ದೇಗುಲ ಬೇಡ-ಗ್ರಂಥಾಲಯ ನಿರ್ಮಾಣ ಮಾಡಿ: ಬೆಂಗಳೂರು ವಿವಿ ಆವರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು: ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಯಾರು ಅನುಮತಿ ನೀಡಿದ್ದಾರೆಯೆಂಬುದೇ ಗೊತ್ತಿಲ್ಲ. ವಿದ್ಯಾರ್ಥಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ದೇವಸ್ಥಾನದ ಬದಲು ಗ್ರಂಥಾಲಯ ನಿರ್ಮಿಸಲಿ. ಇದರಿಂದ, ವಿದ್ಯಾರ್ಥಿಗಳಿಗೂ ಅನುಕೂಲ ಎಂದು ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಜ್ಞಾನ ಭಾರತಿ ಆವರಣದಲ್ಲಿ ಉಲ್ಲಾಳದ ಕಡೆ ಇರುವ ಗೇಟ್‌ ಸಮೀಪ ಗಣೇಶ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಕಾಮಗಾರಿ ನಿರ್ಮಾಣ ಆಗುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ದೇವಸ್ಥಾನ ನಿರ್ಮಾಣದ ಅವಶ್ಯಕತೆ ಇಲ್ಲ ಎಂದು ಆಗ್ರಹಿಸಿದ್ದಾರೆ. ಇದರ ಬದಲು ಗ್ರಂಥಾಲಯ ನಿರ್ಮಾಣ ಮಾಡಿ. ಅನಾವಶ್ಯಕವಾಗಿ ವಿವಿಯ ಜಾಗ ಹಾಳು ಮಾಡಲಾಗುತ್ತಿದೆ ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ  ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

‘ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಕೆ.ಆರ್‌. ವೇಣುಗೋಪಾಲ್‌ ಅವರು ಅಧಿಕಾರವಧಿಯಲ್ಲಿ ದೇವಸ್ಥಾನ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆವರಣದಲ್ಲಿ ಈಗಾಗಲೇ ಸಭಾಂಗಣದ ಪಕ್ಕ ಇರುವ ದೇವಸ್ಥಾನವು ರಸ್ತೆ ವಿಸ್ತರಣೆ ಯೋಜನೆ ಸಂದರ್ಭದಲ್ಲಿ ಒಡೆದು ಹಾಕಲಾಗುತ್ತದೆ. ಹೀಗಾಗಿ, ದೇವಸ್ಥಾನದ ಮರುನಿರ್ಮಾಣ ಅಥವಾ ಸ್ಥಳಾಂತರಕ್ಕೆ ಹಿಂದಿನ ಕುಲಪತಿ ಅವರು ಒಪ್ಪಿಗೆ ಸೂಚಿಸಿದ್ದರು. ಜತೆಗ ಸ್ಥಳವನ್ನು ಸಹ ಅಂತಿಮಗೊಳಿಸಲಾಗಿತ್ತು ಎನ್ನಲಾಗಿದೆ.

ಜ್ಞಾನಭಾರತಿ ಆವರಣದಲ್ಲಿ ಮಲ್ಲತ್ತಹಳ್ಳಿಗೆ ಹೋಗುವ ಮಾರ್ಗದ ಗೇಟ್‌ ಬಳಿ ಇರುವ ಗಣೇಶ ದೇವಸ್ಥಾನವನ್ನು ಕೆಂಗೇರಿ ಹೊರ ವರ್ತುಲ ರಸ್ತೆ ಅಗಲೀಕರಣ ಕಾರ್ಯಕ್ಕೆ ತೆರವು ಮಾಡಲು ಸರ್ಕಾರ ಗುರುತಿಸಿದೆ. ಈ ಕಾರಣಕ್ಕೆ ಸಮೀಪದಲ್ಲೇ ಹೊಸ ದೇವಸ್ಥಾನ ನಿರ್ಮಿಸಿ ಅಲ್ಲಿನ ಗಣೇಶ ಮೂರ್ತಿಯನ್ನು ಸ್ಥಳಾಂತರಿಸಲು ವಿಶ್ವವಿದ್ಯಾಲಯ ಮುಂದಾಗಿದೆ. ಇದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ, ಅನಾವಶ್ಯಕವಾಗಿ ವಿವಿಯ ಜಾಗ ಹಾಳು ಮಾಡಲಾಗುತ್ತಿದೆ. ಶೈಕ್ಷಣಿಕ ಅವಶ್ಯಕತೆಗಳಿಗೆ ಪೂರಕವಾದದ್ದನ್ನು ಯೋಜಿಸಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ ಎಸ್‌.ಎಂ ಜಯಕರ ಶೆಟ್ಟಿ ‘ದೇವಸ್ಥಾನ ನಿರ್ಮಾಣ ಕಾರ್ಯ ನಾನು ಅಧಿಕಾರ ವಹಿಸಿಕೊಂಡ ಮೇಲೆ ತೆಗೆದುಕೊಂಡ ನಿರ್ಣಯ ಅಲ್ಲ. ಈ ಹಿಂದೆಯೇ ಆಗಿದೆ. ಇದೀಗ ನಿರ್ಮಾಣ ಕಾರ್ಯ ಆರಂಭವಾಗಿದೆ. ದೇವಸ್ಥಾನದ ವಿಷಯದಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡುವುದು ತಪ್ಪು’ ಎಂದು ಹೇಳಿಕೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *