ಬೆಂಗಳೂರು : ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ತಲುಪಿಸುವ ಡಿಜಿಟಲ್ ಜಾಹೀರಾತು ವ್ಯವಸ್ಥೆ ಬಳಸಿಕೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತೀರ್ಮಾನಿಸಿದ್ದು, ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಅರ್ಹತೆ ಪಡೆಯಲು ಡಿಜಿಟಲ್ ಘಟಕಗಳು ಕಡ್ಡಾಯವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾಯಿಸಿರಬೇಕು ಎಂದು ಹೇಳಿದೆ.
ಈ ಕುರಿತಂತೆ ಕನ್ನಡ, ಸಂಸ್ಕೃತಿ ಮತ್ತು ವರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳು ಹೆಚ್ಚು ಪ್ರಚಲಿತವಾಗಿದ್ದು, ಡಿಜಿಟಲ್ ಮಾಧ್ಯಮಗಳಲ್ಲಿ ಸರ್ಕಾರದ ಜಾಹೀರಾತು ಪ್ರಕಟಿತವಾದಲ್ಲಿ ಸರ್ಕಾರದ ಜಾಹೀರಾತುಗಳು ಯುವ ಸಮೂಹವನ್ನು ತಲುಪಲು ಸಹಕಾರಿಯಾಗುವುದರಿಂದ ಹಾಗೂ ಡಿಜಿಟಲ್ ಮಾಧ್ಯಮಗಳು ಇತ್ತೀಚೆಗೆ ಸರ್ಕಾರದ ಜಾಹೀರಾತು ಕೋರಿ ಇಲಾಖೆಗೆ ಮನವಿಗಳನ್ನು ಸಲ್ಲಿಸುತ್ತಿದ್ದು, ಡಿಜಿಟಲ್ ಮಾಧ್ಯಮಗಳಿಗೆ ಇಲಾಖೆಯಿಂದ ಜಾಹೀರಾತು ದರ ನಿಗದಿಯಾಗಿಲ್ಲದ ಕಾರಣ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ, ಪ್ರಸ್ತುತ ಕೇಂದ್ರ ಸರ್ಕಾರದ ಡಿ.ಎ.ವಿ.ಪಿ. ಸಿದ್ಧಪಡಿಸಿರುವ ನೀತಿಯನ್ನು ಪರಿಗಣನೆಗೆ ತೆಗೆದುಕೊಂಡು ಅದೇ ಮಾದರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಡಿಜಿಟಲ್ ಪಾಲಿಸಿಯನ್ನು ಸಿದ್ಧಪಡಿಸಿ ಸಲ್ಲಿಸುತ್ತಾ, ಸದರಿ ನಿಯಮಗಳಿಗೆ ಸರ್ಕಾರದ ಅನುಮೋದನೆ ನೀಡಿ ಆದೇಶ ಹೊರಡಿಸುವಂತೆ ಕೋರಲಾಗಿತ್ತು.
ಅರ್ಹ ಡಿಜಿಟಲ್ ಮಾಧ್ಯಮ ಘಟಕಗಳು ಇಂತಿವೆ: ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳು: ಗೂಗಲ್, ಯುಟ್ಯೂಬ್, ಮೆಟಾ (ಫೇಸ್ ಬುಕ್) ಇನ್ಸ್ಟಾಗ್ರಾಂ, ವಾಟ್ಸಾಪ್ ಬಿಸಿನೆಸ್, ವಾಟ್ಸಾಪ್ ಚಾನೆಲ್ , ಗೂಗಲ್, ಬಿಂಗ್ ಮತ್ತಿತರ ಸರ್ಜ್ ಇಂಜಿನ್ ಗಳು, ಎಕ್ಸ್, ಫೇಸ್ ಬುಕ್, ವಾಟ್ಸಾಪ್, ಸ್ನ್ಯಾಪ್ ಚಾಟ್ ಮತ್ತಿತರ ಸಾಮಾಜಿಕ ಜಾಲತಾಣಗಳು, ಪೇಟಿಎಂ, ಫೋನ್ ಪೇ , ಜಿಪೇಯಂತಹ ಫಿನ್ ಟೆಕ್ ಪ್ಲಾಟ್ ಫಾರ್ಮ್, ವೆಬ್ ಪೋರ್ಟಲ್, ನ್ಯೂಸ್ ಅಗ್ರಿಗೇಟರ್, ಕಾಲ್ ಸೆಂಟರ್, ಚಾಟ್ ಬಾಟ್, ಇನ್ ಫ್ಲ್ಯುಯನ್ಸರ್ ಸೇರಿದ್ದಾರೆ.
ದರ: ಪ್ರತಿ ಜಾಹೀರಾತು ಪ್ರಕಾರಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿಗದಿಪಡಿಸಿದಂತೆ ದರಗಳು ಇರಬೇಕು. ದರಗಳು ಬದಲಾವಣೆಗೊಳಗಾಗುವ ಸ್ವರೂಪದ್ದಾಗಿದ್ದರೆ ಡಿಎವಿಪಿ ದರಗಳನ್ನು ಮೀರದಂತೆ ಸ್ವತಂತ್ರವಾಗಿ ದರ ನಿಗದಿಪಡಿಸುವ ವಿಧಾನ ಅನುಸರಿಸಬಹುದು.
ಡಿಜಿಟಲ್ ಜಾಹೀರಾತು ಏಜೆನ್ಸಿಗೆ ಅರ್ಹತೆ: ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್ ನಲ್ಲಿ ನೋಂದಣಿಯಾದ ಕಾನೂನುಬದ್ಧ ಸಂಘಟಿತ ಘಟಕವಾಗಿರಬೇಕು, ಎಂಪ್ಯಾನೆಲಿಂಗ್ ಸಮಯದಲ್ಲಿ ಕನಿಷ್ಠ ಎರಡು ವರ್ಷವಾಗಿರಬೇಕು, ಮಾನ್ಯವಾದ ಜಿಎಸ್ ಟಿ ನೋಂದಣಿ ಇರಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಇರಬೇಕು. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪ್ರಾವೀಣ್ಯತೆ ಇರಬೇಕು. ಡಿಜಿಟಲ್ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣದ ಕುರಿತು ಆಳವಾದ ಜ್ಞಾನವಿರಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಪಿಡಿಎಫ್ ಮೇಲೆ ಕ್ಲಿಕ್ ಮಾಡಿ