ದೇಶದ್ರೋಹ ಕಾನೂನು: ವಾರದೊಳಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ನವದೆಹಲಿ: ದೇಶದ್ರೋಹವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ 124 ಎ ಸೆಕ್ಷನ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸಂಬಂಧಪಟ್ಟಂತೆ ಏಪ್ರಿಲ್ 30ರೊಳಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ನ್ಯಾಯಪೀಠ ಮೇ 5ರ ನಂತರವೂ ಪ್ರಕರಣವನ್ನು ಮುಂದೂಡುವುದಿಲ್ಲ. ಮೇ 5ಕ್ಕೆ ಅಂತಿಮ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡುವಂತೆ ಸೂಚಿಸಲಾಗಿದೆ. ಅದರ ನಂತರವೂ ಮುಂದೂಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದನ್ನು ಓದಿ: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಐಪಿಸಿಯ ಸೆಕ್ಷನ್ 124ಎ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ನಿವೃತ್ತ ಯೋಧ, ಕರ್ನಾಟಕ ಮೂಲದ ಎಸ್ ಜಿ ವೊಂಬತ್ಕೆರೆ ಹಾಗೂ ಮಾಧ್ಯಮ ಸಂಪಾದಕರ ಸಂಘಟನೆ ‘ಎಡಿಟರ್ಸ್ ಗಿಲ್ಡ್’ ಸಲ್ಲಿಸಿದ್ದ ಮನವಿಗಳ ವಿಚಾರಣೆ ನ್ಯಾಯಾಲಯದಲ್ಲಿದೆ.

ಈ ಹಿಂದೆ ಸರ್ವೋಚ್ಛ ನ್ಯಾಯಾಲಯವು “ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಇಂದಿಗೂ ಈ ಕಾನೂನು ಅಗತ್ಯವಿದೆಯೇ?” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ ಮತ್ತು ಬಾಲ ಗಂಗಾಧರ್ ತಿಲಕರ ವಿರುದ್ಧ ಬ್ರಿಟಿಷರು ಜಾರಿಗೊಳಿಸಿದ್ದ ಕಾನೂನು ಇದಾಗಿದೆ ಎಂದು ನ್ಯಾಯಾಲಯ ನೆನಪಿಸಿತು.

ಇದನ್ನು ಓದಿ: ವಸಾಹತುಶಾಹಿ ದೇಶದ್ರೋಹ ಕಾಯ್ದೆ ರದ್ದಾಗಲಿ: ನ್ಯಾ ಎಚ್‌.ಎನ್‌.ನಾಗಮೋಹನ್‌ ದಾಸ್

ಒಬ್ಬ ವ್ಯಕ್ತಿಯ ಅಭಿಪ್ರಾಯವನ್ನು ಮತ್ತೊಬ್ಬ ವ್ಯಕ್ತಿ ಇಷ್ಟಪಡದಿದ್ದಾಗ ಈ ಸೆಕ್ಷನ್‌ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಾಂಗಕ್ಕೆ ಇದರ ಜವಾಬ್ದಾರಿ ಇಲ್ಲದೆ ಅದನ್ನು ಈಗ ದುರುಪಯೋಗವಾಗುತ್ತಿವೆ ಎಂದು ನ್ಯಾಯಮೂರ್ತಿ ಎನ್‌ ವಿ ರಮಣ ಟೀಕಿಸಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮತ್ತು ಕಾರ್ಟೂನ್‌ ಪ್ರಕಟಿಸಿದ್ದಕ್ಕಾಗಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಪತ್ರಕರ್ತರಾದ ಕಿಶೋರಚಂದ್ರ ವಾಂಗ್‌ಖೇಮ್ಚಾ ಮತ್ತು ಕನ್ಹಯ್ಯಾ ಲಾಲ್ ಶುಕ್ಲಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ನಂತರ ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋದಾಗ ದೇಶದ್ರೋಹ ಕಾನೂನಿನ ಪ್ರಸ್ತುತತೆ ಕುರಿತು ಪ್ರಶ್ನೆಗಳೆದ್ದಿವೆ.

Donate Janashakthi Media

Leave a Reply

Your email address will not be published. Required fields are marked *