ದೇಶದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುವ ರೈತ ಸಮುದಾಯ ಅತ್ಯಂತ ನಿರ್ಲಕ್ಷಿತವೂ ಹೌದು
-ನಾ ದಿವಾಕರ
2020ರ ನವಂಬರ್ 26, ಸಂವಿಧಾನ ದಿನದಂದು ಭಾರತದ ರೈತಾಪಿ ಸಮುದಾಯವು ಹೂಡಿದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಈಗ ನಾಲ್ಕು ವರ್ಷಗಳು ಸಂದಿವೆ. 13 ತಿಂಗಳುಗಳ ಕಾಲ ನಡೆದ ಈ ರೈತಾಪಿ ಮುಷ್ಕರವು ಹಲವು ಕಾರಣಗಳಿಗಾಗಿ ಚಾರಿತ್ರಿಕ ಸ್ವರೂಪ ಪಡೆಯುತ್ತದೆ. ಕೇಂದ್ರ ಬಿಜೆಪಿ ಸರ್ಕಾರ ವಿಶ್ವಬ್ಯಾಂಕ್, ಐಎಂಎಫ್ ಮತ್ತು ಡಬ್ಲ್ಯುಟಿಒ ನೀತಿಗಳನ್ನೇ ಅನುಸರಿಸಿ ಭಾರತದ ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಮೂರು ಕರಾಳ ಕಾಯ್ದೆಗಳನ್ನು ಜಾರಿಗೊಳಿಸಿದ್ದು ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಜಾಗೃತಗೊಳಿಸಿತ್ತು. ಕರಾಳ ಕೃಷಿ ಕಾಯ್ದೆಗಳ ರದ್ದತಿ ಮತ್ತು ಬೆಳೆಗಳಿಗೆ ಕನಿಷ್ಠ ಬೆಲೆಯನ್ನು ಖಾತರಿಪಡಿಸುವ ಬೇಡಿಕೆಗಳೊಂದಿಗೆ ದೆಹಲಿಯ ಗಡಿಯಲ್ಲಿ ಆರಂಭವಾದ ಈ ಮುಷ್ಕರ ಒಂದೆಡೆ ರೈತಾಪಿ ಸಮುದಾಯದ ಸಮಸ್ಯೆಯನ್ನು ಇಡೀ ವಿಶ್ವಕ್ಕೆ ಬಿಂಬಿಸುತ್ತಲೇ ಮತ್ತೊಂದೆಡೆ ಸರ್ಕಾರಗಳ ದಮನಕಾರಿ ನೀತಿಗಳ ವಿರುದ್ಧ ಹೋರಾಡುವ ರೈತ ಸಮುದಾಯದ ಸಂಘಟಿತ ಶಕ್ತಿಯನ್ನೂ ಪ್ರದರ್ಶಿಸಿತ್ತು.
ಸ್ವತಂತ್ರ ಭಾರತದ ರೈತ ಹೋರಾಟಗಳ ಪರಂಪರೆಯನ್ನು ಗಮನಿಸಿದಾಗ ಕಾಣಬಹುದಾದ ಒಂದು ವೈಶಿಷ್ಟ್ಯ ಎಂದರೆ, ಎಲ್ಲ ಕಾಲಘಟ್ಟಗಳಲ್ಲೂ ಇದು ಪ್ರಾದೇಶಿಕ ನೆಲೆಗಳಲ್ಲೇ ಸಂಭವಿಸಿವೆ. ಅಖಿಲ ಭಾರತ ಮಟ್ಟದ ರೈತ ಸಂಘಟನೆಗಳ ಮುಷ್ಕರಗಳು ಆಯಾ ಕಾಲಕ್ಕೆ ಸಂಬಂಧಿಸಿದ ಕೃಷಿ ಸಮಸ್ಯೆಗಳ ವಿರುದ್ಧ ನಡೆದಿದ್ದು, ಹಲವಾರು ಸಂದರ್ಭಗಳಲ್ಲಿ ತಾರ್ಕಿಕ ಅಂತ್ಯ ತಲುಪದೆ, ಆಳ್ವಿಕೆಯೊಡನೆ ಹೊಂದಾಣಿಕೆ ಮಾಡಿಕೊಂಡಿರುವುದನ್ನೂ ಗಮನಿಸಬಹುದು. ಮತ್ತೊಂದೆಡೆ ಕರ್ನಾಟಕದ ನರಗುಂದ ಬಂಡಾಯದಂತಹ ಹೋರಾಟಗಳಲ್ಲಿ ಆಳ್ವಿಕೆಯ ದಮನಕ್ಕೊಳಗಾಗಿ ರೈತರು ಹುತಾತ್ಮರಾಗಿರುವುದೂ ಉಂಟು. ಈ ಇತಿಮಿತಿಗಳನ್ನು ದಾಟಿ ದೇಶದ ಸಮಸ್ತ ರೈತರ ಹಿತಾಸಕ್ತಿಯನ್ನು ಪ್ರತಿನಿಧಿಸುವ ಒಂದು ಸಮಗ್ರ ಹೋರಾಟಕ್ಕೆ ಭೂಮಿಕೆಯಾಗಿದ್ದು 2020ರ ರೈತ ಮುಷ್ಕರ.
ಈ ಕಾರಣಕ್ಕಾಗಿಯೇ ರೈತ ಮುಷ್ಕರದ ವಾರ್ಷಿಕೋತ್ಸವ ಹೆಚ್ಚು ಪ್ರಶಸ್ತವೂ, ಚಾರಿತ್ರಿಕವಾಗಿ ಮಹತ್ವಯುತವೂ ಆಗಿ ಕಾಣುತ್ತದೆ. ಈ ಚಾರಿತ್ರಿಕ ಮುಷ್ಕರಕ್ಕೆ ಮಣಿದು ಕೇಂದ್ರ ಸರ್ಕಾರ ತನ್ನ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೂ, ಇಂದಿಗೂ ಸಹ ಈಡೇರದ ಬೇಡಿಕೆಗಳು ಸಾಕಷ್ಟಿವೆ. ಇತ್ತೀಚೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವುದಾಗಿ ಸರ್ಕಾರ ಹೇಳಿದ್ದರೂ ರೈತ ಸಂಘಟನೆಗಳ ಎಲ್ಲ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಪರಿಣಾಮ, ಈಗ ಮತ್ತೆ ರೈತರು ದೆಹಲಿ ಗಡಿಗಳಲ್ಲಿ ಮುಷ್ಕರ ನಿರತರಾಗಿದ್ದಾರೆ. ಇತ್ತ ಸಂವಿಧಾನ ಬದ್ಧತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಳೆದ ಒಂದೂವರೆ ವರ್ಷದಿಂದ ಆಳ್ವಿಕೆ ನಡೆಸಿದರೂ, ಈ ಕರಾಳ ಕಾಯ್ದೆಗಳನ್ನು ಹಿಂಪಡೆಯುವ ಪ್ರಸ್ತಾವನೆಯನ್ನೂ ಮಾಡಿಲ್ಲ. ಈ ಎರಡೂ ಬೆಳವಣಿಗೆಗಳ ಹಿಂದೆ ಕಾಣಬಹುದಾದ ಸಮಾನ ಎಳೆ ಎಂದರೆ ರೈತರ ಸಮಸ್ಯೆಗಳ ಬಗ್ಗೆ ಆಳುವ ವರ್ಗಗಳಿಗೆ ಇರುವ ಅಸಡ್ಡೆ ಮತ್ತು ನಿರ್ಲಕ್ಷ್ಯ.
ಇದನ್ನೂ ಓದಿ: ನೆಲಮಂಗಲದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಗಾರ್ಮೆಂಟ್ಸ್‌ಗೆ ಬೆಂಕಿ -40 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಟ್ಟೆಗಳು ಕರಕಲು
ರೈತ ಸಮಸ್ಯೆಗಳ ವಿರಾಟ್ ಸ್ವರೂಪ
ಭಾರತದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹಲವು ಆಯಾಮಗಳಿವೆ. ಭೂ ಹಿಡುವಳಿಯ ಪ್ರಮಾಣ ಮತ್ತು ನೀರಾವರಿ ಸೌಲಭ್ಯಗಳ ಹೊರತಾಗಿಯೂ ಕಾಣಬಹುದಾದ ಸಮಸ್ಯೆಗಳು ನೂರೆಂಟಿವೆ. ಬೆಳೆದ ಫಸಲಿಗೆ ಸೂಕ್ತ ಮಾರುಕಟ್ಟೆ ದರ, ಬೆಳೆಯನ್ನು ಸಂರಕ್ಷಿಸುವ ದಾಸ್ತಾನು ಸೌಲಭ್ಯಗಳು, ಬೇಸಾಯಕ್ಕೆ ಅಗತ್ಯವಾದ ಹಣಕಾಸು ಪೂರೈಕೆ, ನೈಸರ್ಗಿಕ ವ್ಯತ್ಯಯಗಳಿಂದ ಉಂಟಾಗುವ ಬೆಳೆ ನಷ್ಟ, ಸಾಲದ ಹೊರೆ, ಖಾಸಗಿ ಲೇವಾದೇವಿಗಾರರಿಂದ ಕಿರುಕುಳ, ಫಸಲುಗಳನ್ನು ಮಾರುಕಟ್ಟೆಗೆ ಸಾಗಿಸಲು ಅಗತ್ಯವಾದ ಸಾರಿಗೆ ಸೌಕರ್ಯಗಳು ಈ ಎಲ್ಲ ಸಮಸ್ಯೆಗಳೊಂದಿಗೆ 1991ರ ನಂತರದ ಜಾಗತೀಕರಣ ಮತ್ತು ಕಾರ್ಪೋರೇಟ್ ಆರ್ಥಿಕತೆಯಿಂದ ಉದ್ಭವಿಸುವ ಭೂ ಸ್ವಾಧೀನದ ಸಮಸ್ಯೆಗಳು. ಈ ಜಟಿಲ ಸಮಸ್ಯೆಗಳಿಗೆ ಪ್ರಾದೇಶಿಕ ವೈವಿಧ್ಯತೆಯೂ ಇರುತ್ತದೆ. ಒಂದೇ ರಾಜ್ಯದ ವಿವಿಧ ಪ್ರಾಂತ್ಯಗಳಲ್ಲಿ ರೈತಾಪಿಯ ಸಮಸ್ಯೆಗಳು ಭಿನ್ನವಾಗಿಯೇ ಇರುತ್ತವೆ.
ಮೂಲ ಸಮಸ್ಯೆ ಇರುವುದು ಈ ಸಮಸ್ಯೆಗಳನ್ನು ಅಮೂಲಾಗ್ರವಾಗಿ ಅರ್ಥಮಾಡಿಕೊಳ್ಳುವಂತಹ ಒಂದು ಸಮಗ್ರ ಕೃಷಿ ನೀತಿ ಇಲ್ಲದಿರುವುದು. ನವ ಉದಾರವಾದಿ ಆರ್ಥಿಕತೆಯ ಪರಿಣಾಮ ಸರ್ಕಾರಗಳು ಕೃಷಿಯಲ್ಲಿ ಬಂಡವಾಳ ಹೂಡಿಕೆ ಅಥವಾ ಪೂರೈಕೆಯಿಂದ ಕ್ರಮೇಣ ಹಿಂದೆ ಸರಿಯುತ್ತಿರುವುದರಿಂದ ಇಡೀ ಕೃಷಿ ವಲಯವೇ ಕಾರ್ಪೋರೇಟ್ ಮಾರುಕಟ್ಟೆಯ ನಿಯಂತ್ರಣಕ್ಕೊಳಪಡುತ್ತಿದೆ. ಕರ್ನಾಟಕ ಸರ್ಕಾರದ ಭೂ ಸ್ವಾಧೀನ ಕಾಯ್ದೆಗಳೂ ಸೇರಿದಂತೆ, ನಗರೀಕರಣ ಮತ್ತು ತತ್ಸಂಬಂಧಿತ ಮೂಲ ಸೌಕರ್ಯಗಳಿಗಾಗಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಹಲವು ನಿಯಮಗಳು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಅವಸಾನದ ಅಂಚಿಗೆ ದೂಡುತ್ತಿವೆ.
ಇರುವ ಭೂಮಿಯನ್ನು ಉಳಿಸಿಕೊಳ್ಳುವುದು ಮತ್ತು ಕಳೆದುಕೊಂಡ ಭೂಮಿಗೆ ಸೂಕ್ತ ಪರಿಹಾರ ಪಡೆಯುವುದು ಎರಡೂ ಸಹ ರೈತಾಪಿಯ ಪಾಲಿಗೆ ಸವಾಲಿನ ಪ್ರಶ್ನೆಗಳೇ ಆಗಿವೆ. ದುರಂತ ಎಂದರೆ ರೈತರ ಸಮಸ್ಯೆಗಳನ್ನು ಈ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ವ್ಯವಧಾನವನ್ನು ಸರ್ಕಾರಗಳು ಕಳೆದುಕೊಂಡಿವೆ. ಬೆಳೆ-ಫಸಲು-ಬೆಂಬಲ ಬೆಲೆ-ಹಣಕಾಸು ಪೂರೈಕೆ ಮತ್ತು ಮಾರುಕಟ್ಟೆಯ ವಹಿವಾಟು ಈ ಸೂತ್ರದಿಂದಾಚೆಗೂ ರೈತ ಸಮುದಾಯವು ತನ್ನ ಭವಿಷ್ಯದ ಬದುಕಿನ ಪ್ರಶ್ನೆ ಎದುರಿಸುತ್ತಿರುವುದನ್ನು ಸರ್ಕಾರಗಳು ಗಮನಿಸುತ್ತಿಲ್ಲ.
ಶಿಥಿಲವಾಗುತ್ತಿರುವ ದೇಶದ ಬೆನ್ನೆಲುಬು
ಭಾರತ ಕೃಷಿ ಪ್ರಧಾನ ದೇಶ ಎನ್ನುವುದು 1947 ರಿಂದ ಇಲ್ಲಿಯವರೆಗೂ ಪ್ರಚಲಿತವಾಗಿರುವ ವಾಸ್ತವ. ರೈತ ಭಾರತದ ಬೆನ್ನೆಲುಬು ಎಂಬ ಮಾತುಗಳು ನಾಣ್ಣುಡಿಯಂತೆ ಪ್ರಚಲಿತವಾಗಿವೆ. ಇಂದಿಗೂ ಜಾಗತಿಕ ಆರ್ಥಿಕತೆಯಲ್ಲಿ ಭಾರತವನ್ನು ಕೃಷಿ ಕೇಂದ್ರಿತ ಎಂದೇ ಪರಿಗಣಿಸಲಾಗುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಹಾಲು, ಹಾಲಿನ ಉತ್ಪನ್ನಗಳು, ದವಸ ಧಾನ್ಯಗಳು ಮತ್ತು ಮಸಾಲೆ ಪದಾರ್ಥಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಡಿಜಿಟಲ್ ಯುಗದಲ್ಲೂ ಭಾರತದ ಶೇಕಡಾ 60ಕ್ಕೂ ಹೆಚ್ಚು ಶ್ರಮಿಕ ವರ್ಗವು ಕೃಷಿ ಅಥವಾ ಕೃಷಿ ಸಂಬಂಧಿತ ಕಾಯಕಗಳನ್ನು ಅವಲಂಬಿಸಿದೆ. ಇತ್ತೀಚಿನ ಅಂಕಿಅಂಶಗಳ ಅನುಸಾರ ಕೃಷಿವಲಯವು ದೇಶದ ಒಟ್ಟು ಉತ್ಪಾಯದ (ಜಿಡಿಪಿ) ಶೇಕಡಾ 18ರಷ್ಟು ಪಾಲನ್ನು ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರವು ಸರಾಸರಿ ವಾರ್ಷಿಕ 4.18 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.
ಆದರೆ ಈ ಪ್ರಗತಿ ಮತ್ತು ಸಾಧನೆಯ ಹಿಂದೆ ಇರುವ ಮೂಲ ಸಮಸ್ಯೆಗಳತ್ತ ನೋಡಿದಾಗ, ಅಲ್ಲಿ ನಮಗೆ ರೈತರ ನಡುವೆಯೇ ಕಾಣುವಂತಹ ಭೌತಿಕ ವ್ಯತ್ಯಾಸಗಳು ಮತ್ತು ಅಂತರಗಳು ಗಮನಾರ್ಹವಾಗಿವೆ. ದೇಶದ ಶೇಕಡಾ 75ರಷ್ಟು ಭೂ ಹಿಡುವಳಿಯ ಪ್ರಮಾಣ ಒಂದು ಹೆಕ್ಟೇರ್‌ಗಿಂತಲೂ ಕಡಿಮೆ ಇದೆ. ಅಂದರೆ ಎರಡೂವರೆ ಎಕರೆ ಎಕರೆಗೂ ಕಡಿಮೆ ಭೂಮಿ ಹೊಂದಿರುವವರ ರೈತರು ಶೇಕಡಾ 75ರಷ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಸರಾಸರಿ ತಲಾ ಭೂ ಹಿಡುವಳಿ 4.5 ಹೆಕ್ಟೇರ್‌ಗಳಾಗಿದ್ದರೆ ಭಾರತದಲ್ಲಿ ಇದು ಕೇವಲ 0.10ರಷ್ಟಿದೆ. ಎರಡು ಹೆಕ್ಟೇರ್‌ಗಿಂತಲೂ ಕಡಿಮೆ ಭೂಮಿ ಹೊಂದಿರುವವರೇ ಭಾರತದ ಕೃಷಿ ವಲಯವನ್ನು ಪ್ರಧಾನವಾಗಿ ಪ್ರತಿನಿಧಿಸುತ್ತಿದ್ದು, ಶೇಕಡಾ 86.2ರಷ್ಟು ರೈತರು ಸಣ್ಣ-ಅತಿ ಸಣ್ನ ರೈತರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ರೈತರ ಬಳಿ ಇರುವ ವ್ಯವಸಾಯ ಯೋಗ್ಯ ಭೂಮಿಯ ಪ್ರಮಾಣ ಕೇವಲ ಶೇಕಡಾ 47.3ರಷ್ಟಿದೆ.
ದೆಹಲಿಯ ರೈತ ಮುಷ್ಕರವನ್ನು ದೇಶದ ಮಾಧ್ಯಮಗಳು, ಬಿಜೆಪಿ ಮತ್ತು ಮಿತ್ರಪಕ್ಷಗಳು ಪಂಜಾಬ್-ಹರಿಯಾಣ ಪ್ರಾಂತ್ಯದ ಶ್ರೀಮಂತ ರೈತರ ಹೋರಾಟ ಎಂದು ಬಣ್ಣಿಸಿದರೂ ಇದು ಅರ್ಧಸತ್ಯ ಮಾತ್ರ. ಅಲ್ಲಿ ಪ್ರಶ್ನೆ ಇದ್ದುದು ಕೃಷಿಯನ್ನೇ ನಂಬಿ ಬದುಕುವ ರೈತಾಪಿ ಸಮುದಾಯದ ಭವಿಷ್ಯ ಮತ್ತು ಸುಸ್ಥಿರ ಬದುಕನ್ನು ಕುರಿತದ್ದು. ಅಲ್ಪ ಪ್ರಮಾಣದಲ್ಲಿರುವ ದೊಡ್ಡ ಭೂಹಿಡುವಳಿದಾರ ರೈತರು ಎದುರಿಸುವ ಸಮಸ್ಯೆಗಳು ಮುಖ್ಯವಾಗಿ ಬಂಡವಾಳ ಹೂಡಿಕೆ, ಸಾಲ ಸೌಲಭ್ಯ , ರಸಗೊಬ್ಬರದ ಬೆಲೆಗಳು ಮತ್ತು ಮಾರುಕಟ್ಟೆ ಸೌಕರ್ಯಗಳ ಸುತ್ತ ರೂಪುಗೊಂಡಿರುತ್ತವೆ. ಆದರೆ ಶೇಕಡಾ 80ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಸಣ್ಣ-ಅತಿ ಸಣ್ಣ ರೈತರ ಸಮಸ್ಯೆಗಳು ನಿತ್ಯ ಬದುಕಿಗೆ ಸಂಬಂಧಿಸಿರುತ್ತವೆ. ಬಹುಮಟ್ಟಿಗೆ ಈ ರೈತಾಪಿ ಸಮುದಾಯವೇ ಕಳೆದ ಮೂರು ದಶಕಗಳಲ್ಲಿ ಆತ್ಮಹತ್ಯೆಯ ಸಮಸ್ಯೆಯಿಂದ ಪರದಾಡುತ್ತಿವೆ.
ಬದುಕು ಕಳೆದುಕೊಳ್ಳುವ ಸನ್ನಿವೇಶದ ನಡುವೆ
ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (NCRB) ದತ್ತಾಂಶಗಳ ಅನುಸಾರ 1995 ರಿಂದ 2014ರ ಅವಧಿಯಲ್ಲಿ ದೇಶಾದ್ಯಂತ 2,96,438 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಗಳು ದೇಶದ ಪ್ರಮುಖ ಸವಾಲುಗಳೆಂದು ಗುರುತಿಸುವ ಭಯೋತ್ಪಾದನೆ-ಉಗ್ರವಾದ, ಕೋಮುವಾದಿ-ಮತೀಯ ಗಲಭೆಗಳು, ಸಾಮಾಜಿಕ ಕ್ಷೋಭೆ ಮತ್ತು ಕಾಲಕಾಲಕ್ಕೆ ಸಂಭವಿಸುವ ನೈಸರ್ಗಿಕ ವಿಕೋಪಗಳಿಂದ ಈ ಅವಧಿಯಲ್ಲಿ ಸಂಭವಿಸಿರುವ ಸಾವುಗಳ ಸಂಖ್ಯೆಯನ್ನು ಆತ್ಮಹತ್ಯೆಯಿಂದ ನಿರ್ಗಮಿಸಿರುವ ರೈತರ ಸಂಖ್ಯೆ ಮೀರಿಸುತ್ತದೆ.
2014-2022ರ ಅವಧಿಯಲ್ಲಿ 1,00,474 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ಹೇಳುತ್ತದೆ. 2022ರ ಒಂದು ವರ್ಷದಲ್ಲೇ 11,290 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತಿ ಗಂಟೆಗೆ ಒಬ್ಬ ರೈತ ಸಾವಿಗೆ ಶರಣಾಗಿರುತ್ತಾನೆ. ಇವರ ಪೈಕಿ 6,083 ಕೃಷಿ ಕಾರ್ಮಿಕರೂ ಇರುವುದು ಗಮನಿಸಬೇಕಾದ ಅಂಶ. ದೇಶದಲ್ಲಿ ಸಂಭವಿಸಿರುವ ಒಟ್ಟು ಆತ್ಮಹತ್ಯೆಗಳ ಪೈಕಿ ರೈತರ ಪಾಲು ಶೇಕಡಾ 6.6ರಷ್ಟಿದೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಈ ಐದು ರಾಜ್ಯಗಳೇ ಶೇಕಡಾ 85ರಷ್ಟು ರೈತ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿವೆ. ಆದರೆ ಈ ಸಾವುಗಳು ನಮ್ಮ ನಾಗರಿಕ ಪ್ರಜ್ಞೆಯನ್ನಾಗಲೀ, ಸಾಮಾಜಿಕ ಸೂಕ್ಷ್ಮತೆಯನ್ನಾಗಲೀ ಅಲುಗಾಡಿಸಿಲ್ಲ.!
ಪಕ್ಷಾತೀತವಾಗಿ ನೋಡಿದಾಗ, ರೈತ ಆತ್ಮಹತ್ಯೆಗಳು ದೇಶದ ರಾಜಕೀಯ ಸಂಕಥನವಾಗಿ ಈವರೆಗೂ ರೂಪುಗೊಂಡಿಲ್ಲ. ಸತ್ತ ರೈತರಿಗೆ ಪರಿಹಾರ ಘೋಷಿಸಿರುವುದು ಅಥವಾ ಈ ಆತ್ಮಹತ್ಯೆಗಳಿಗೆ ಇರುವ ಮೂಲ ಕಾರಣಗಳನ್ನು ಅಲ್ಲಗಳೆಯುವುದು ರಾಜಕೀಯ ಪಕ್ಷಗಳ ಧೋರಣೆಯಾಗಿರುವುದನ್ನು ಗಮನಿಸಬಹುದು. ಭೂಮಿಯನ್ನೇ ನಂಬಿ ತನ್ನ ಬದುಕು ಕಟ್ಟಿಕೊಳ್ಳುವ ತನ್ನ ಸ್ವ ಇಚ್ಚೆಯಿಂದ ʼಮರಳಿ ಮಣ್ಣಿಗೆʼ ಹೋಗುವುದಾದರೂ ಏಕೆ ? ಈ ಪ್ರಶ್ನೆ ನಮ್ಮ ರಾಜಕೀಯ ಪಕ್ಷಗಳನ್ನು ಕಾಡುವುದೇ ಇಲ್ಲ. ಏಕೆಂದರೆ ಇಲ್ಲಿ ಗುರುತಿಸಬಹುದಾದ ಕಾರಣಗಳಿಗೆ ಸರ್ಕಾರಗಳ ಆರ್ಥಿಕ ನೀತಿಗಳು ಮತ್ತು ಅಪಕ್ವವಾದ ಕೃಷಿ ನೀತಿಗಳೇ ಬುನಾದಿಯಾಗಿರುತ್ತವೆ. ಬ್ಯಾಂಕ್ ರಾಷ್ಟ್ರೀಕರಣದ ನಂತರದಲ್ಲಿ ರೈತರ ಬೇಸಾಯ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬ್ಯಾಂಕ್ ಸಾಲ ಸೌಲಭ್ಯಗಳು ದೊರೆಯುತ್ತಿರುವುದಾದರೂ, ಇಂದಿಗೂ ಸಹ ಗ್ರಾಮೀಣ ಭಾರತದ ರೈತರು ಖಾಸಗಿ ಲೇವಾದೇವಿಗಾರರನ್ನೇ ಅವಲಂಬಿಸಿದ್ದಾರೆ.
(ಭಾಗ – 02 ನಾಳೆ ಪ್ರಕಟವಾಗಲಿದೆ)
ಇದನ್ನೂ ನೋಡಿ: ವಿವೇಕಾನಂದ ಸಮಾಜಮುಖಿ ಚಿಂತಕ – ಟಿ. ಸುರೇಂದ್ರರಾವ್ Janashakthi Media