೇತಿ ಪಡೆಯುವ ಸಂಭವವಿದೆಯೆಂದು ತಿಳಿದೂ ಸಂಘಟಿಸಿದರೆ ಅಥವಾ ಆಪರಾಧಿಕ ಬಲವನ್ನು ಅಥವಾ ಹಿಂಸೆಯನ್ನು ಪ್ರಯೋಗಿಸುವ ಉದ್ದೇಶದಿಂದ ಅಥವಾ ಅಂಥ ಚಟುವಟಿಕೆಯಲ್ಲಿ ಭಾಗವಹಿಸುವವರು ಆಪರಾಧಿಕ ಬಲವನ್ನು ಅಥವಾ ಹಿಂಸೆಯನ್ನು ಪ್ರಯೋಗಿಸುವ ಸಂಭವವಿದೆಯೆಂದು ತಿಳಿದೂ ಅಂಥ ಚಟುವಟಿಕೆಯಲ್ಲಿ ಭಾಗವಹಿಸಿದರೆ ಮತ್ತು ಅಂಥ ಚಟುವಟಿಕೆಯು ಯಾವುದೇ ಕಾರಣಕ್ಕಾಗಿ, ಅಂಥ ಮತೀಯ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪಿನವರಲ್ಲಿ ಅಥವಾ ಜಾತಿ ಅಥವಾ ಕೋಮಿನ ಜನರಲ್ಲಿ ಭಯವನ್ನು ಅಥವಾ ಗಾಬರಿಯನ್ನು ಅಥವಾ ಅಭದ್ರತೆಯ ಭಾವನೆಯನ್ನು ಉಂಟುಮಾಡಿದರೆ, ಅಥವಾ ಉಂಟು ಮಾಡುವ ಸಂಭವವಿದ್ದರೆ-
ಅವನು ಮೂರು ವರ್ಷಗಳ ಅವಧಿಯವರೆಗಿನ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕುದು.
ಪೂಜಾಸ್ಥಳ ಮುಂತಾದ ಎಡೆಗಳಲ್ಲಿ ಮಾಡಲಾದ ಅಪರಾಧ (Offence committed in place of worship etc.):
2) ಯಾವನೇ ವ್ಯಕ್ತಿಯು ಯಾವುದೇ ಪೂಜಾಸ್ಥಳದಲ್ಲಿ ಅಥವಾ ಮತೀಯ ಪೂಜೆಯನ್ನು ಅಥವಾ ಮತೀಯ ಕರ್ಮಗಳನ್ನು ನಡೆಸುವುದರಲ್ಲಿ ನಿರತವಾದ ಯಾವುದೇ ಕೂಟದಲ್ಲಿ (1)ನೇ ಒಳಪ್ರಕರಣದಲ್ಲಿ ಉಲ್ಲೇಖಿಸಿದ ಅಪರಾಧವನ್ನು ಮಾಡಿದರೆ, ಅವನು ಐದು ವರ್ಷಗಳ ಅವಧಿಯವರೆಗಿನ ಕಾರಾವಾಸದಿಂದ ದಂಡಿತನಾಗತಕ್ಕುದು ಮತ್ತು ಜುಲ್ಮಾನೆಗೂ ಗುರಿಯಾಗತಕ್ಕುದು.
ಅರ್ಜಿದಾರಳು ಮತ್ತು ಸರಕಾರದ ಪರ ವಕೀಲರ ವಾದವಿವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶರು ತೀರ್ಪಿನಲ್ಲಿ ಚರ್ಚಿಸಿದ ಅಂಶಗಳು :
ದಿಶಾ ರವಿಯವರ ಮೇಲಿದ್ದ ಪ್ರಮುಖ ಆರೋಪವೆಂದರೆ ಪ್ರತ್ಯೇಕತಾವಾದಿ (ಖಲಿಸ್ಥಾನಿ) ಸಂಘಟನೆಗೆ ನಿಕಟವರ್ತಿಯಾಗಿದ್ದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಜೆ ಎಫ್) ಜೊತೆಗೆ ಸಂಪರ್ಕದಲ್ಲಿದ್ದ ಕೆಲವರು (ಅನಿತಾ ಮತ್ತು ದಹಿವಾಲ್) ರೈತ ಹೋರಾಟದ ನೆಪದಲ್ಲಿ 11-01-2021 ರಂದು ತಮ್ಮ ಸಂಘಟನೆಯ ಜೂಮ್ ಮೀಟಿಂಗೊಂದನ್ನು ನಡೆಸಿದ್ದರು ಮತ್ತು ನಿಕಿತಾ ಮತ್ತು ಶಂತನು ಭಾಗವಹಿಸಿದ್ದರು. ಇವರು ಹೋರಾಟದ ರೂಪುರೇಷೆಗಳನ್ನು ತಯಾರಿಸಲಾದ ಟೂಲ್ ಕಿಟ್ ತಯಾರಿಯಲ್ಲಿ ನೇರವಾಗಿ ಭಾಗಿಯಾಗಿದ್ದರು. ಜಾಮೀನು ಅರ್ಜಿದಾರ್ತಿ ದಿಶಾರವಿ ಈ ಟೂಲ್ ಕಿಟ್ ನ ಕೆಲವು ಅಂಶಗಳನ್ನು ಬರೆಯುವಲ್ಲಿ ಅವರಿಗೆ ಸಹಕರಿಸಿದ್ದರು ಎಂಬ ಆರೋಪದಲ್ಲಿ ದಿಶಾ ರವಿಯವರನ್ನು ಬಂಧಿಸಲಾಗಿತ್ತು. “ನೀವು ಚಂದಾ ಹಣವೆತ್ತಲು ಡಕಾಯಿತರ ಬಳಿ ಸಾಗುವಂತಿಲ್ಲ ” ಎಂಬುದು ಸರಕಾರದ ಪರ ವಕೀಲರ ಪ್ರಮುಖ ವಾದವಾಗಿತ್ತು. ಅಂದರೆ ಈ ಅರ್ಜಿದಾರಳು ಸದ್ರಿ ಪಿ ಜೆ ಎಫ್ ಸಂಘಟನೆಯ ಜೊತೆ ಸೇರಿ ಪ್ರತ್ಯೇಕತಾವಾದಿಗಳಿಗೆ ಸಹಕರಿಸಿದ್ದರು ಎಂಬುದು ಪ್ರಮುಖ ಆರೋಪವಾಗಿದೆ.
ಪಿಜೆ ಎಫ್ ಒಂದು ನಿಷೇಧಿತ ಸಂಘಟನೆಯಾಗಿಲ್ಲ ಮತ್ತು ಧಲಿವಾಲ ಮತ್ತು ಅನಿತಾ ಲಾಲ್ ಎಂಬವರ ಮೇಲೆ ಯಾವುದೇ ಪೂರ್ವಾರೋಪಗಳೂ ಇರಲಿಲ್ಲ ಎಂಬುದನ್ನು ಸರಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಒಪ್ಪಿದ್ದಾರೆ. ದಿಶಾ ರವಿ ಮತ್ತು ಧಲಿವಾಲ್ – ಅನಿತಾಲಾಲ್ ನಡುವೆ ನೇರ ಸಂಪರ್ಕವಿತ್ತು ಎಂಬುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಅರ್ಜಿದಾರ್ತಿ/ಆರೋಪಿ ದಿಶಾ ರವಿಯವರ 26-01-2021 ಹಿಂಸಾಚಾರಕ್ಕೆ ಕರೆ ನೀಡಿದುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ.
” ಒಬ್ಬ ವ್ಯಕ್ತಿಯು ಸಂಶಯಾಸ್ಪದ ವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿದ್ದ ಕೂಡಲೇ ಆ ವ್ಯಕ್ತಿಯ ಎಲ್ಲಾ ಚಲನವಲನಗಳನ್ನು ಸಂಶಯಿಸಬೇಕಾದುದಿಲ್ಲ. ಎಲ್ಲಿಯವರೆಗೆ ವ್ಯಕ್ತಿಯ ನಡೆಯು ಪ್ರಜ್ಞಾಪೂರ್ವಕವಾಗಿ ಕಾನೂನಿನ ನಾಲ್ಕು ಪರಿಧಿಗಳ ನಡುವೆ ನ್ಯಾಯಯುತವಾಗಿರುತ್ತದೋ ಅಲ್ಲಿಯವರೆಗೆ ಆತ ಸಂಶಯಾಸ್ಪದ ನಡವಳಿಕೆಗಳ ಜನರೊಂದಿಗೆ ಸಂಪರ್ಕದಲ್ಲಿದ್ದರೂ ಆತನ ಮೇಲೆ ಆ ಜನರ ಕಳಂಕವನ್ನು ಆರೋಪಿಸಲಾಗದು. 26- 01-2021ರ ಹಿಂಸಾಚಾರದಲ್ಲಿ ಅರ್ಜಿದಾರ್ತಿ ಮತ್ತು ಪಿಜೆ ಎಫ್ ಸಂಘಟನೆಯ ಕೈವಾಡದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳೂ ಈ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿಲ್ಲ. ಅರ್ಜಿದಾರ್ತಿಯ ಒಂದು ಶಾಸನವನ್ನು ವಿರೋಧಿಸುವ ಸಮಾನ ವೇದಿಕೆಯನ್ನು ಸಂಘಟಿಸಿದವರ ಜೊತೆಗೆ ಸೇರಿದ್ದಳು ಎಂಬ ಏಕೈಕ ಕಾರಣಕ್ಕೆ ಕೇವಲ ‘ಊಹಾಪೋಹಗಳ’ ಆಧಾರದಲ್ಲಿ ಆಕೆ ಹಿಂಸಾಚಾರಕ್ಕೆ ಕರೆ ನೀಡಿದ್ದಳು ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿದ್ದಳು ಎಂದು ಆರೋಪಿಸುವುದು ಸಾಧುವಾದುದಲ್ಲ ” ಎಂಬುದು ನ್ಯಾಯಾಲಯದ ಸ್ಪಷ್ಟ ಅಭಿಮತವಾಗಿದೆ.
ಕೇವಲ ದೇಶದ ಯೋಜನೆಗಳಿಗೆ ಭಿನ್ನಮತ ವ್ಯಕ್ತಪಡಿಸಿದರೆಂಬ ಕಾರಣಕ್ಕೆ ಪ್ರಜೆಗಳನ್ನು ಬಂಧಿಸಿ ಜೈಲಿಗೆ ತಳ್ಳುವಂತಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯವು ಜಾಗತಿಕ ಒಮ್ಮತವನ್ನು ಅಪೇಕ್ಷಿಸುವ ಸ್ವಾತಂತ್ರ್ಯವನ್ನೂ ಒಳಗೊಂಡಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವು ಭೌಗೋಳಿಕ ರೇಖೆಗಳಿಂದ ಬಂಧಿಯಾಗಿಲ್ಲ.
ಯಾವುದೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳು ಸರಕಾರದ ಪ್ರಜ್ಞಾಪಾಲಕರು ಕೇವಲ ದೇಶದ ಯೋಜನೆಗಳಿಗೆ ಭಿನ್ನಮತ ವ್ಯಕ್ತಪಡಿಸಿದರೆಂಬ ಕಾರಣಕ್ಕೆ ಪ್ರಜೆಗಳನ್ನು ಬಂಧಿಸಿ ಜೈಲಿಗೆ ತಳ್ಳುವಂತಿಲ್ಲ
ಸರಕಾರದ ಘಾಸಿಗೊಂಡ ದುರಭಿಮಾನವನ್ನು ತಣಿಸಲು ‘ದೇಶದ್ರೋಹ’ ಪ್ರಕರಣ ದಾಖಲಿಸುವುದು ಸರಿಯಾದ ಕ್ರಮವಲ್ಲ
‘ಅನೋ ಭದ್ರಾಃ ಕೃತವೋ ಯಂತು ವಿಶ್ವತಃ ‘ -ನಮ್ಮ ಐದುಸಾವಿರ ವರ್ಷಗಳ ಇತಿಹಾಸದಲ್ಲಿ ಋಗ್ವೇದದ ವೇದವಾಕ್ಯದಂತೆ ಈ ದೇಶವು ಎಲ್ಲಾ ರೀತಿಯ ಭಿನ್ನ ಚಿಂತನೆಗಳನ್ನು ಸ್ವೀಕರಿಸಿದೆ
ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಿ ಟೂಲ್ ಕಿಟ್ ದಾಖಲೆಯ ಸಂಪಾದನೆ ಮಾಡಿರುವುದನ್ನು ಅಪರಾಧವೆಂದು ಹೇಳಲು ಸಾಧ್ಯವಿಲ್ಲ.