ಬೆಂಗಳೂರು: ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ ನಿಜ. ಆದರೆ, ದಲಿತರ ಅಭಿವೃದ್ಧಿ ಹಣ ದಲಿತರ ವೈಯಕ್ತಿಕ ಅಭಿವೃದ್ಧಿ ಹಣ ಈ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ವರ್ಗಾಹಿಸಿರುವುದನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದು ದಲಿತ ಹಕ್ಕುಗಳ ಸಮಿತಿ-ಕರ್ನಾಟಕ ರಾಜ್ಯ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಅವರು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ:ಐದು ಗ್ಯಾರೆಂಟಿ ಯೋಜನೆ ಜಾರಿಗೆ ಪರಿಶಿಷ್ಟರ ₹11,000 ಕೋಟಿ ಹಣ ಬಳಕೆ: ಸಚಿವ ಎಚ್.ಸಿ.ಮಹದೇವಪ್ಪ
ಸರ್ಕಾರ ತಕ್ಷಣ ಈ ತೀರ್ಮಾನವನ್ನು ವಾಪಸ್ ಪಡೆಯಬೇಕು, ದಲಿತರ ಅಭಿವೃದ್ಧಿ ಹಣ ಕುಂಠಿತ ಮಾಡಿದರೆ ಎಂತಹ ಪರಿಸ್ಥಿತಿ ಎದುರಾದರು ಹೋರಾಟ ನಡೆಸುತ್ತೇವೆ. ಇಂತಹ ನೀತಿಯನ್ನು ಮಾತ್ರ ಸಹಿಸುವುದಿಲ್ಲ ಎಂದರು. ಈಗಾಗಲೇ ರಾಜ್ಯದಲ್ಲಿ 2018 ರಿಂದ 48000ಕ್ಕೂ ಹೆಚ್ಚು ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿಗಳು ನಿಗಮಗಳಲ್ಲಿ ಕೊಳೆಯುತ್ತಿವೆ. ಅದೇ ರೀತಿ ಎರಡು ಎಕರೆ ಭೂಮಿಗಾಗಿ ಭೂ ಒಡೆತನ ಯೋಜನೆಯಲ್ಲಿ 11000ಕ್ಕೂ ಹೆಚ್ಚು ಅರ್ಜಿಗಳ ಸಲ್ಲಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಗೆ ಹೆಚ್ಚಿನ ಹಣ ನೀಡದೆ ವಂಚನೆ ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಇತರೆ ನಿಗಮಗಳಲ್ಲಿ ಅರ್ಜಿದಾರರು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಸರ್ಕಾರ ದಲಿತರಿಗೆ ಭೂಮಿ ನೀರು ಉದ್ಯೋಗ ಇವುಗಳಿಗೆ ಹೆಚ್ಚಿನ ಹಣ ವಿನಿಯೋಗಿಸುತ್ತಿಲ್ಲ ಎಂದರು.
ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಸಿದ್ದರಾಮಯ್ಯ ರವರ ಸರ್ಕಾರ ಗ್ಯಾರೆಂಟಿ ಯೋಜನೆಗೆ ಬಳಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದಲಿತರ ಪರ ನೀವು ಎಂಬುವುದನ್ನು ತಕ್ಷಣವೇ ಸಾಭೀತುಪಡಿಸಿ ಈ ತೀರ್ಮಾನವನ್ನು ವಾಪಸ್ ಪಡೆಯಿರಿ ಇಲ್ಲವಾದರೆ ಹೋರಾಟ ಮಾಡುವುದು ಖಚಿತ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.