ಧರ್ಮ ಬೇಧವಿಲ್ಲದೆ ಸಾವಿರಾರು ಜನರಿಗೆ ನೀರು ದಾನ ಮಾಡುವ ಉಳ್ಳಾಲದ ಸೈಯದ್ ಮದನಿ ದರ್ಗಾ

ಉಳ್ಳಾಲ: ಇಲ್ಲಿನ ಸೈಯದ್ ಮದನಿ ದರ್ಗಾದ ವತಿಯಿಂದ ಆಸುಪಾಸಿನ ಆರು ವಾರ್ಡುಗಳಿಗೆ ಉಚಿತವಾಗಿ ನೀರು ಒದಗಿಸುವ ಮಹಾ ನೀರು ದಾನ ಪ್ರಕ್ರಿಯೆ ಹಲವು ದಶಕಗಳಿಂದ ನಡೆಯುತ್ತಿದೆ. ಈ ವಾರ್ಡುಗಳಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಮನೆಗಳಿವೆ. ಈ ವಾರ್ಡುಗಳ ಹೊರಗೂ ಇಲ್ಲಿಂದ ಟೆಂಪೋ, ರಿಕ್ಷಾಗಳಲ್ಲಿ ನೀರು ಸರಬರಾಜಾಗುತ್ತಿದೆ. ಸಿಂಟೆಕ್ಸ್ ಅಳವಡಿಸಿರುವ ಟೆಂಪೋಗಳಲ್ಲಿ ಪ್ರತಿದಿನ ಹಗಲು-ರಾತ್ರಿಯೆನ್ನದೆ ದರ್ಗಾದ ಬಾವಿಗಳಿಂದ ನೀರು ಸರಬರಾಜುಗುತ್ತಿದೆ.

ಯಾವ ಫಲಾಪೇಕ್ಷೆಗಳನ್ನು ನಿರೀಕ್ಷಿಸದ ದರ್ಗಾದವರು ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ನೀರೆತ್ತುವ ಪಂಪು ಅಳವಡಿಸಿಕೊಂಡಿದ್ದಾರೆ ಹಾಗೂ ವಿದ್ಯುತ್‌ ಬಿಲ್‌ ಸಹ ದರ್ಗಾವೇ ಪಾವತಿಸುತ್ತದೆ.

ವಿದ್ಯುತ್ ಇಲ್ಲದಿರುವಾಗ ನೀರು ಸರಬರಾಜಿಗೆ ತೊಂದರೆಯಾಗದಿರಲಿ ಎಂದು ಜನರೇಟರ್  ವ್ಯವಸ್ಥೆ ಅಳವಡಿಸಿಕೊಂಡಿದೆ. ಈ ಎಲ್ಲವೂ ಉಚಿತ. ವಾಹನ ಮತ್ತು ಸಿಬ್ಬಂದಿಗಳು ಮಾತ್ರ ನಗರಸಭೆಯವರು.

ದರ್ಗಾದ ಪಕ್ಕದಲ್ಲಿಯೇ ಅಬ್ದುಲ್ ರವೂಫ್ ಮುಸ್ಲಿಯಾರ್ ಎಂಬವರಿದ್ದಾರೆ. ಊರಿಗೆ ನೀರು ಒದಗಿಸುವ ಉದ್ದೇಶದಿಂದಲೇ ಅವರು ಸಹ ಬೋರ್‌ವೇಲ್ ಕೊರೆಸಿದ್ದಾರೆ. ಇಲ್ಲೂ‌ ಅವರು ಪಂಪು, ಜನರೇಟರ್‌ ಎಲ್ಲವನ್ನು ಅಳವಡಿಸಿಕೊಂಡಿದ್ದಾರೆ ಮತ್ತು ವಿದ್ಯುತ್ ಶುಲ್ಕವನ್ನು ಇವರೇ ಪಾವತಿ ಮಾಡುತ್ತಿದ್ದಾರೆ. ಅವರ ಸೇವೆ ಜನರಿಗೆ ಉಚಿತವಾಗಿದೆ. ಇಲ್ಲಿಂದಲೂ ರಾತ್ರಿ-ಹಗಲೆನ್ನದೆ ನೀರಿನ ಸರಬರಾಜು ನಡೆಯುತ್ತಿದೆ. ನಾನು ಪುಣ್ಯವನ್ನಷ್ಟೇ ನಿರೀಕ್ಷಿಸುತ್ತಿದ್ದೇನೆ ಎಂದು ಆಗಾಗ ಅಬ್ದುಲ್‌ ರವೂಫ್ ಮುಸ್ಲಿಯಾರ್‌ ಹೇಳುತ್ತಲೇ ಇರುತ್ತಾರೆ.

ಈ ಸೇವೆಯು ದಶಕಗಳಿಂದ ನಡೆಯುತ್ತಿವೆ. ಎಷ್ಟು ನೀರು ಸೇದಿದರೂ ದರ್ಗಾದ ಬಾವಿ ಮತ್ತು ಬೋರ್‌ವೇಲ್ ನಲ್ಲಿ ನೀರು ಬತ್ತುವುದಿಲ್ಲ. ಹಿಜಾಬ್, ಮುಸ್ಲಿಮರಿಗೆ ವ್ಯಾಪಾರ ನಿಷೇಧ, ಹಲಾಲ್ ಮಾಂಸ ಬಹಿಷ್ಕಾರದಂತಹ ಹುಚ್ಚು ಆವೇಶಗಳನ್ನು ಮಾಡಿ ಜನರ ನಡುವೆ ಅಶಾಂತಿಯನ್ನು ಸೃಷ್ಟಿಮಾಡುತ್ತಿರುವವರು ಇಲ್ಲಿನ ಸೌಹಾರ್ದ ಸೇವೆಯನ್ನು ಒಮ್ಮೆ ಎಲ್ಲರೂ ಗಮನಿಸಲೇ ಬೇಕು.

Donate Janashakthi Media

Leave a Reply

Your email address will not be published. Required fields are marked *