ಬೆಂಗಳೂರು;ಜ, 25 : ರಾಜ್ಯ ರಾಜಕಾರಣದಲ್ಲಿ ಸಚಿವರಿಗೆ ಖಾತೆ ಹಂಚಿಕೆ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸಿಎಂಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಳೆದ ವಾರವಷ್ಟೇ ಬಯಸಿದ ಖಾತೆ ಸಿಕ್ಕಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್, ಗೋಪಾಲಯ್ಯ, ನಾರಾಯಣ ಗೌಡರು ಸಿಎಂ ವಿರುದ್ದ ಮುನಿಸಿಕೊಂಡಿದ್ದರು. ಈ ಮೂರು ಸಚಿವರು ಅಸಮಾಧಾನ ಶಮನ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುಸ್ತು ಆಗಿದ್ದರು. ಅಲ್ಲದೆ ಅಸಮಾಧಾನಿತರ ಜೊತೆ ಸಂಧಾನ ಸಭೆ ನಡೆಸಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಸಿಎಂ ಕಚೇರಿಯಿಂದ ರಾಜಭವನಕ್ಕೆ ಸಚಿವರ ಪರಿಷ್ಕೃತ ಪಟ್ಟಿ ರವಾನೆ ಆಗಿದೆ ಎಂದು ಹೇಳಲಾಗುತ್ತಿದೆ.
ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಸುಧಾಕರ ಅವರಿಂದ ಹಿಂಪಡೆದು ಅಸಮಾಧಾನದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದ ರೀತಿ ಆಗಿತ್ತು. ಹಾಗಾಗಿ ಸಚಿವ ಸುಧಾಕರ ತಮ್ಮ ಮಿತ್ರಮಂಡಳಿಯ ಗುಪ್ತ ಸಭೆ ನಡೆಸಿದರು. ಜೊತೆಗೆ ಸಚಿವ ಸಂಪುಟಕ್ಕೆ ಗೈರು ಆಗಿದ್ದರು. ಆದ್ದರಿಂದಲೇ ವೈದ್ಯಕೀಯ ಶಿಕ್ಷಣ ಖಾತೆ ಮತ್ತೆ ಸುಧಾಕರಗೆ ಕೊಡಲು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸಚಿವ ಮಾಧುಸ್ವಾಮಿ ಅವರಿಗೆ ಪ್ರವಾಸೋದ್ಯಮ ಖಾತೆ ಹಾಗೂ ಸಚಿವ ಆನಂದ ಸಿಂಗ್ ಗೆ ಪರಿಸರ ಇಲಾಖೆ ನೀಡಿ ಅಸಮಾಧಾನ ಶಮನಗೊಳಿಸುವ ಚಿಂತನೆಯಲ್ಲಿ ಸಿಎಂ ಇದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಬಿ.ಎಸ್ ವೈ ಚಿಂತನೆ ನಡೆಸಿದ್ದು ಮಾಧ್ಯಮದಲ್ಲಿ ಪ್ರಸಾರವಾಗಿದ್ದೆ ತಡ ಅತ್ತ ರಾಜೀನಾಮೆ ನೀಡುವ ಬೆದರಿಕೆ ಶುರುವಾಗಿದೆ.
ಸಚಿವ ಸಂಪುಟ ವಿಸ್ತರಣೆ ಆದದಿನದಿಂದ ಖಾತೆಗಳು ಬದಲಾಗುತ್ತಲೇ ಇವೆ ಎಂದು ಮಾಧುಸ್ವಾಮಿ ಹಾಗೂ ಆನಂದ ಸಿಂಗ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಈ ಪ್ರಭಾವಿ ನಾಯಕ ರಾಜೀನಾಮೆ ವಿಚಾರ ಸದ್ಯ ಬಿಜೆಪಿ ಪಡಸಾಲೆಯಲ್ಲಿ ಗೂಸು ಗೂಸು ನಡೆಯಲು ಕಾರಣವಾಗಿದೆ. ಈ ನಡುವೆ ಸಿಎಂ ಕಚೇರಿಯಿಂದ ರಾಜಭವನಕ್ಕೆ ಸಚಿವರ ಪರಿಷ್ಕೃತ ಪಟ್ಟಿ ರವಾನೆ ಆಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪರಷ್ಕೃತ ಪಟ್ಟಿಗೆ ರಾಜ್ಯಪಾಲರ ಅಂಕಿತ ಬಿದ್ದರೆ ಖಾತೆ ಕ್ಯಾತೆ ವಿಚಾರಕ್ಕೆ ಸಿಎಂ ತಿಲಾಂಜಲಿ ಇಟ್ಟಂತೆ. ಆದರೂ ಬಿಜೆಪಿಯಲ್ಲಿ ಬುಗಿಲೆದ್ದ ಅಸಮಾಧಾನವನ್ನು ಸಿಎಂ ನಿಭಾಯಿಸುತ್ತಾರೆ ಎಂಬುದೆ ಕುತೂಹಲ ಮೂಡಿಸಿದೆ.