ಅಭಿಯಾನವಾಗಿ ರೂಪಗೊಳ್ಳುತ್ತಿರುವ ದೇವನೂರು ಮಹದೇವರವರ ಪುಸ್ತಕ “ಆರ್‌ಎಸ್‌ಎಸ್‌ ಆಳ ಮತ್ತು ಅಗಲ”

ಎಚ್.ಆರ್. ನವೀನ್ ಕುಮಾರ್, ಹಾಸನ

ಭಾರತವನ್ನು ನುಂಗಿ ನೀರು ಕುಡಿದು ಏಕಮೇವಾದಿಪತ್ಯವನ್ನು ಸ್ಥಾಪಿಸುವ ಮೂಲಕ ಭಾರತದ ಪ್ರಾಣವಾಯುವಾದ “ಬಹುತ್ವ” ವನ್ನು ಸಮಾಧಿ ಮಾಡಲು ಹೊರಟಿರುವ ಆರ್ ಎಸ್ ಎಸ್ ಸಂಘಟನೆಯ ಚಿಂತನೆಗಳ ಅಪಾಯಗಳ ಕುರಿತು ನಾಡಿನ ಸಾಕ್ಷಿ ಪ್ರಜ್ಞೆಯಾಗಿರುವ ದೇವನೂರು ಮಹದೇವರವರು “ಆರ್ ಎಸ್ ಎಸ್ ಆಳ ಮತ್ತು ಅಗಲ” ಎಂಬ ಕಿರು ಪುಸ್ತಕದಲ್ಲಿ ಸಾಕ್ಷಿ ಸಮೇತ ವಿವರಿಸಿದ್ದಾರೆ.

ಗೋಲ್ವಾಲ್ಕರ್ “we or our nationhood defined”, ಹೆಡ್ಗೆವಾರ್ “ಚಿಂತನ ಗಂಗಾ”, ಸಾವರ್ಕರ್”ಭಾಷಣಗಳು” ಜೊತೆಗೆ ಮನುಷ್ಯ ವಿರೋಧಿ “ಮನುಸ್ಮೃತಿ”, ಮತ್ತು ಭಗವದ್ಗೀತೆಗಳಲ್ಲಿ ದೇಶದ ಕುರಿತು ಹಿಂದುತ್ವದ ಕುರಿತು ಏನೇನೆಲ್ಲಾ ಹೇಳಲಾಗಿದೆ. ಇವುಗಳಲ್ಲಿ ಯಾವುದನ್ನು ಆರ್ ಎಸ್ ಎಸ್ ತನ್ನ ಸಿದ್ದಾಂತದಲ್ಲಿ ಅಳವಡಿಸಿಕೊಂಡು ಭಾರತದಲ್ಲಿ ಕೆಲಸ ಮಾಡುತ್ತಿದೆ. ಈ ಸಿದ್ದಾಂತದಿಂದ ಬಹುತ್ವ ಭಾರತಕ್ಕೆ‌ ಮತ್ತು ನಾವೆಲ್ಲ ಒಪ್ಪಿ ಬದುಕುತ್ತಿರುವ ಭಾರತದ ಸಂವಿಧಾನದ ಆಶಯಗಳಿಗೆ ಹೇಗೆ ದಕ್ಕೆಯುಂಟಾಗುತ್ತದೆ ಎಂಬ ಕುರಿತು ಅತ್ಯಂತ ಸರಳವಾಗಿ ವಿವರಿಸಲಾಗಿದೆ.

ದೇವನೂರರು ಬರೆದಿರುವ ಈ ಪುಟ್ಟ ಕೃತಿ ಅತ್ಯಂತ ಮಹತ್ತರವಾದ ವಿಷಯಗಳನ್ನು ಪ್ರಸಸ್ತಾಪ ಮಾಡಿರುವುದರಿಂದ ನಾಡಿನಾದ್ಯಂತ ಈ ಕೃತಿಗೆ ಬೇಡಿಕೆ ಹೆಚ್ಚಾಗಿದೆ. ಮೊದಲಿಗೆ ಅಭಿನವ ಪ್ರಕಾಶನ ಪ್ರಕಟಿಸಿದ ಕೃತಿಸ್ವಾಮ್ಯವನ್ನು ಮುಕ್ತಗೊಳಿಸಿದುರುದರಿಂದ ಇದುವರೆಗು ಸುಮಾರು 10 ಸಾವಿರದಷ್ಟು ಪ್ರತಿಗಳು ಮುದ್ರಣಗೊಂಡು ಮಾರಾಟವಾಗಿವೆ. ಈಗಲೂ ಹಲವು ಪ್ರಕಾಶನ ಸಂಸ್ಥೆಗಳು ಮತ್ತು ವ್ಯಕ್ತಿಗಳು, ಸಂಘಟನೆಗಳು ಈ ಪುಸ್ತಕವನ್ನು ವ್ಯಾಪಕವಾಗಿ ಮುದ್ರಿಸಿ ಆಂದೋಲನದ ರೂಪದಲ್ಲಿ ಜನರಬಳಿ ಕೊಂಡೊತ್ತುತ್ತಿವೆ.

ಕರ್ನಾಟಕದಲ್ಲಿ ಪುಸ್ತಕಗಳು ಅಭಿಯಾನದ ರೂಪಪಡೆದ ಉದಾಹರಣೆಗಳಿವೆ. ಜಸ್ಟೀಸ್ ಹೆಚ್.ಎನ್. ನಾಗಮೋಹನ ದಾಸ್ ರವರ “ಸಂವಿಧಾನ ಓದು” ಕೃತಿಯನ್ನು ಸಹಯಾನ‌ ಕೆರೆಕೋಣ ಮತ್ತು ಸಮುದಾಯ ಕರ್ನಾಟಕ ಜಂಟಿಯಾಗಿ ಪ್ರಕಟಿಸಿ ನಾಡಿನಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನಡೆಸಿ ಇದುವರೆಗು ಸುಮಾರು 3 ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ಮಾರಾಟ ಮಾಡಲಾಗಿದೆ.

ಆರ್‌ ಎಸ್‌ ಎಸ್‌ ಆಳ ಅಗಲ ಕೃತಿಯಲ್ಲಿರುವ ಕೆಲವು ಅಂಶಗಳನ್ನು ಹಾಗೆ ಯತಾವತ್ತಾಗಿ ನೋಡಿದರೆ ಆರ್ ಎಸ್ ಎಸ್ ನ ಅಪಾಯ ಅರ್ಥವಾಗುತ್ತದೆ.

“ಆರ್ ಎಸ್ ಎಸ್ ಗೆ ಬಹುತ್ವ ಅಂದರೆ ಅವರಿಗೆ ಅದು ಛಿದ್ರತೆ, ವಿಷಬೀಜ. ಗೋಲ್ವಾಲ್ಕರ್ ಅವರು ‘ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು, ಏಕಾತ್ಮಕ ಸರ್ಕಾರದ ಪದ್ಧತಿಯನ್ನು ಸ್ಥಾಪಿಸುವಂತೆ ಸಂವಿಧಾನವನ್ನು ಪುನಃ ಬರೆದಿಡೋಣ’ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಒಂದು ಧ್ವಜ, ಒಂದು ರಾಷ್ಟ್ರ ಸಿದ್ಧಾಂತ, ಒಂದು ಜನಾಂಗ, ಒಬ್ಬ ನಾಯಕ ಎಂಬ ಹಿಟ್ಲರ್ ನ ಸರ್ವಾಧಿಕಾರಿ ಸಿದ್ಧಾಂತವೇ ಇವರ ಆದರ್ಶ”.

“ಮನುಧರ್ಮಶಾಸ್ತ್ರವನ್ನು ವರ್ತಮಾನ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಈಗ ಈ ಆರ್ ಎಸ್ ಎಸ್ ಮತ್ತು ಅದರ ಪರಿವಾರಗಳು ಎಂತಹ ವಾತಾವರಣವನ್ನು ಸೃಷ್ಟಿಸುದ್ದಾರೆಂದರೆ, ಸರ್ಕಾರದ ಇಂತಹ ಕಾನೂನುಗಳನ್ನು ಸರಿಯಾಗಿಲ್ಲ ಅಂದರೂ , ಹಾಗೆ ಅಂದವರನ್ನು ದೇಶದ್ರೋಹಿಗಳೆಂದು ಆರ್ ಎಸ್ ಎಸ್ ಕೂಗುಮಾರಿಗಳ ಗುಂಪು ಅಬ್ಬರಿಸುತ್ತದೆ. ಇಂತಹ ವಾತಾವರಣದಲ್ಲಿ ಭಾರತ ನರಳುತ್ತಿದೆ.”

ಹೌದು, ಛಿದ್ರತೆಯೇ ದೆವ್ವ; ಐಕ್ಯತೆಯೇ ದೈವ ಎಂಬ ವಿವೇಕ ನಮ್ಮದೂ ಆಗಬೇಕಾಗಿದೆ. ಇಂದು ಛಿದ್ರತೆ ಮಿತಿಮೀರುತ್ತಿದೆ. ಅಧರ್ಮವು ಧರ್ಮದ ಮುಖವಾಡ ತೊಟ್ಟು ಕುಣಿದು ಕುಪ್ಪಳಿಸುತ್ತಿದೆ. ಅಸಮಾನತೆಯೇ ನೀತಿಯಾಗುತ್ತಿದೆ! ಧರಹತ್ತಿ ಉರಿದೊಡೆ ನಿಲ್ಲುವುದೆಂತು ಅಂತಾಗಿಬಿಟ್ಟಿದೆ. ಇಂತಹ ಆಳ್ವಿಕೆ ಎಲ್ಲಿಗೆ ತಲುಪಬಹುದು?

ಕೂಗುಮಾರಿ ಮನೆಮುಂದೆ ಬಂದು ಕೂಗಿದಾಗ ಅದಕ್ಕೆ ಓಗೊಟ್ಟರೆ ಅಥವಾ ‘ಕರೆದವರು ಯಾರು?’ ಅಂತ ಕೂಗುಮಾರಿಗೆ ಸ್ಪಂದಿಸಿದರೆ, ಅವರು ರಕ್ತ ಕಾರಿಕೊಂಡು ಸಾಯುತ್ತಾರೆ ಎನ್ನುವುದು ನಮ್ಮ ಜನಪದರ ನಂಬಿಕೆ.

ಅದಕ್ಕಾಗಿ ‘ನಾಳೆ ಬಾ’ ಅಂತ ಬಾಗಿಲ ಮುಂದೆ ಬರೆದಿರುತ್ತಾರೆ.

ಛಿದ್ರತೆಯ, ತಾರತಮ್ಯ ಬಿತ್ತನೆ ಮಾಡುವ ಕೂಗುಮಾರಿಗಳ ಗುಂಪು ನಮ್ಮ ಮನೆ ಮುಂದೆ ಬಂದು ಕೂಗಿದಾಗ, ಅದಕ್ಕೆ ‘ಓ’ಗೊಡದೆ, ‘ನಾಳೆ ಬಾ’ ಎಂದು ನಾವೂ ಕೂಡ ನಮ್ಮ ಜನಪದರಂತೆ ಬಾಗಿಲಲ್ಲಿ ಬರೆದಿಡಬೇಕಾಗಿದೆ. ನಾವು ಓಗೊಟ್ಟರೆ, ಅದರೊಡನೆ ದನಿಗೂಡಿಸಿದರೆ, ಆ ಕ್ಷಣದಿಂದಲೇ ನಮ್ಮ ಪತನವು ಹೆಜ್ಜೆ ಇಡತೊಡಗುತ್ತದೆ. ಹಳ್ಳಿಗಾಡಿನ ಅನುಭವಜನ್ಯವಾದ ‘ಛಿದ್ರತೆಯೇ ದೆವ್ವ ಐಕ್ಯತೆಯೇ ದೈವ’ ಎಂಬ ವಿವೇಕ ನಮ್ಮದೂ ಆಗಬೇಕಾಗಿದೆ.

ಜಾನಪದ ಕತೆಗಳ ಮೂಲಕ ಆರ್ ಎಸ್ ಎಸ್ ನ ಸಿದ್ದಾಂತ ಮತ್ತು ಅದರ ಅಪಾಯಗಳ ಕುರಿತು ಮತ್ತು ಪ್ರಸ್ತುತ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಕೆವಲ ಉತ್ಸವಮೂರ್ತಿಗಳಾಗಿ  ಹೇಗೆ ತನ್ನ ಆರ್ ಎಸ್ ಎಸ್ ಸಿದ್ದಾಂತವನ್ನು ಸರ್ಕಾರದ ಮೂಲಕ ಜಾರಿಗೊಳಿಸುತ್ತಿವೆ ಎಂಬುದರ ಕುರಿತು ಈ ಪುಸ್ತಕದ ಬೆಳಕು ಚಲ್ಲುತ್ತದೆ.

ಪುಸ್ತಕದ ಕೊನೆಯಲ್ಲಿ ದೇವನೂರರು ಹೇಳುವ ಮಾತು ಪ್ರಸ್ತುತ ಸಂದರ್ಭಕ್ಕೆ ಬಹಳ ಮುಖ್ಯ ಅಂತ ಅನಿಸುತ್ತದೆ.”ಈಗಲಾದರೂ ಸಮಾಜನ್ನು ಮುನ್ನಡೆಗೆ ಒಯ್ಯಬೇಕೆಂದಿರುವ ಸಂಘ/ಸಂಘಟನೆ/ಪಕ್ಷಗಳು ತಂತಮ್ಮ ಸಣ್ಣಪುಟ್ಟ ಝರಿಗಳಂತಿರುವ ಸ್ಥಿತಿಯನ್ನು ಮೀರಿ ಒಕ್ಕೂಟವಾಗಿ ಹೊಳೆಯಾಗಿ ಹರಿಯಬೇಕಿದೆ.”

Donate Janashakthi Media

Leave a Reply

Your email address will not be published. Required fields are marked *