ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು  ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೂ ಆತಂಕವಿಲ್ಲ; ದಿನೇಶ್‌ ಅಮೀನ್‌ಮಟ್ಟು

ಮೈಸೂರು : ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು  ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೂ ಆತಂಕವಿಲ್ಲ’ ಎಂದು  ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಸಂಘಟನೆಗಳ ಸಹಯೋಗದಲ್ಲಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ʼರಾಜ್ಯಪಾಲರ ನಡೆ ಮತ್ತು ದ್ವೇಷ ರಾಜಕಾರಣ ಒಂದು ಗಂಭೀರ ಚಿಂತನೆʼ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ʼಮುಡಾ ಹಗರಣದ ವಿಚಾರವಾಗಿ ಏನಾಗಬಹುದು. ರಾಜ್ಯಪಾಲರ ನಡೆ ಏನಾಗಿರಬಹುದು?. 2014ಕ್ಕೂ ಮೊದಲಿನ ನ್ಯಾಯಾಲಯವಾಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹೆ ಮಾಡಬಹುದಿತ್ತು. 2014ರ ನಂತರದ ನ್ಯಾಯಾಲಯದಲ್ಲಿ ಊಹೆ ಮಾಡಲು ಆಗುವುದಿಲ್ಲʼ ಎಂದರು.

ಬಿ.ಎಸ್‌.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಪ್ರಕರಣಗಳನ್ನು ವಿವರಿಸಿದ ಅವರು, ʼಯಡಿಯೂರಪ್ಪ ವಿರುದ್ಧ ಗಂಭೀರ ಆರೋಪಗಳಿದ್ದವು. ಸ್ವ ಇಚ್ಛೆಯಿಂದ ರಾಜ್ಯಪಾಲರು ಬಿಎಸ್‌ವೈಗೆ ಪತ್ರ ಬರೆದಿದ್ದರು. ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ಸ್ವೀಕರಿಸಿರಲಿಲ್ಲ. 2011ರ ಜನವರಿಯಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು ಅಕ್ಟೋಬರ್‌ ತಿಂಗಳಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಲಾಯಿತುʼ ಎಂದು ತಿಳಿಸಿದರು.

ಇದನ್ನು ಓದಿ : ಸಂಚಾರಿ ನಿಯಮ ಉಲ್ಲಂಘನೆ| ಒಂದೇ ದಿನದಲ್ಲಿ ದಾಖಲಾಗಿದ್ದು 909 ಪ್ರಕರಣ, 4.54 ಲಕ್ಷ ರೂ. ದಂಡ ಸಂಗ್ರಹ

ಸಿದ್ದರಾಮಯ್ಯ ಅವರ ಮುಡಾ ಪ್ರಕರಣದಲ್ಲಿ ಟಿ.ಜೆ.ಅಬ್ರಹಾಂ ಮೊದಲು ರಾಜ್ಯಪಾಲರಿಗೆ ದೂರು ಕೊಟ್ಟು, ಅನಂತರ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾದ ರಾಜ್ಯಪಾಲರು ಇವರ ವಿರುದ್ಧವಾಗಿ ತೀರ್ಮಾನ ಮಾಡಬಹುದು ಎಂದರು.

“ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಬಹುದೆಂಬ ದುಷ್ಟ ಆಲೋಚನೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರಿಗೆ ಇರಬಹುದು. ಆದರೆ ಭಾರತದಲ್ಲಿ ಕಾಡಿನ ನ್ಯಾಯ ಇಲ್ಲ. ಸಂವಿಧಾನದ ನ್ಯಾಯ ಇದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಮೇಲೆ ನಮಗೆ ಭರವಸೆ ಇದ್ದು, ಆತಂಕಗೊಳ್ಳುವ ಅಗತ್ಯವಿಲ್ಲ” ಎಂದು ನುಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಅವರ ಎದುರು ನಿಲ್ಲುವ ಯೋಗ್ಯತೆ ಇಲ್ಲ ಎಂದರು.

ಚಿಂತಕ ಜಾಣಗೆರೆ ವೆಂಕಟರಾಮಯ್ಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಬಿಜೆಪಿ, ಜೆಡಿಎಸ್‌ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ ಮೊದಲನೇ ಬಾರಿ ಯಶಸ್ವಿಯಾಗಿ 5 ವರ್ಷಗಳನ್ನು ಪೂರೈಸಿ 2ನೇ ಬಾರಿ ಮುಖ್ಯಮಂತ್ರಿಯಾದದ್ದನ್ನು ಸಹಿಸದೇ ದ್ವೇಷ, ಅಸೂಯೆ, ಸಂಕಟಗಳಂತಹ ವ್ಯಸನಗಳೇ ಮೂಲ ಕಾರಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ವಹಿಸಿದ್ದರು.

ಚಿಂತಕ ಬಂಜಗೆರೆಗೆ ಜಯಪ್ರಕಾಶ್‌, ಸಾಹಿತಿ ಕೆ.ಷರೀಫಾ, ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ, ವಿಶ್ರಾಂತ ಕುಲಪತಿ ಜಾಪೆಟ್‌ ವಿಷಯ ಮಂಡಿಸಿದರು. ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಚುಂಚನಹಳ್ಳಿ ಮಲ್ಲೇಶ್‌, ಯೋಗೇಶ್‌ ಉಪ್ಪಾರ್‌, ಕಲೀಂ, ಕೆ.ಎಸ್‌. ಶಿವರಾಮ್‌ ಮುಂತಾದವರಿದ್ದರು.

ಇದನ್ನು ನೋಡಿ : ಬಿಬಿಎಂಪಿ ಮಾರ್ಷಲ್‌ ಗಳ ಗೋಳು ಕೇಳುವುದಾ ಬಿಬಿಎಂಪಿ?Janashakthi Media

 

Donate Janashakthi Media

Leave a Reply

Your email address will not be published. Required fields are marked *