ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಪ್ರಾರಂಭ: 6 ಕಿ.ಮೀ ಪ್ರಯಾಣಕ್ಕೆ ₹410!

 ರಾಜ್ಯದಲ್ಲಿ ಎರಡನೇ ವಂದೇ ಭಾರತ್ ಉದ್ಘಾಟನೆಗೊಂಡು ಪ್ರಯಾಣಕ್ಕೆ ಸಿದ್ದವಾಗಿದೆ

ಧಾರವಾಡ: ಧಾರವಾಡ–ಬೆಂಗಳೂರು ಸೇರಿದಂತೆ ಒಟ್ಟು ಐದು ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೊ ಸಂವಾದದ ಮೂಲಕ ಚಾಲನೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಎರಡನೇ ವಂದೇ ಭಾರತ್ ಉದ್ಘಾಟನೆಗೊಂಡು ಪ್ರಯಾಣಕ್ಕೆ ಸಿದ್ದವಾಗಿದೆ. ಆದರೆ ರೈಲಿನ ಪ್ರಯಾಣ ದರ ಹೆಚ್ಚಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ರೈಲು ನಿಲ್ದಾಣದಲ್ಲಿ ಆಯೋಜಿಸಿದ್ದ ‘ವಂದೇ ಭಾರತ್’ ರೈಲು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ ಸಂಸದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ವಂದೇ ಭಾರತ್’ ಎಕ್ಸ್ ಪ್ರೆಸ್ ಸ್ವದೇಶಿ ನಿರ್ಮಿತ ರೈಲು, ಪ್ರಧಾನಿ ಮೋದಿ ಅವರ ಆತ್ಮನಿರ್ಭರ ರೈಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಾಮಾನ್ಯರ ಕೈಗೆಟುಕದ `ವಂದೇ ಭಾರತ್’ ರೈಲು

“ಹೈಸ್ಪೀಡ್ ರೈಲು ಸಂಚಾರ ಆರಂಭಿಸಬೇಕು ಎಂದು ಜನರು ಬೇಡಿಕೆ ಇಟ್ಟಿದ್ದರು, ಅದು ಈಗ ಈಡೇರಿದೆ. ಇದೊಂದು ಐತಿಹಾಸಿಕ ದಿನ. ಈ ರೈಲು 5 ಗಂಟೆ 45 ನಿಮಿಷಗಳಲ್ಲಿ ಧಾರವಾಡದಿಂದ ಬೆಂಗಳೂರಿಗೆ ತಲುಪುತ್ತದೆ. ಇದನ್ನು ಬೆಳಗಾವಿ ನಿಲ್ದಾಣದವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇದೆ. ಬೆಳಗಾವಿ ಮಾರ್ಗದಲ್ಲಿ ದ್ವಿಪಥ, ವಿದ್ಯುತ್ತೀಕರಣ ಮತ್ತು ಕೆಲವು ತಾಂತ್ರಿಕ ಕಾಮಗಾರಿಗಳು ಆಗಬೇಕಿದೆ. ಅವು ಪೂರ್ಣಗೊಂಡ ನಂತರ ಈ ರೈಲು ಸಂಚಾರ ವಿಸ್ತರಣೆಗೆ ಕ್ರಮ ವಹಿಸಲಾಗುವುದು” ಎಂದು ಹೇಳಿದ್ದಾರೆ.

ಇಂದು ಉದ್ಘಾಟನೆಗೊಂಡ ಧಾರವಾಡ–ಬೆಂಗಳೂರು ರೈಲಿನ ಪ್ರಯಾಣ ದರ ಹೆಚ್ಚಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೇಂದ್ರ ನಿಲ್ದಾಣದಿಂದ ಯಶವಂತಪುರದ ವಾಸ್ತವದಲ್ಲಿ ಕೇವಲ 6 ಕಿ.ಮೀ ಇದ್ದು ಈ ಪ್ರಯಾಣಕ್ಕೆ 410 ರೂ.ಗಳನ್ನು ತೆರಬೇಕಾಗಿರುವುದ ಬಗ್ಗೆ ಹಲವಾರು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಸೆಳೆದಿದ್ದಾರೆ.

ಕಟ್ಟಡ ಕಾರ್ಮಿಕ ಹೋರಾಟಗಾರ ಲಿಂಗರಾಜು ಮಳವಳ್ಳಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಮಜೆಸ್ಟಿಕ್‌ನಿಂದ ಯಶವಂತಪುರಕ್ಕೆ 410 ರೂಪಾಯಿ. ಇದು ಕೇಲವ 10ಕಿ.ಮೀ ಪ್ರಯಾಣ. ಧಾರವಾಡದಿಂದ ಹುಬ್ಬಳಿಗೆ 410 ರೂಪಾಯಿ. ಈ ಪ್ರಯಾಣದ ದೂರ 17ಕಿ.ಮೀ ಆಗಲಿದೆ. ಅದರ ಬದಲಾಗಿ ‘ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್‌’ ಟ್ರೈನಿನಲ್ಲಿ ಬೆಂಗಳೂರಿನಿಂದ ಧಾರವಾಡ ಸ್ಲೀಪರ್ ಕ್ಲಾಸ್ ಟಿಕೇಟ್ ರೇಟು ಕೇವಲ 310 ರೂಪಾಯಿ ಅಷ್ಟೆ ಇದೆ. ಇದನ್ನು ಸುಲಿಗೆ ಅಥವಾ ದರೋಡೆ ಅಂತ ಕರೆಯಬಹುದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ಪ್ರತಿಕ್ರಿಯಿಸಿ, “ಕೇವಲ ಹದಿನೈದು ಕಿಲೋಮೀಟರ್ ಪ್ರಯಾಣಿಸಲು ರೂ. 410ರಿಂದ ರೂ. 545. ಮೋದಿ ಹೇಳುತ್ತಿದ್ದ ಅಚ್ಛೇದಿನ ಬಂದಿದೆ ನೋಡಿ. ಇದಕ್ಕಿಂತ ‘ನಮ್ಮ ಮೆಟ್ರೊ’ದಲ್ಲಿಯೇ ಹೋಗಿ. ಬೆಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಯಶವಂತಪುರದವರೆಗೆ ನಮ್ಮ ಮೆಟ್ರೊದಲ್ಲಿ ಹೋದರೆ ಹೆಚ್ಚೆಂದರೆ 35 ರೂಪಾಯಿ ಆಗುತ್ತದೆ.” ಎಂದು ಹೇಳಿದ್ದಾರೆ.

ಕಾರ್ಮಿಕ ಹೋರಾಟಗಾರ ಕೆ. ಮಹಾಂತೇಶ್ ಅವರು, “ನನ್ನ ದೇಶ ಮಹಾನ್, ದೇಶದಲ್ಲಿ ರೈಲ್ವೆ ಹಳಿಗಳು ಹೆಚ್ಚಾಗುತ್ತಿವೆ
ಆದರೆ, ಬಡವರ ಪ್ರಯಾಣಿಸುವ ರೈಲುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ದೇಶದಲ್ಲಿ ಶ್ರೀಮಂತರ ಆದಾಯ ಹೆಚ್ಚಾಗುತ್ತಿದೆ. ಆದರೆ, ಬಡವರ ಆದಾಯ/ಕೂಲಿ ಇಳಿಯುತ್ತಿದೆ. ದೇಶದಲ್ಲಿ ಹೈಸ್ಪೀಡ್ ವಂದೆ ಮಾತರಂ ರೈಲು ಅಧಿಕವಾಗುತ್ತಿವೆ. ಅದರಲ್ಲಿ ಅಲ್ಲಿನ ಪ್ರಯಾಣದರಗಳು ಮಾತ್ರ ಗಗನ ತಲುಪುತ್ತಿವೆ” ಎಂದು ಹೇಳಿದ್ದಾರೆ.

“ಬೆಂಗಳೂರು ಯಶವಂತಪುರ ದರ ಕೇವಲ 6 ಕೀಮೀಗೆ ರೂ 410-00. ಧಾರವಾಡ -ಹುಬ್ಬಳ್ಳಿ -ಕೇವಲ 17 ಕೀಮೀ ದರ ರೂ‌ 410-00. ಆದರೆ, ಸಾಮಾನ್ಯ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಬಡವರು ಮಧ್ಯಮ ವರ್ಗದವರು ಸೀಟು ಸಿಗದೇ ನಿತ್ಯ ಪರಿತಪಿಸುವಂತಾಗಿದೆ. ನನ್ನ ದೇಶ ಮಹಾನ್” ಎಂದು ಮಹಾಂತೇಶ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *