ದಿಶಾ ರವಿ ಕಸ್ಟಡಿಗೆ ವ್ಯಾಪಕ ಅಸಮ್ಮತಿ “ಟೂಲ್‍ ಕಿಟ್‍’ ನಲ್ಲಿ ಅಪರಾಧವೆನಿಸುವ ಒಂದು ಸಾಲನ್ನು ತೋರಿಸಬಲ್ಲಿರಾ?”

ರೈತರ ಪ್ರತಿಭಟನೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮದಲ್ಲಿ “ಟೂಲ್ ಕಿಟ್‍’’ ರಚಿಸುವಲ್ಲಿ ಮತ್ತು ಹಂಚಿಕೊಳ್ಳುವಲ್ಲಿ ಭಾಗಿಯಾಗಿದ್ದಕ್ಕಾಗಿ 21 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸುವ ದಿಲ್ಲಿ ನ್ಯಾಯಾಲಯದ ನಿರ್ಧಾರದ ಬಗ್ಗೆ ಕಾನೂನು ತಜ್ಞರು ಪ್ರಶ್ನೆಗಳನ್ನು ಎತ್ತಿದ್ದಾರೆ. “ಪರಿಸರ ನ್ಯಾಯದ ಮೈತ್ರಿಕೂಟ” (ಸಿ.ಇ.ಜೆ.) ಕೂಡಾ ಇದನ್ನು ಖಂಡಿಸಿದೆ. ಹಿರಿಯ  ವಕೀಲೆ ರೆಬೆಕಾ ಜಾನ್, ಮ್ಯಾಜಿಸ್ಟ್ರೇಟ್ ಆದೇಶವು ಆಘಾತಕಾರೀ ರೀತಿಯಲ್ಲಿ ನ್ಯಾಯಾಂಗ ಕರ್ತವ್ಯಗಳನ್ನು ಕೈಬಿಟ್ಟಿದೆ ಎಂದು ಹೇಳಿದ್ದಾರೆ.

 

ಈ ನಡುವೆ ದಿಲ್ಲಿ ಪೋಲೀಸ್ ತಮ್ಮ ವಿಚಾರಣೆಗೆ ಮುಂಬೈಯ ವಕೀಲರಾದ ನಿಕಿತಾ ಜೇಕಬ್‍ ಮತ್ತೊಬ್ಬ ಹವಾಮಾನ ನ್ಯಾಯ ಕಾರ್ಯಕರ್ತ ಶಂತನು ಎಂಬವರ ವಿರುದ್ಧ ಜಾಮೀನುರಹಿತ ವಾರಂಟ್‍ ಪಡೆದಿದ್ದಾರೆ ಎಂದು ವರದಿಯಾಗಿದೆ.

ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‍ ಬರ್ಗ್ ಹಂಚಿಕೊಂಡ. ಈ “ಟೂಲ್ ಕಿಟ್‍” ಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸ್‍ ನ ಸೈಬರ್ ಸೆಲ್ ಫೆಬ್ರುವರಿ 14ರಂದು ದಿಶಾ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆಕೆಯ ಏಳು ದಿನಗಳ ಕಸ್ಟಡಿಗೆ ಕೋರಿತ್ತು. ಕರ್ತವ್ಯದಲ್ಲಿದ್ದ ದಿಲ್ಲಿ ಪಾಟಿಯಾಲ ಹೌಸ್ ಡ್ಯೂಟಿ ಮ್ಯಾಜಿಸ್ಟ್ರೇಟ್ ಐದು ದಿನಗಳ ಕಾಲ ಅವಳನ್ನು ಪ್ರಶ್ನಿಸಲು ಪೊಲೀಸರಿಗೆ ಅವಕಾಶ ನೀಡಿದರು. ವಿಚಾರಣೆಯ ಸಮಯದಲ್ಲಿ, ದಿಶಾ ತಾನು ಟೂಲ್ ಕಿಟ್‌ನ ಎರಡು ಸಾಲುಗಳನ್ನು ಮಾತ್ರ ಎಡಿಟ್‍ ಮಾಡಿದ್ದು,  ರೈತರ ಪ್ರತಿಭಟನೆಯನ್ನು ಬೆಂಬಲಿಸ ಬಯಸುತ್ತೇನೆ ಎಂದು ಹೇಳಿರುವುದಾಗಿ ವರದಿಯಾಗಿದೆ.

“ನ್ಯಾಯಾಧೀಶರು ತಮ್ಮ ರಿಮಾಂಡ್ ಕರ್ತವ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಂವಿಧಾನದ 22 ನೇ ಪರಿಚ್ಛೇದದ ಆದೇಶವನ್ನು ಸೂಕ್ಷ್ಮವಾಗಿ ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ವಿಚಾರಣೆಯ ಸಮಯದಲ್ಲಿ ಆರೋಪಿಗಳನ್ನು ವಕೀಲರು ಪ್ರತಿನಿಧಿಸದಿದ್ದರೆ, ಮ್ಯಾಜಿಸ್ಟ್ರೇಟ್ ಅವರ ಸಲಹೆ ಬರುವವರೆಗೆ ಅಥವಾ ಪರ್ಯಾಯವಾಗಿ, ಅವರಿಗೆ ಕಾನೂನು ನೆರವು ನೀಡುವವರೆಗೂ ಕಾಯಬೇಕಾಗಿತ್ತು ”ಎಂದು ವಕೀಲೆ ರೆಬೆಕಾ ಜಾನ್ ಹೇಳುತ್ತಾರೆ.

ಇದನ್ನು ಓದಿ : ಗ್ರೇಟಾ ‘ಟೂಲ್ ಕಿಟ್’ವಿವಾದ: ದೆಹಲಿ ಪೋಲೀಸರಿಂದ ಬೆಂಗಳೂರಿನ ಯುವತಿಯ ಬಂಧನ

ಬೆಂಗಳೂರು ನ್ಯಾಯಾಲಯಗಳಿಂದ ಟ್ರಾನ್ಸಿಟ್‍ (ಕರೆದೊಯ್ಯುವ) ರಿಮಾಂಡ್ ಇಲ್ಲದೆ ದಿಶಾಳನ್ನು ಬೆಂಗಳೂರಿನಿಂದ ದಿಲ್ಲಿಯಲ್ಲಿ ಏಕೆ ಹಾಜರುಪಡಿಸಲಾಗಿದೆ ಎಂದು ಡ್ಯೂಟಿ ಮ್ಯಾಜಿಸ್ಟ್ರೇಟ್ ದಿಲ್ಲಿ ಪೋಲೀಸ್‍ನ ವಿಶೇಷ ಸೆಲ್‍ ಅನ್ನು ಕೇಳಿದರೇ? ಎಂದು ಪ್ರಶ್ನಿಸಿರುವ ರೆಬೆಕಾ ಜಾನ್, ಭಾನುವಾರದಂದು ಕರ್ತವ್ಯ ನೀಭಾಯಿಸುವ ಡ್ಯೂಟಿ ಮ್ಯಾಜಿಸ್ಟ್ರೇಟ್ ಹೆಚ್ಚೆಂದರೆ ಒಂದು ದಿನಕ್ಕೆ ರಿಮ್ಯಾಂಡ್‍ ಕೊಟ್ಟು ಸಾಮಾನ್ಯ ನ್ಯಾಯಾಲಯವು ಮರುದಿನ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಮಾಡಬೇಕು, ಆರೋಪಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಬಾರದು ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಇನ್ನೊಬ್ಬ  ಹಿರಿಯ ವಕೀಲ ಸೌರಭ್ ಕಿರ್ಪಾಲ್ ಮಾತೆತ್ತಿದರೆ  ಜನಗಳನ್ನು ಬಂಧಿಸುವ ಈ ಪರಿ ಏಕೆ ಎಂದು ಕೇಳುತ್ತಾರೆ.  “ಯಾರಾದರೂ ತಪ್ಪಿತಸ್ಥರಾಗಿದ್ದರೆ, ಅವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಿ. ವಿಚಾರಣೆಗೆ ಮುಂಚಿನ ಬಂಧನ (ಶಿಕ್ಷೆಗೆ ಬದಲಿಯಾಗಿ) ತನಿಖೆ ನಡೆಸುವ ಪೊಲೀಸರ ಜವಾಬ್ದಾರಿಯನ್ನು ಕೈಬಿಟ್ಟಂತಾಗುತ್ತದೆ. ಇದು ನಾಗರಿಕರಾಗಿ ನಮ್ಮನ್ನು ನಿಶ್ಚೇಷ್ಟಿತಗೊಳಿಸುತ್ತದೆ ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಭೂಷಣ್

ಸುಪ್ರೀಂ ಕೋರ್ಟ್‌ನ ಇನ್ನೊಬ್ಬರು ಪ್ರಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರು ದಿಶಾ ಬಂಧನವನ್ನು “ಕಾನೂನುಬಾಹಿರ ಮತ್ತು ದರುದ್ದೇಶದ್ದು” ಎಂದಿದ್ದಾರೆ. ಅವರು ಸಂಚಾಲಕರಾಗಿರುವ ಮತ್ತು ನಿವೃತ್ತ ನ್ಯಾಯಮೂರ್ತಿ ಪಿ ಬಿ ಸಾವಂತ್, ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್ ಮತ್ತಿತರರು ಪೋಷಕರಾಗಿರುವ “ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣೆ  ಅಭಿಯಾನ” ಕೂಡ ತನ್ನ ಹೇಳಿಕೆಯಲ್ಲಿ ಈ “ಬಂಧನ” ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು  ಸಂವಿಧಾನದಲ್ಲಿ ವಿಧಿಸಿರುವ ಕಾರ್ಯವಿಧಾನಗಳ ಉಲ್ಲಂಘನೆಯಾಗಿದೆ  ಎಂದು ಅಭಿಪ್ರಾಯ ಪಟ್ಟಿದೆ. “ ದಿಲ್ಲಿ ಪೊಲೀಸರ ಇಂತಹ ಕಾನೂನುಬಾಹಿರ ಕ್ರಮಗಳು ಕಾನೂನಿನ ನೆಪದಲ್ಲಿ ಅಪಹರಣವಾಗುತ್ತದೆ” ಎಂದು ಹೇಳಿಕೆ ತಿಳಿಸಿದೆ.

ಇದನ್ನು ಓದಿ : ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ನಲ್ಲಿ ಏನಿದೆ?

“ಪರಿಸರ ನ್ಯಾಯದ ಮೈತ್ರಿಕೂಟ” ಕೂಡ ಇದು “ನ್ಯಾಯಬಾಹಿರ ಅಪಹರಣವಾಗುತ್ತದೆ” ಎಂದಿದೆ.

ಡ್ಯೂಟಿ ಮ್ಯಾಜಿಸ್ಟ್ರೇಟ್ ಅವರ ಕರ್ತವ್ಯವನ್ನು ಯಾಂತ್ರಿಕ ರೀತಿಯಲ್ಲಿ  ನಿರ್ವಹಿಸಿದ್ದಾರೆ ಎಂದು ನಿರಾಸೆ ವ್ಯಕ್ತಪಡಿಸಿರುವ ಅಭಿಯಾನ,  ಇದರಿಂದ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ದಿಶಾ ರವಿಯನ್ನು ತಕ್ಷಣ ಬಿಡುಗಡೆ ಮಾಡಿ ಡ್ಯೂಟಿ ಮ್ಯಾಜಿಸ್ಟ್ರೇಟ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅದು ಕರೆ ನೀಡಿದೆ.

“ಟೂಲ್‍ ಕಿಟ್” ಎನ್ನುವುದು ಯಾವುದೇ ಪ್ರಶ್ನೆಯನ್ನು ವಿವರಿಸಲು ರಚಿಸಲಾದ ದಸ್ತಾವೇಜು. ಸಮಸ್ಯೆಯನ್ನು ಪರಿಹರಿಸಲು ಏನು ಮಾಡಬೇಕೆಂಬುದರ ಬಗ್ಗೆಯೂ ಇದು ಮಾಹಿತಿಯನ್ನು ಒದಗಿಸುತ್ತದೆ. ಇದು ಅರ್ಜಿಗಳ ಬಗ್ಗೆ ಮಾಹಿತಿ, ಪ್ರತಿಭಟನೆಗಳ ಬಗ್ಗೆ ವಿವರಗಳು ಮತ್ತು ಸಾಮೂಹಿಕ ಚಳುವಳಿಗಳನ್ನು ಒಳಗೊಂಡಿರಬಹುದು.

ವಿವಿಧ ವರದಿಗಳ ಪ್ರಕಾರ, ದಿಶಾ ರವಿ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಟೂಲ್‌ ಕಿಟ್‌ನ ಸಂಪಾದಕರಲ್ಲಿ ಒಬ್ಬರು ಮತ್ತು ಒಬ್ಬ ‘ಪ್ರಮುಖ ಪಿತೂರಿಗಾರರು’ ಎಂದು ಭಾವಿಸಿರುವ ದಿಲ್ಲಿ ಪೊಲೀಸರು, ತಾವು ಭಾರತ ಸರ್ಕಾರದ ವಿರುದ್ಧ ನಡೆದಿರುವ ಈ ಪಿತೂರಿಯ ಮತ್ತು ಖಲಿಸ್ತಾನ್ ಆಂದೋಲನಕ್ಕೆ ಸಂಬಂಧಿಸಿದಂತೆ ಆಕೆಯ ಪಾತ್ರದ ತನಿಖೆಗೆ ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಹೇಳುತ್ತಾರೆ.

ಕೊಲಿನ್ ಗೊನ್ಸಾಲ್ವೆಸ್ 

ಬೆಂಗಳೂರಿನ ಖಾಸಗಿ ಕಾಲೇಜಿನಿಂದ ಬಿ.ಬಿ.ಎ. ಪದವೀಧರರಾಗಿರುವ ದಿಶಾ ರವಿ, ಹವಾಮಾನ ನ್ಯಾಯಕ್ಕಾಗಿ  ಆಂದೋಲನ ನಡೆಸುವ ‘ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾ’ ಎಂಬ ಗುಂಪಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಎನ್ನಲಾಗಿದೆ.

 

“ಈ ಟೂಲ್‌ ಕಿಟ್‌ ನ ನಿಮ್ಮಲ್ಲಿರುವ ಯಾವುದೇ ಆವೃತ್ತಿಯಲ್ಲಿ  ಯಾವ ಸಾಲು ಒಂದು ಅಪರಾಧವಾಗುತ್ತದೆ ಎಂದು ನಮಗೆ ಹೇಳಬಲ್ಲಿರಾ?” ಎಂದು ಖಾರವಾಗಿ ಪ್ರಶ್ನಿಸಿರುವ ಹಿರಿಯ ಸುಪ್ರೀಂ ಕೋರ್ಟ್‌ ವಕೀಲ ಕೊಲಿನ್ ಗೊನ್ಸಾಲ್ವೆಸ್  ಇದು ನಾಚಿಕಗೇಡಿನ ಸಂಗತಿ, ಇಲ್ಲಿ ಯಾವ ಅಪರಾಧವೇ ನಡೆದಿಲ್ಲದಿರುವಾಗ ಹೆದರಬೇಕಾಗಿಲ್ಲ, ದೇಶದ ಯುವಜನರು ಈ ಸವಾಲನ್ನು, ಸರಕಾರೀ ಭಯೋತ್ಪಾದನೆಯನ್ನು ಎದುರಿಸಲು ಒಂದು ಅವಕಾಶವಾಗಿ ತೆಗೆದುಕೊಳ್ಳಬೇಕು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

Donate Janashakthi Media

Leave a Reply

Your email address will not be published. Required fields are marked *