ಧರ್ಮಸ್ಥಳ: ಅಕ್ರಮ ದನ ಸಾಗಾಟ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರ ಸೆರೆ

ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳು ಬಿಜೆಪಿ ಸಕ್ರಿಯ ಕಾರ್ಯಕರ್ತರು ಎನ್ನಲಾಗಿದೆ

ದಕ್ಷಿಣ ಕನ್ನಡ: ದನ-ಕರುಗಳನ್ನು ಹಿಂಸಾತ್ಮಕವಾಗಿ ಅಕ್ರಮ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಾಗಿದ್ದು ಅವರ ನೇತೃತ್ವದಲ್ಲೆ ಈ ಸಾಗಾಟ ನಡೆಸಲಾಗಿದೆ ಎಂದು ವರದಿಯಾಗಿದೆ.

ಒಟ್ಟು ಮೂರು ವಾಹನಗಳಲ್ಲಿ 6 ದನ ಮತ್ತು 2 ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಅಕ್ರಮ ಅಕ್ರಮ ಸಾಗಾಟ ಮಾಡಲಾಗುತ್ತಿತ್ತು. ಧರ್ಮಸ್ದಳ ಠಾಣೆಯ ಎಸ್ಸೈ ಅನಿಲ್ ಕುಮಾರ್ ನೇತೃತ್ವದ ತಂಡ ಜುಲೈ 12ರ ರಾತ್ರಿ ಕನ್ಯಾಡಿ ರಾಮ ಮಂದಿರದ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ. ರಾತ್ರಿ 8:45ರ ಸುಮಾರಿಗೆ ಉಜಿರೆ ಕಡೆಯಿಂದ ಧರ್ಮಸ್ಥಳದತ್ತ ಬರುತ್ತಿದ್ದ ಎರಡು ಪಿಕಪ್ ಸೇರಿದಂತೆ ಮೂರು ವಾಹನಗಳಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು.

ಈ ವೇಳೆ ಸಕ್ರಿಯ ಬಿಜೆಪಿ ಕಾರ್ಯಕರ್ತರೆನ್ನಲಾದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಪ್ರಮೋದ್ ಸಾಲ್ಯಾನ್, ಒಳಗದ್ದೆ ನಿವಾಸಿ ಪುಷ್ಪರಾಜ್ ಹಾಗೂ ಹಾಸನ ಜಿಲ್ಲೆಯ ಕಸಬಾ ಹೋಬಳಿ, ಅರಕಲಗೂಡು ನಿವಾಸಿ ಚೆನ್ನಕೇಶವ ಮತ್ತು ಹೊಳೆನರಸೀಪುರ ನಿವಾಸಿ ಸಂದೀಪ್ ಹಿರೇಬೆಳಗುಳಿ ಎಂಬ ನಾಲ್ವರನ್ನು ಬಂಧಿಸಲಾಗಿತ್ತು. ಜೊತೆಗೆ ಸಾಗಾಟಕ್ಕೆ ಬಳಸಿದ ಮೂರು ವಾಹನಗಳು, 6 ದನ ಮತ್ತು 2 ಗಂಡು ಕರುಗಳನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಜಾನುವಾರುಗಳ ಅಂದಾಜು ಮೌಲ್ಯ 65 ಸಾವಿರ ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 7 ಲಕ್ಷ ರೂ. ಸೇರಿದಂತೆ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ರೂ 7.65 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.

ಇದನ್ನೂ ಓದಿ: ಮಂಗಳೂರು: ಬಜರಂಗದಳ ಕಾರ್ಯಕರ್ತರಿಂದ ಮತೀಯ ಗೂಂಡಾಗಿರಿಗೆ ಯತ್ನ

Donate Janashakthi Media

Leave a Reply

Your email address will not be published. Required fields are marked *