ದೇವೇಗೌಡ ಕುಟುಂಬ – ಮೋದಿ ಭೇಟಿ: ಬಿಜೆಪಿ-ಜೆಡಿ(ಎಸ್) ಸೀಟು ಹಂಚಿಕೆ ಅಂತಿಮ?

ನವದೆಹಲಿ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ. ಈ ವೇಳೆ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಸೀಟು ಹಂಚಿಕೆ ಸಂಬಂಧ ಅಂತಿಮ ಚರ್ಚೆ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ದೇವೇಗೌಡ ಅವರ ಪುತ್ರರಾದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ, ಮೊಮ್ಮಗ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಈ ವೇಳೆ ಉಪಸ್ಥಿತರಿದ್ದರು. ಈ ಭೇಟಿಯ ಬಗ್ಗೆ ಪ್ರಧಾನಿ ಮೋದಿ ಕೂಡಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಮಾನತಾದ 97 ಸಂಸದರ ಅನುಪಸ್ಥಿತಿಯಲ್ಲಿ 3 ಕ್ರಿಮಿನಲ್ ಕಾನೂನು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ!

ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಮೋದಿ, “ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ ಮತ್ತು ಎಚ್‌ಡಿ ರೇವಣ್ಣ ಅವರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ. ರಾಷ್ಟ್ರದ ಪ್ರಗತಿಗೆ ಅವರ ಅನುಕರಣೀಯ ಕೊಡುಗೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ. ವೈವಿಧ್ಯಮಯ ನೀತಿ ವಿಷಯಗಳ ಕುರಿತು ಅವರ ಆಲೋಚನೆಗಳು ಒಳನೋಟವುಳ್ಳವು ಮತ್ತು ಭವಿಷ್ಯದವುಗಳಾಗಿವೆ” ಎಂದು ಹೇಳಿದ್ದಾರೆ.

ಅದಾಗ್ಯೂ, ಈ ಸಭೆ ಅನೌಪಚಾರಿಕವಾಗಿರಲಿದ್ದು, ಮೈತ್ರಿ ಹಾಗೂ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸುವುದಿಲ್ಲ ಎಂದು ದೇವೇಗೌಡರು ಈ ಹಿಂದೆಯೇ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ನಾಲ್ಕೈದು ಎಂಪಿ ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಎದುರು ನೋಡುತ್ತಿದೆ. ಈ ಭೇಟಿಯಲ್ಲಿ ಸೀಟು ಹಂಚಿಕೆ ವಿಷಯ ಇತ್ಯರ್ಥವಾಗಲಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ವಿವರಿಸಿವೆ.

ವಿಡಿಯೊ ನೋಡಿ: ತಾಳ ಮದ್ದಳೆ | ರಾಮ ಧಾನ್ಯ ಚರಿತ್ರೆ Janashakthi Media

Donate Janashakthi Media

Leave a Reply

Your email address will not be published. Required fields are marked *