ಸಿಡ್ನಿ:ಉದ್ಯಮಿಗಳಿಗೆ ಅನುಕೂಲವಾಗುವ ರೀತಿ ಕೃಷಿ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾರತದಲ್ಲಿ ಕಾರ್ಮಿಕರು ಮತ್ತು ರೈತರು ತೀವ್ರ ಪ್ರತಿಭಟನೆ ನಡೆಸುತ್ತಿರುವಾಗಲೇ ಭಾರತದ ಉದ್ಯಮಿಯೊಬ್ಬರು ಗಣಿ ಉದ್ಯಮ ಆರಂಭಿಸುವುದಕ್ಕೆ ಆಸ್ಟ್ರೇಲಿಯಾದಲ್ಲಿ ಪ್ರತಿಭಟನೆ ಎದುರಿಸಬೇಕಾಗಿದೆ.
ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಪ್ರತಿಭಟನಾಕಾರರು ಮೈದಾನಕ್ಕಿಳಿದು ಭಾರತದ ಉದ್ಯಮಿ ಗೌತಮ್ ಶಾಂತಿಲಾಲ್ ಅದಾನಿ ವಿರುದ್ಧ ಪ್ರತಿಭಟನೆ ನಡೆಸಿ ಕೆಲ ಕಾಲ ಪಂದ್ಯಕ್ಕೆ ಅಡ್ಡಿ ಪಡಿಸಿದರು.
Let’s go India! Let’s cut off Adani! Lots of support for our protest against the @TheOfficialSBI $1bn loan to Adani down at the SCG today #AUSvIND #StopAdani pic.twitter.com/Y7Pj49atkq
— Stop Adani (@stopadani) November 27, 2020
9 ತಿಂಗಳುಗಳ ಬಳಿಕ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದು, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನಾಡುತ್ತಿದೆ. ಸರಣಿಗೆ ಇಲ್ಲಿನ ಸ್ಥಳೀಯಾಡಳಿತ ಪಂದ್ಯಾವಳಿ ವೀಕ್ಷಣೆಗೆ ಶೇ. 50 ವೀಕ್ಷಕರಿಗೆ ಅನುವು ಮಾಡಿಕೊಟ್ಟಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಏಕದಿನ ಪಂದ್ಯ ನಡೆಯುತ್ತಿತ್ತು ಈ ವೇಳೆ ಪ್ರತಿಭಟನಾಕಾರರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅದಾನಿಗೆ 1 ಬಿಲಿಯನ್ ಡಾಲರ್ ಸಾಲ ನೀಡಬೇಡಿ ಎಂದು ಬರೆದಿರುವ ಪ್ಲೇ ಕಾರ್ಡ್ ಪ್ರದರ್ಶಿಸಿದರು. ಅದಾನಿಯನ್ನು ತಡೆಯಿರಿ, ಕಲ್ಲಿದ್ದಲು ಗಣಿಗಾರಿಕೆ ನಿಲ್ಲಿಸಿ ಎಂದು ಬರೆದಿರುವ ಜೆರ್ಸಿಯನ್ನು ಪ್ರತಿಭಟನಾಕಾರರು ಧರಿಸಿದ್ದರು.
ಈ ನಡುವೆ ಪ್ರತಿಭಟನಾಕಾರನೊಬ್ಬ ಒಂದು ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹಣವನ್ನು ಅದಾನಿಗೆ ಸಾಲ ನೀಡಬಾರದು ಎನ್ನುವ ಭಿತ್ತಿಪತ್ರ ಹಿಡಿದು ಮೈದಾನ ಪ್ರವೇಶಿಸಿದ ಸನ್ನಿವೇಷಕ್ಕೆ ಈ ಪಂದ್ಯ ಸಾಕ್ಷಿಯಾಯಿತು.
ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಿರುವ ಸಿಡ್ನಿ ಕ್ರಿಕೆಟ್ ಮೈದಾನದ ಹೊರಗೂ ಪ್ರತಿಭಟನಾಕಾರರು ಅದಾನಿ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಪ್ರತಿಭಟನೆ ಯಾಕೆ
ಭಾರತದ ಉದ್ಯಮಿ ಗೌತಮ್ ಅದಾನಿಯ ಸಂಸ್ಥೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ನಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಮುಂದಾಗಿದೆ. ಕಲ್ಲಿದ್ದಲು ಉತ್ಫಾದನೆಯಿಂದ ಹೊರಬರುವ ಇಂಗಾಲದ ಬಗ್ಗೆ ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುವುದರ ಜತಗೆ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರ ಭಾಗವಾಗಿಯೇ ಪ್ರತಿಭಟನಾಕಾರನೊಬ್ಬ ಅದಾನಿಗೆ ಒಂದು ಬಿಲಿಯನ್ ಡಾಲರ್ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲ ನೀಡಬಾರದು ಎನ್ನುವ ಭಿತ್ತಿ ಪತ್ರಹಿಡಿದು ಮೈದಾನ ಪ್ರವೇಶಿಸುವ ಮೂಲಕ ಗಮನ ಸೆಳೆಯುವ ಯತ್ನ ಮಾಡಿದ್ದಾರೆ