ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಮೇಲಿನ ಆರೋಪದ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ರವೀಂದ್ರನಾಥ್ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿಯಾಗಿದ್ದರು. ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಐಪಿಎಸ್ ಹುದ್ದೆಗೇರಿದ್ದ ಪ್ರಕರಣ ಸಂಬಂಧ ರವೀಂದ್ರನಾಥ್ ತನಿಖೆ ಆರಂಭಿಸಿದ್ದರು.
ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯಗೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಐಪಿಎಸ್ ಹುದ್ದೆಗೇರಿದ್ದ ಪ್ರಕರಣದಲ್ಲಿ ತನಿಖೆಯ ಉಸ್ತುವಾಗಿ ರವೀಂದ್ರನಾಥ್ ಮೇಲಿತ್ತು. ಆದರೆ, ಕೆಂಪಯ್ಯ ಅವರಿಗೆ ನೊಟೀಸ್ ನೀಡಿದ್ದ ಬಳಿಕ ಅವರನ್ನು ರಾಜ್ಯ ಸರ್ಕಾರ ಕರ್ನಾಟಕ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಗೊಳಿಸಲಾಗಿತ್ತು.
ಕೆಲ ಸನ್ನಿವೇಶಗಳಿಂದ ನೊಂದು ನಾನು ಅತಿಯಾದ ನೋವಿನಿಂದ ರಾಜಿನಾಮೆ ನೀಡುತ್ತಿದ್ದೇನೆ. ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ದ ಕಾರ್ಯಾಚರಣೆ ನಡೆಸುತ್ತಿದ್ದೆ. ಈ ಸಂದರ್ಭದಲ್ಲೇ ನನಗೆ ವರ್ಗಾವಣೆ ಘೋಷಿಸಿರುವುದು ನೋವುಂಟುಮಾಡಿದೆ ಎಂದು ರವೀಂದ್ರನಾಥ್ ಉಲ್ಲೇಖಿಸಿದ್ದಾರೆ.
ನನ್ನ ವರ್ಗಾವಣೆಯಿಂದ ಜನರಿಗೆ ತಪ್ಪು ಸಂದೇಶ ತಲುಪಬಾರದು. ನಾನು ಮಾಜಿ ಅಧಿಕಾರಿಯೊಬ್ಬರಿಗೆ ನೊಟೀಸ್ ನೀಡಿದ್ದೆ. ಅವರು ವಕೀಲರ ಮೂಲಕ 10 ದಿನಗಳ ಕಾಲಾವಕಾಶವನ್ನ ಕೇಳಿದ್ದಾರೆ. ಆದರೆ, ಅದರ ನಡುವೆಯೇ ನನ್ನನ್ನ ವರ್ಗಾವಣೆ ಮಾಡಲಾಗಿದೆ. ನನ್ನ ವರ್ಗಾವಣೆಯಲ್ಲಿ ಈ ಪ್ರಕರಣದ ಪಾತ್ರ ಇದೆ ಎಂದು ಜವಬ್ದಾರಿಯುತ ಅಧಿಕಾರಿಯಾಗಿ ಮಾತನಾಡುತ್ತಿದ್ದೇನೆ ಎಂದು ಡಿಜಿಪಿ ರವೀಂದ್ರನಾಥ್ ಹೇಳಿದ್ದಾರೆ.
1995ರಲ್ಲೇ ಎಸ್‌ಸಿ-ಎಸ್‌ಟಿ ಕಾಯ್ದೆ ಜಾರಿಯಲ್ಲಿದೆ. ಪೊಲೀಸ್ ಇಲಾಖೆಯಲ್ಲಿ ಕಾಯ್ದೆ ಜಾರಿಯಾಗಬೇಕು ಎಂದು ಮನವಿ ಮಾಡಿದ್ದೇನೆ. ಪದೇ ಪದೇ ಕೇಳಿದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಬೇಸರ ತಂದಿದೆ. ಸೇವಾ ನಿಯಮಗಳ ಪ್ರಕಾರ ಎರಡು ವರ್ಷ ವರ್ಗಾವಣೆ ಮಾಡುವಂತಿಲ್ಲ. ಕೆಲ ಅಧಿಕಾರಿಗಳ ಪಿತೂರಿಯಿಂದ ನನ್ನ ವರ್ಗಾವಣೆ ಮಾಡಲಾಗಿದೆ ಎಂದು ರವೀಂದ್ರನಾಥ್ ಆರೋಪಿಸಿದ್ದಾರೆ.
ಅರಮನೆ ಬಳಿ ಇರುವ ಪೋಲಿಸ್ ತರಬೇತಿ ಕಛೇರಿಗೆ ಬಂದಿದ್ದ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್ ಇಂದು(ಮೇ 10) ರಾಜಿನಾಮೆ ನೀಡಿದ್ದಾರೆ.