ಗಂಗಾವತಿ: ಬಳ್ಳಾರಿ ಗಣಿ ಉದ್ಯಮಿ, ಮಾಜಿ ಸಚಿವ ಭಾರೀ ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಜೈಲು ಶಿಕ್ಷಗೆ ಗುರಿಯಾಗಿದ್ದ ಗಾಲಿ ಜನಾರ್ದನ ರೆಡ್ಡಿ ಮತ್ತೊಮ್ಮೆ ರಾಜಕಾರಣದಲ್ಲಿ ತೊಡಸಿಕೊಳ್ಳುವ ನಿಟ್ಟಿನಲ್ಲಿ ಡಿಸೆಂಬರ್ 25ರಂದು ತಮ್ಮ ರಾಜಕೀಯ ನಡೆ ಪ್ರಕಟಿಸುವುದಾಗಿ ಬಹಿರಂಗ ಪಡಿಸಿದ್ದಾರೆ. ಇದಕ್ಕೂ ಮುಂಚಿತವಾಗಿ ಧಾರ್ಮಿಕ ಕೇಂದ್ರಗಳ ಪ್ರದಕ್ಷಣೆ ಮಾಡುತ್ತಿದ್ದಾರೆ. ಇದರೊಂದಿಗೆ ಕೋಟಿಗಟ್ಟಲೇ ದೇಣಿಗೆ ನೀಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮನೆ ಮಾಡಿರುವ ಜನಾರ್ದನ ರೆಡ್ಡಿ ಗಂಗಾವತಿ ವಿಧಾನಸಭಾ ಕ್ಷೇತ್ರವನ್ನು ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ. ಬಿಜೆಪಿ ಪಕ್ಷ ಸೇರಿದ್ದಾರೆಯೇ ಅಥವಾ ತಮ್ಮದೇ ಹೊಸ ಪಕ್ಷವನ್ನು ಆರಂಭಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನು ಓದಿ: ಅರಚಾಟ ನಡೆಸುತ್ತಿದ್ದ ಆರೆಸ್ಸೆಸ್ ಈಗ ಎಲ್ಲಿ ಹೋಯಿತು?
ಮಠಗಳು ಹಾಗೂ ಪ್ರಮುಖ ಮುಖಂಡರನ್ನು ಭೇಟಿ ಮಾಡುತ್ತಿರುವ ಅವರು, ಈಗಾಗಲೇ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನಿನ್ನೆ ಗದಗಿನ ಪುಟ್ಟರಾಜ ಗವಾಯಿಗಳ ಗದ್ದುಗೆ ದರ್ಶನ ಪಡೆದಿದ್ದಾರೆ. ದೇವಸ್ಥಾನದ ಜೊತೆಗೆ ದರ್ಗಾಕ್ಕೂ ಭೇಟಿ ನೀಡುವ ಮೂಲಕ ಜನಾರ್ದನ ರೆಡ್ಡಿ ಯಾತ್ರೆ ನಡೆಸುತ್ತಿದ್ದಾರೆ.
ಧಾರ್ಮಿಕ ಯಾತ್ರೆಯ ಭಾಗವಾಗಿ ಜನಾರ್ದನ ರೆಡ್ಡಿ ಗಂಗಾವತಿಯ ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ. ದೇಣಿಗೆ ನೀಡಲು ಒಪ್ಪಿಗೆ ನೀಡಿದ್ದಾರೆ. ದರ್ಗಾದಲ್ಲೇ 6 ಕೋಟಿ ರೂ. ವೆಚ್ಚದ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದಾರೆ. ಬೆಳಗಾವಿ ಮೂಲದ ಸ್ಟುಡಿಯೋ ಅಮೀರ್ ಕಂಪನಿಗೆ ಈ ದರ್ಗಾ ಅಭಿವೃದ್ಧಿ ಜವಾಬ್ದಾರಿಯನ್ನು ನೀಡಲಾಗಿದೆ. ನೇರವಾಗಿ ಕಂಪನಿಗೆ ಹಣ ನೀಡುವುದಾಗಿ ರೆಡ್ಡಿ ಸಹಿ ಮಾಡಿದ್ದಾರೆ.
ಇದನ್ನು ಓದಿ: ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಮತ್ತೆ ಸಂಕಷ್ಟ?!
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರಾಯಚೂರು ಬಳ್ಳಾರಿ, ಕೊಪ್ಪಳ ವಿಜಯನಗರ ಭಾಗದ ಪ್ರಮುಖ ಮುಖಂಡರ ಸಭೆ ನಡೆಸಲಿದ್ದಾರೆ. ನಾಳೆ ಗಂಗಾವತಿ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾಗಲಿದ್ದು, ಅಂದು ಗಂಗಾವತಿ ಭಾಗದ ಪ್ರಮುಖರ ಸಭೆ ನಡೆಸಲಿದ್ದಾರೆ. ನಗರಸಭೆ ಸದಸ್ಯರುಗಳು ಸೇರಿ ಹಲವು ಚುನಾಯಿತ ಪ್ರತಿನಿಧಿಗಳಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ರೆಡ್ಡಿಯ ಈ ಎಲ್ಲ ನಡೆ, ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವರೇ ಎಂದು ಕಾದು ನೋಡಬೇಕು.
ಡಿಸೆಂಬರ್ 25ರಂದು ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ನಲ್ಲಿ ಸುದ್ದಿಗೋಷ್ಠಿ ಮಾಡಲಿದ್ದು, ಈ ವೇಳೆ ತಮ್ಮ ರಾಜಕೀಯ ನಿಲುವು ಪ್ರಕಟಿಸುವುದಾಗಿ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ