ದಿನೇಶ್ ಕುಮಾರ್ ಎಸ್.ಸಿ.
ಆಕ್ಸಿಜನ್ ಗಾಗಿ ಹಾಹಾಕಾರ, ಆಸ್ಪತ್ರೆ ಬೆಡ್ ಗಳಿಗಾಗಿ ಹಾಹಾಕಾರ, ರೆಮ್ಡಿಸಿವಿರ್ ಗಾಗಿ ಹಾಹಾಕಾರ… ಈಗ ವ್ಯಾಕ್ಸಿನ್ ಗಾಗಿ ಹಾಹಾಕಾರ. ದೇಶ ಇಂದು ದಿಕ್ಕೆಟ್ಟು ನಿಂತಿದೆ. ಚಿತಾಗಾರಗಳು ತುಂಬಿ ತುಳುಕುತ್ತಿವೆ. ಗಂಗೆ, ಯಮುನೆಗಳಲ್ಲಿ ಹೆಣಗಳ ರಾಶಿರಾಶಿ ತೇಲುತ್ತಿವೆ. ದೇಶದ ಲಕ್ಷಲಕ್ಷ ಜನರು ಧರ್ಮ, ಜಾತಿ, ಲಿಂಗ, ವರ್ಗಗಳ ಬೇಧವಿಲ್ಲದೆ ಉಸಿರಾಡಲು ಪರದಾಡುತ್ತಿದ್ದಾರೆ. ಆದರೆ ದೇಶದ ಪ್ರಧಾನಿ ಮಾತ್ರ ಏನೂ ಆಗಿಲ್ಲವೆಂಬಂತೆ ಮನ್ ಕೀ ಬಾತ್ ನಲ್ಲಿ ಪಾಜಿಟಿವ್ ಸ್ಟೋರಿಗಳನ್ನು ಗಿಳಿಪಾಠ ಹೇಳುತ್ತಿದ್ದಾರೆ.
ಕಳೆದ ವರ್ಷ ಕರೋನಾ ಅಪ್ಪಳಿಸಿದಾಗ ಆದ ಅವಘಡಗಳು ಒಂದೊಂದಲ್ಲ. ಆದರೆ ಆಗ ಇಂಥದ್ದೊಂದು ವೈರಸ್ ನಮ್ಮನ್ನು ಹುರಿದು ಮುಕ್ಕಲು ಬರುತ್ತದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ, ಸರ್ಕಾರಕ್ಕೂ ಕೂಡ. ಹೀಗಾಗಿ ಆಸ್ಪತ್ರೆ, ಆಕ್ಸಿಜನ್, ವೈದ್ಯಕೀಯ ಸಿಬ್ಬಂದಿ, ಚಿಕಿತ್ಸೆಯ ಮಾದರಿ ಯಾವುದೂ ಇಲ್ಲದೆ ನಾವು ನರಳಿದೆವು. ಸರ್ಕಾರಕ್ಕೂ ಹೇಳಿಕೊಳ್ಳಲು ಒಂದು ಸಬೂಬು ಇತ್ತು. ಆದರೆ ಈಗ ವರ್ಷ ಉರುಳಿದೆ. ಹೋದ ವರ್ಷಕ್ಕಿಂತ ದೊಡ್ಡ ನರಕವನ್ನು ನಾವು ನೋಡುತ್ತಿದ್ದೇವೆ. ಸರ್ಕಾರ ಇದನ್ನು ಎದುರಿಸಲು ಯಾವ ಹಂತದಲ್ಲೂ ಸಜ್ಜಾಗಿರಲೇ ಇಲ್ಲ.
ಈ ವರ್ಷ ಕೋವಿಡ್-19 ರ ಎರಡನೇ ಅಲೆ ಬಂದು ಅಪ್ಪಳಿಸಲಿದೆ ಎಂಬುದನ್ನು ಸರ್ಕಾರ ಊಹಿಸಬೇಕಿತ್ತು. ವೈರಸ್ ದಾಳಿಯ ಇತಿಹಾಸದಲ್ಲಿ ಎರಡನೇ ಅಲೆ ಭಯಾನಕವಾಗಿರುತ್ತದೆ ಎಂಬುದು ಸರ್ಕಾರಕ್ಕೆ ಗೊತ್ತಿರದ ವಿಷಯವೇನೂ ಆಗಿರಲಿಲ್ಲ. ಸ್ಪಾನಿಷ್ ಫ್ಲೂ ಎರಡನೇ ಅಲೆಯಲ್ಲೇ ಅತಿಹೆಚ್ಚು ಜನರು ಸತ್ತಿದ್ದು. ಇತರ ವೈರಸ್ ಗಳೂ ಸಹ ಎರಡು, ಮೂರನೇ ಅಲೆಗಳಲ್ಲೇ ಅತಿಹೆಚ್ಚು ಜಗತ್ತನ್ನು ಬಾಧಿಸಿವೆ. ಇಂಗ್ಲೆಂಡ್ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ಎರಡನೇ ಅಲೆ ಬಂದಾಗಲೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಐದು ರಾಜ್ಯಗಳ ಚುನಾವಣೆಗಳು, ನಲವತ್ತು ಲಕ್ಷ ಜನರು ಪಾಲ್ಗೊಂಡ ಕುಂಭಮೇಳ, ಜಾತ್ರೆ-ಸಂತೆ- ಮೇಳ ಎಲ್ಲವೂ ನಡೆದವು. ಒಂದು ಅಪಾಯಕಾರಿ ವೈರಸ್ ಸಮುದಾಯದಲ್ಲಿ ಹರಡಲು ಏನೇನು ಮಾಡಬೇಕೋ ಅದೆಲ್ಲವೂ ನಡೆದವು. ರಾಜಕೀಯ ಪಕ್ಷಗಳು ಚುನಾವಣೆಯ ಮತ್ತಿನಲ್ಲಿ ಎಲ್ಲ ಮರೆತವು. ಸ್ವತಃ ಪ್ರಧಾನಿ ಮೋದಿಯವರೇ ಪಶ್ಚಿಮ ಬಂಗಾಳದ ಚುನಾವಣಾ ರ‍್ಯಾಲಿಯೊಂದರಲ್ಲಿ ಪಾಲ್ಗೊಂಡು, “ಇಷ್ಟೊಂದು ಜನರನ್ನು ನಾನು ಯಾವ ರ‍್ಯಾಲಿಯಲ್ಲೂ ನೋಡಿರಲಿಲ್ಲ” ಎಂದು ಉದ್ಘರಿಸಿದರು!
ಇದೆಲ್ಲದರ ಪರಿಣಾಮವನ್ನು ದೇಶದ ಸಾಮಾನ್ಯ ಜನರು ಉಣ್ಣುತ್ತಿದ್ದಾರೆ. ಇಡೀ ದೇಶವೇ ಉಸಿರುಗಟ್ಟಿ ನಲುಗುತ್ತಿದೆ. ಬೇರೆ ಎಲ್ಲ ವಿಷಯ ಹಾಗಿರಲಿ, ದೇಶದ ಜನರಿಗೆ ವ್ಯಾಕ್ಸಿನ್ ನೀಡಿ ಜೀವಗಳನ್ನು ಉಳಿಸಬಹುದಿತ್ತು. ಕೋವಿಡ್ ಖಾಯಿಲೆಗೆ ಇದುವರೆಗೆ ಯಾವುದೇ ಔಷಧಿ ಎಲ್ಲೂ ತಯಾರಾಗಿಲ್ಲ. ಕೋವಿಡ್ ನಿಂದಾಗುವ ಸಮಸ್ಯೆಗಳಿಗಷ್ಟೇ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಕೋವಿಡ್ ತಡೆಗೆ ವ್ಯಾಕ್ಸಿನ್ ಒಂದೇ ಪರಿಹಾರ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಈಗೇನಾಗುತ್ತಿದೆ? ಯಾಕೆ ಭಾರತೀಯರಿಗೆ ಸಕಾಲದಲ್ಲಿ ವ್ಯಾಕ್ಸಿನ್ ನೀಡಲು ಸಾಧ್ಯವಾಗುತ್ತಿಲ್ಲ? ಸರ್ಕಾರ ಎಡವಿದ್ದಾದರೂ ಎಲ್ಲಿ?
ಈ ಲೇಖನ ಸಿದ್ಧಪಡಿಸುವ ಹೊತ್ತಿಗೆ ಮೇ.13 ರ ಸಂಜೆಯವರೆಗೆ ಇಡೀ ದೇಶದಲ್ಲಿ ವ್ಯಾಕ್ಸಿನ್ ಪಡೆದವರ ಒಟ್ಟು ಸಂಖ್ಯೆ 17,82,96,882. ಈ ಪೈಕಿ ಎರಡೂ ಡೋಸ್ ಪಡೆದವರ ಸಂಖ್ಯೆ 3,92,43,482. ಮೊದಲ ಡೋಸ್ ಪಡೆದವರ ಸಂಖ್ಯೆ 13,90,52,400. ಇದು ಭಾರತ ಸರ್ಕಾರದ ಕೋವಿನ್ ವೆಬ್ ಸೈಟ್ ನೀಡುವ ಅಧಿಕೃತ ಮಾಹಿತಿ. ನೂರಾ ಮೂವತ್ತಾರು ಕೋಟಿ ಜನಸಂಖ್ಯೆಯ ಭಾರತದಲ್ಲಿ ಕೇವಲ ನಾಲ್ಕು ಕೋಟಿಯಷ್ಟು ಜನರಷ್ಟೇ ಎರಡೂ ಡೋಸ್ ಪಡೆದಿದ್ದಾರೆ! ಅಂದರೆ ದೇಶದ ಜನಸಂಖ್ಯೆಯ ಮೂರು ಪರ್ಸೆಂಟ್ ಗಿಂತ ಸ್ವಲ್ಪ ಕಡಿಮೆ ಜನರಿಗೆ ಲಸಿಕೆ ಕೊಡಲಾಗಿದೆ.
ಯಾಕೆ ಹೀಗಾಯಿತು? ಕೋವಿಡ್-19 ದಾಳಿಯಿಟ್ಟ ನಂತರ ಜಗತ್ತಿನ ನಾನಾ ದೇಶಗಳು ಲಸಿಕೆ ತಯಾರಿಸಲು ತೊಡಗಿದಂತೆಯೇ ನಮ್ಮಲ್ಲೂ ಸಹ ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ಗಳ ಸಹಯೋಗದಲ್ಲಿ ವ್ಯಾಕ್ಸಿನ್ ಸಂಶೋಧನೆ ನಡೆದು ಕೊವ್ಯಾಕ್ಸಿನ್ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಲಾಯಿತು. ಎರಡು ಹಂತಗಳ ಪ್ರಯೋಗವೂ ನಡೆಯಿತು. ಮೂರನೇ ಹಂತದ ಪ್ರಯೋಗ ನಡೆಯುವ ಮುನ್ನ ತುರ್ತು ಉಪಯೋಗಕ್ಕಾಗಿ ಇದರ ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿಯನ್ನೂ ನೀಡಿತು. ಇದೇ ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುವ ಒಪ್ಪಂದವನ್ನು ಭಾರತದ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಮಾಡಿಕೊಂಡಿತು. ಹೀಗಾಗಿ ಭಾರತಕ್ಕೆ ಸುಲಭವಾಗಿ ಕೈಗೆಟಕುವ ಎರಡು ವ್ಯಾಕ್ಸಿನ್ ಗಳು ನಮ್ಮ ಬಳಿಯೇ ಇದ್ದವು.
ಭಾರತದಲ್ಲಿ ಅರವತ್ತು ವರ್ಷ ದಾಟಿದವರಿಗೆ ವ್ಯಾಕ್ಸಿನ್ ನೀಡುವ ಅಭಿಯಾನ ಈ ವರ್ಷ ಮಾರ್ಚ್ 1ರಂದು ಆರಂಭವೂ ಆಯಿತು. ಆದರೆ ಭಾರತೀಯರು ಇನ್ನೂ ವ್ಯಾಕ್ಸಿನ್ ಗೆ ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ವ್ಯಾಕ್ಸಿನ್ ಸುರಕ್ಷಿತವಾಗಿದೆ, ಇದನ್ನು ಬಳಸಿ ಎಂದು ಸರ್ಕಾರ ವಿಶ್ವಾಸದ ಧ್ವನಿಯಲ್ಲಿ ಹೇಳಲೇ ಇಲ್ಲ. ಕೊವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗವನ್ನು ಮಾಡಿರಲೇ ಇಲ್ಲ. ಕೋವಿಶೀಲ್ಡ್ ಮೂರನೇ ಹಂತದ ಪ್ರಯೋಗ ನಡೆಯುತ್ತಿರುವಾಗಲೇ ಸೀರಂ ಇನ್ಸ್‌ಟಿಟ್ಯೂಟ್ ನ ಆಧಾರ್ ಪೂನಾವಾಲಾ ಕೋಟಿಗಟ್ಟಲೆ ವಯಾಲ್ಸ್ ತಯಾರಿಸಿ ಆಗಿತ್ತು. ಇದೆಲ್ಲವೂ ಜನರಿಗೆ ವ್ಯಾಕ್ಸಿನ್ ಬಗ್ಗೆ ಗುಮಾನಿಗಳು ಹುಟ್ಟಲು ಕಾರಣವಾಗಿದ್ದವು. ಸರ್ಕಾರವೂ ಕೂಡ ಆಕ್ರಮಣಕಾರಿಯಾಗಿ ಆಗಿ ವ್ಯಾಕ್ಸಿನ್ ಬಗ್ಗೆ ಪ್ರಚಾರ ಮಾಡಲೇ ಇಲ್ಲ.
ಭಾರತ ಸರ್ಕಾರ ಭಾರತೀಯರಿಗೆ ವ್ಯಾಕ್ಸಿನ್ ಕೊಡುವುದಕ್ಕಿಂತ ಇತರ ದೇಶಗಳಿಗೆ ಹಂಚುವುದನ್ನೇ ಆದ್ಯತೆಯನ್ನಾಗಿಸಿಕೊಂಡಿತು. ಒಟ್ಟು 95 ದೇಶಗಳಿಗೆ ಭಾರತದಿಂದ ವ್ಯಾಕ್ಸಿನ್ ಸರಬರಾಜಾಯಿತು. ಒಟ್ಟು 6.6 ಕೋಟಿ ವಯಾಲ್ಸ್ ಇಲ್ಲಿಂದ ಹೊರಗೆ ಹೋದವು. ಈ ಮೂಲಕ ಭಾರತ ಕೋವಿಡ್ ವಿರುದ್ಧ ಜಯಗಳಿಸಿ ಇತರೆ ದೇಶಗಳಿಗೆ ಸಹಾಯ ಮಾಡುತ್ತಿದೆ ಎಂಬ ಬಿಲ್ಡಪ್ ಪಡೆದುಕೊಳ್ಳುವ ಪಿಆರ್ ಕೆಲಸವೂ ಇತ್ತು. ಆಳುವ ಪಕ್ಷದ ಐಟಿ ಸೆಲ್ ಹೀಗೆಯೇ ಪ್ರಚಾರ ನಡೆಸಿತು.
ಆದರೆ ವಾಸ್ತವವೆಂದರೆ ಭಾರತದಿಂದ ಹೊರಹೋದ ವ್ಯಾಕ್ಸಿನ್ ಎಲ್ಲವೂ ಭಾರತ ಸರ್ಕಾರ ದಾನವಾಗಿ ಕೊಟ್ಟಿದ್ದೇನಲ್ಲ. ಇತರೆ ದೇಶಗಳಿಗೆ ಸಹಾಯವಾಗಿ ಹೋಗಿರುವುದು 1.6 ಕೋಟಿ ಡೋಸ್ ಗಳು. ಮಿಕ್ಕಿದ್ದೆಲ್ಲವೂ ವಿಶ್ವ ಆರೋಗ್ಯ ಸಂಸ್ಥೆಯ ಕೊವ್ಯಾಕ್ಸ್ ಕಾರ್ಯಕ್ರಮದ ಅಡಿಯಲ್ಲಿ ವ್ಯಾಕ್ಸಿನ್ ಕಂಪೆನಿಗಳೇ ಬೇರೆ ದೇಶಗಳಿಗೆ ಮಾರಾಟ ಮಾಡಿದೆ. ಎಂಥ ಕ್ರೂರ ವ್ಯಂಗ್ಯ ನೋಡಿ. ನಮ್ಮ ದೇಶದಲ್ಲಿ ತಯಾರಾದ ವ್ಯಾಕ್ಸಿನ್ ನಮ್ಮ ಜನರಿಗೇ ಉಪಯೋಗಕ್ಕೆ ಬರಲಿಲ್ಲ! ಇದರಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳೂ ಇದ್ದವು. ಕೋವಿಶೀಲ್ಡ್ ನ ಪೇಟೆಂಟ್ ಇರುವುದು ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್ ಗಳ ಬಳಿ. ಹೀಗಾಗಿ ಭಾರತದಲ್ಲಿ ತಯಾರಾಗುವ ಎಲ್ಲ ಕೋವಿಶೀಲ್ಡ್ ಲಸಿಕೆ ನಮಗೇ ಬೇಕು ಎಂದು ನಾವು ಕೇಳಲಾಗುವುದಿಲ್ಲ. ಸೀರಂ ಇನ್ಸ್‌ಟಿಟ್ಯೂಟ್ ಬೇರೆ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನೂ ಪಾಲಿಸಬೇಕಿತ್ತು. ಆದರೆ ಕೊವ್ಯಾಕ್ಸಿನ್ ನಮ್ಮದೇ ಲಸಿಕೆ. ಅದನ್ನಾದರೂ ದೊಡ್ಡ ಪ್ರಮಾಣದಲ್ಲಿ ತಯಾರಿಸಬಹುದಿತ್ತಲ್ಲ? ಯಾಕೋ ಏನೋ ಒಕ್ಕೂಟ ಸರ್ಕಾರ ಕೋವಿಶೀಲ್ಡ್ ಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಕೊವ್ಯಾಕ್ಸಿನ್ ಗೆ ನೀಡಲೇ ಇಲ್ಲ. ಹೈದರಾಬಾದ್ ಮೂಲದ ಬಯೋಟೆಕ್ ಸಂಸ್ಥೆ ಈಗಲೂ ಕೊವ್ಯಾಕ್ಸಿನ್ ಲಸಿಕೆ ದೊಡ್ಡ ಪ್ರಮಾಣದಲ್ಲಿ ತಯಾರಿಸುವಷ್ಟು ಮೂಲಭೂತ ಸೌಕರ್ಯ, ಕಚ್ಚಾ ವಸ್ತುಗಳನ್ನು ಹೊಂದಿಲ್ಲ. ಭಾರತೀಯರ ಹೆಮ್ಮೆಯ ಲಸಿಕೆ ಎಂದು ಬ್ರಾಂಡ್ ಆದ ಕೊವ್ಯಾಕ್ಸಿನ್ ಈಗ ಕುಂಟುತ್ತ ಸಾಗುತ್ತಿದೆ.
ಇದೆಲ್ಲವನ್ನು ಬದಿಗಿಟ್ಟು ನೋಡುವುದಾದರೂ ಸರ್ಕಾರ ನಿಜವಾಗಿಯೂ ಇಚ್ಛಾಶಕ್ತಿ ಪ್ರದರ್ಶಿಸಿದ್ದರೆ ಕನಿಷ್ಠ ಪಕ್ಷ ದೇಶದ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ನೀಡಬಹುದಿತ್ತಾ ಎಂಬುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಉತ್ತರ ‘ಹೌದು’. ಇದಕ್ಕೆ ಆಧಾರವಾಗಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೀರಂನ ಒಡೆಯ ಆಧಾರ್ ಪೂನಾವಾಲಾ ನೀಡಿದ ಹೇಳಿಕೆಯನ್ನು ಗಮನಿಸಬಹುದು. ಭಾರತ ಸರ್ಕಾರ 80,000 ಕೋಟಿ ರುಪಾಯಿಗಳನ್ನು ಖರ್ಚು ಮಾಡಲು ಸಿದ್ಧವಿದ್ದರೆ ಒಂದೇ ವರ್ಷದಲ್ಲಿ ಇಡೀ ದೇಶದ ಜನರನ್ನು ಸಂಪೂರ್ಣವಾಗಿ ವ್ಯಾಕ್ಸಿನೇಟ್ ಮಾಡಬಹುದು ಎಂದಿದ್ದರು ಪೂನಾವಾಲಾ! 80,000 ಕೋಟಿ ಬೇಡ, 40,000 ಕೋಟಿಯನ್ನಾದರೂ ಸರ್ಕಾರ ಖರ್ಚು ಮಾಡಿತಾ? ಇಲ್ಲ. ಬೇರೇನೂ ಬೇಡ, ಈ ವರ್ಷದ ಬಜೆಟ್ ನಲ್ಲಿ ಲಸಿಕೆಗಾಗಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 35,000 ಕೋಟಿ ರುಪಾಯೊ ಎತ್ತಿಟ್ಟಿದ್ದರಲ್ಲ, ಅದೆಲ್ಲಿ ಹೋಯಿತು? ಅದನ್ನಾದರೂ ಖರ್ಚು ಮಾಡಿದರಾ?
ಸರ್ಕಾರ ನೀಡಿದ ಇತ್ತೀಚಿನ ಮಾಹಿತಿ ಪ್ರಕಾರ, ಇದುವರೆಗೆ 35,000 ಕೋಟಿ ರುಪಾಯಿಗಳಲ್ಲಿ ಖರ್ಚು ಮಾಡಿರುವುದು ಕೇವಲ 2,993 ಕೋಟಿ ರುಪಾಯಿಗಳು ಮಾತ್ರ! ಅಂದರೆ ಮೀಸಲಿಟ್ಟ ಹಣದಲ್ಲಿ ಶೇ.15ರಷ್ಟನ್ನು ಮಾತ್ರ ಖರ್ಚು ಮಾಡಿದೆ, ಮಿಕ್ಕ 32,007 ಕೋಟಿ ರುಪಾಯಿ ಹಾಗೇ ಇಟ್ಟುಕೊಂಡಿದೆ. ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಪ್ರಕಾರವೇ ಕೋವಿಶೀಲ್ಡ್ ಲಸಿಕೆಯನ್ನು ಸೀರಂ ಸಂಸ್ಥೆ ಒಕ್ಕೂಟ ಸರ್ಕಾರಕ್ಕೆ ಕೇವಲ 150 ರುಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಅಲ್ಲಿಗೆ 35,000 ಕೋಟಿ ರುಪಾಯಿ ಪೂರ್ತಿ ಖರ್ಚು ಮಾಡಿದ್ದರೆ ಎಷ್ಟು ಕೋಟಿ ಲಸಿಕೆ ಪಡೆಯಬಹುದಿತ್ತು, ಲೆಕ್ಕ ಮಾಡಿ ನೋಡಿ. ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರ ಲಸಿಕೆಗಾಗಿ ಖರ್ಚು ಮಾಡಿದ ಹಣದೊಂದಿಗೆ ಈ ವರ್ಷ ಎತ್ತಿಟ್ಟ ಹಣವನ್ನೂ ಸೇರಿಸಿದರೆ 40 ಕೋಟಿ ಲಸಿಕೆ ಕೇಂದ್ರ ಸರ್ಕಾರದ ಬಳಿ ಇರಬೇಕಿತ್ತು. ಆದರೆ ಹಾಗಾಗಲೇ ಇಲ್ಲ.
ಇನ್ನು ಒಕ್ಕೂಟ ಸರ್ಕಾರ ಮಾಡಿದ ಮತ್ತೊಂದು ಯಡವಟ್ಟೆಂದರೆ ಲಸಿಕೆ ಹಂಚಿಕೆಯನ್ನೂ ಕೇಂದ್ರೀಕರಣಗೊಳಿಸಿ, ಎಲ್ಲ ರಾಜ್ಯಗಳೂ ಒಕ್ಕೂಟ ಸರ್ಕಾರದ ಬಳಿಯೇ ಬೇಡುವ ಸ್ಥಿತಿ ನಿರ್ಮಿಸಿದ್ದು. ರಾಜ್ಯ ಸರ್ಕಾರಗಳು ನೇರವಾಗಿ ಲಸಿಕೆ ಕಂಪೆನಿಗಳಿಂದ ಲಸಿಕೆ ಪಡೆಯುವ ಹಾಗೇ ಇರಲಿಲ್ಲ. ಮೇ.1 ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಶೇ. 50 ರಷ್ಟು ಲಸಿಕೆಗಳನ್ನು ಕೊಂಡುಕೊಳ್ಳುವ ಅವಕಾಶವನ್ನು ಒಕ್ಕೂಟ ಸರ್ಕಾರ ನೀಡಿದೆ. ಆದರೆ ಇದೇ ನಿರ್ಧಾರವನ್ನು ಹಿಂದೆಯೇ ತೆಗೆದುಕೊಂಡಿದ್ದರೆ, ಎಷ್ಟೋ ರಾಜ್ಯಗಳು ತಮಗೆ ಬೇಕಾದಷ್ಟು ಲಸಿಕೆಯನ್ನು ಗ್ಲೋಬಲ್ ಟೆಂಡರ್ ಮೂಲಕ ಪಡೆಯಬಹುದಿತ್ತು. ಈಗ ಕರ್ನಾಟಕ, ಕೇರಳ ಮತ್ತಿತರ ರಾಜ್ಯಗಳು ಆ ಕೆಲಸ ಮಾಡುತ್ತಿವೆ. ಆದರೆ ಎಷ್ಟೊಂದು ಜೀವಗಳು ಬಲಿಯಾದ ನಂತರ!
ಒಕ್ಕೂಟ ಸರ್ಕಾರ ಏಪ್ರಿಲ್ ತಿಂಗಳಿನವರೆಗೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಮೇಲೆಯೇ ಹೆಚ್ಚು ಅವಲಂಬಿತವಾಗಿತ್ತು. ಇದು ಕೂಡ ಸಮಸ್ಯೆಯ ಇನ್ನೊಂದು ಮೂಲ. ಇತರೆ ದೇಶಗಳಲ್ಲಿ ಬಳಕೆಯಾಗುತ್ತಿರುವ ವ್ಯಾಕ್ಸಿನ್ ಗಳಿಗೆ ಭಾರತ ಸರ್ಕಾರ ಅನುಮತಿ ನೀಡಿರಲಿಲ್ಲ. ಕೊನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪುಟ್ನಿಕ್ ನಂಥ ವ್ಯಾಕ್ಸಿನ್ ಗಳಿಗೆ ಸರ್ಕಾರ ಅನುಮತಿ ನೀಡಬೇಕೆಂದು ಆಗ್ರಹಿಸಿದ ಮೇಲೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿತು. ರಷ್ಯಾದಲ್ಲಿ ತಯಾರಾಗಿರುವ ಸ್ಪುಟ್ನಿಕ್ ಲಸಿಕೆ ಜಗತ್ತಿನ ಇತರ ಎಲ್ಲ ಲಸಿಕೆಗಳಿಗಿಂತ ಹೆಚ್ಚು ಪ್ರಭಾವಶಾಲಿ ಎಂದು ಹೇಳಲಾಗುತ್ತಿದೆ. ಭಾರತದ ಔಷಧಿ ಕಂಪೆನಿಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಡಾ.ರೆಡ್ಡೀಸ್ ಲ್ಯಾಬರೇಟರೀಸ್ ಭಾರತದಲ್ಲಿ ಸ್ಪುಟ್ನಿಕ್ ತಯಾರಿಸುವ ಒಪ್ಪಂದ ಮಾಡಿಕೊಂಡಿದೆ. ಮೇ.1ರಂದು ಒಂದೂವರೆ ಲಕ್ಷ ಡೋಸ್ ಗಳು ಈಗಾಗಲೇ ರೆಡ್ಡೀಸ್ ಕೈ ಸೇರಿದೆ. ಆದರೆ ಹಲವು ಹಂತಗಳ ಪರೀಕ್ಷೆಗಳ ಪ್ರೊಟೋಕಾಲ್ ದಾಟಿದ ನಂತರವೇ ಅದು ಜನರಿಗೆ ಬಳಕೆಯಾಗಲಿದೆ. ರೆಡ್ಡೀಸ್ ಸಂಸ್ಥೆ ಏಳುವರೆ ಕೋಟಿ ಡೋಸ್ ಗಳನ್ನು ಭಾರತದಲ್ಲೇ ತಯಾರಿಸುವ ಗುರಿ ಹೊಂದಿದೆ. ಸ್ಪುಟ್ನಿಕ್ ಮತ್ತು ಇನ್ನಷ್ಟು ಹೊರದೇಶದ ಲಸಿಕೆಗಳಿಗೆ ಮೊದಲೇ ಅನುಮತಿ ನೀಡಿದ್ದರೆ ಸರ್ಕಾರದ ಕೆಲಸವೂ ಹಗುರವಾಗುತ್ತಿರಲಿಲ್ಲವೇ?
ಭಾರತದಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸಿದ ನಂತರ ಕಳೆದ ಏಪ್ರಿಲ್ 28ರಂದು ಹನ್ನೊಂದು ಕೋಟಿ ಕೋವಿಶೀಲ್ಡ್ ಲಸಿಕೆಗಾಗಿ ಬೇಸಿಕೆ ಸಲ್ಲಿಸಿದೆ. ಇದಕ್ಕೂ ಮುನ್ನ ಆರ್ಡರ್ ಮಾಡಿ ಪಡೆದ ಲಸಿಕೆಯೂ ಸೇರಿದಂತೆ ಸೀರಂ ಕೊಡುತ್ತಿರುವುದು 21 ಕೋಟಿ ಡೋಸ್. ಭಾರತ್ ಬಯೋಟೆಕ್ ಗಾಗಿ ಒಕ್ಕೂಟ ಸರ್ಕಾರ ಬೇಡಿಕೆ ಸಲ್ಲಿಸಿರುವುದು 7 ಕೋಟಿ ಡೋಸ್ ಕೊವ್ಯಾಕ್ಸಿನ್ ಮಾತ್ರ. ಅದರಲ್ಲೂ ಐದು ಕೋಟಿಯನ್ನು ಬೇಡಿಕೆ ಸಲ್ಲಿಸಿರುವುದು ಏಪ್ರಿಲ್ 28ರಂದು.
ಭಾರತ್ ಬಯೋಟೆಕ್ ಸಂಸ್ಥೆ ಸೀರಂನಷ್ಟು ವೇಗವಾಗಿ ಕೆಲಸ ಮಾಡುತ್ತಿಲ್ಲ. ಇದುವರೆಗೆ ಅದು ಸರಬರಾಜು ಮಾಡಿದ ಲಸಿಕೆಗಳ ಸಂಖ್ಯೆ ಒಂದು ಕೋಟಿ ಡೋಸ್‍ಗಳನ್ನು ಮೀರಿಲ್ಲ.
45 ವರ್ಷ ಮೀರಿದ ಮತ್ತು ಕೋವಿಡ್ ಸಂದರ್ಭದಲ್ಲಿ ಫ್ರಂಟ್ ಲೈನ್ ವರ್ಕರ್ ಗಳನ್ನು ಲೆಕ್ಕ ಹಾಕುವುದಾದರೆ ಅವರ ಸಂಖ್ಯೆಯೇ 30 ಕೋಟಿ ಮೀರುತ್ತದೆ. ಮೂವತ್ತು ಕೋಟಿ ಜನರಿಗೆ ಅರವತ್ತು ಕೋಟಿ ಲಸಿಕೆ ಬೇಕಾಗುತ್ತದೆ. ಆದರೆ ಒಕ್ಕೂಟ ಸರ್ಕಾರ ಎರಡೂ ಲಸಿಕೆಗಳಿಗೆ ಬೇಡಿಕೆ ಸಲ್ಲಿಸಿರುವುದು ಕೇವಲ 28 ಕೋಟಿ ಮಾತ್ರ. ಹೀಗಿರುವಾಗ ಮೇ.1 ರಿಂದ ಹದಿನೆಂಟು ವರ್ಷ ಮೀರಿರುವವರಿಗೂ ಲಸಿಕೆ ಕೊಡುವುದಾಗಿ ಸರ್ಕಾರ ಘೋಷಿಸಿತು. ಮೊದಲ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಸಿಕ್ಕಿಲ್ಲ. 45 ದಾಟಿದವರಲ್ಲಿ ಬಹುತೇಕರಿಗೆ ಇನ್ನೂ ಮೊದಲ ಡೋಸ್ ಸಿಕ್ಕಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಯಾವ ಧೈರ್ಯದ ಮೇಲೆ ಇಂಥ ಘೋಷಣೆ ಮಾಡಿತು? ಇದ್ಯಾವುದೂ ಗೊತ್ತಿಲ್ಲದ ಜನರು ಲಸಿಕೆಗಾಗಿ ಬುಕ್ ಮಾಡಿ, ಅದು ಸಿಗದೆ ಇಡೀ ದೇಶದಲ್ಲಿ ಹಾಹಾಕಾರವೆದ್ದಿದೆ. ಕೊನೆಗೆ ರಾಜ್ಯ ಸರ್ಕಾರಗಳು 18 ಮೀರಿದವರಿಗೆ ಸದ್ಯಕ್ಕೆ ಲಸಿಕೆ ಇಲ್ಲ ಎಂದು ಹೇಳಿ ಕೈ ಕಟ್ಟಿ ಕುಳಿತಿವೆ.
ಇದೆಲ್ಲದರ ನಡುವೆ ಕೋವಿಶೀಲ್ಡ್ ತಯಾರಿಸುತ್ತಿರುವ ಆಧಾರ್ ಪೂನಾವಾಲಾ ತನ್ನ ಕುಟುಂಬ ಸಮೇತ ಲಂಡನ್ ತೆರಳಿದ್ದಾರೆ. ಭಾರತದಲ್ಲಿ ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಆತ ಹೇಳುತ್ತಿದ್ದಾರೆ. ಕೋವಿಶೀಲ್ಡ್ ಪೂರೈಕೆಗೆ ‘ಬಲಶಾಲಿಗಳು’ ತನ್ನ ಮೇಲೆ ಒತ್ತಡ ಹೇರಿ ಕೊಲೆಯನ್ನೂ ಮಾಡಬಹುದು ಎಂಬುದು ಆತನ ಅನುಮಾನ. ಭಾರತದಲ್ಲಿ ಹೀಗೆ ಪೂನಾವಾಲರನ್ನು ಬೆದರಿಸುವ ಶಕ್ತಿ ಯಾರಿಗೆ ಇರಬಹುದು. ಸದ್ಯಕ್ಕಿದು ಉತ್ತರ ಸಿಗದ ಪ್ರಶ್ನೆ.
ಸೀರಂ ಸಂಸ್ಥೆ ಈಗ ತಿಂಗಳಿಗೆ ಐದುಕೋಟಿ ಡೋಸ್ ಕೋವಿಶೀಲ್ಡ್ ತಯಾರಿಸುವ ಶಕ್ತಿ ಹೊಂದಿದೆ. ಆಗಸ್ಟ್ ತಿಂಗಳಿನಿಂದ ಅದು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದೆ. ಆರ್ಥಿಕವಾಗಿ ಸ್ಥಿತಿವಂತ ರಾಜ್ಯಗಳು ತಾವೇ ನೇರವಾಗಿ ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ಖರೀದಿಸಿ ಜನರಿಗೆ ನೀಡಬಹುದು. ದುರ್ಬಲ ರಾಜ್ಯಗಳು ಕೇಂದ್ರ ಸರ್ಕಾರದ ಕಡೆಯೇ ನೋಡುತ್ತ ಕೂರಬಹುದು. ಎಂದಿನಂತೆ ಹಿಂದಿಯನ್ ರಾಜ್ಯಗಳು ಇತರ ರಾಜ್ಯಗಳಿಗಿಂತ ಹೆಚ್ಚು ವ್ಯಾಕ್ಸಿನ್ ಒಕ್ಕೂಟ ಸರ್ಕಾರದಿಂದ ಪಡೆಯುತ್ತಿರುವುದನ್ನೂ ನಾವು ಗಮನಿಸುತ್ತಿದ್ದೇವೆ.
ಇದೆಲ್ಲದರ ನಡುವೆ ನಮ್ಮನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆ, ಕೋವಿಡ್ ಎರಡನೇ ಅಲೆ ಯಾವಾಗ ಮುಗಿಯುತ್ತದೆ? ಮೂರನೇ ಅಲೆ ಯಾವಾಗ ಪ್ರಾರಂಭವಾಗುತ್ತದೆ? ಎಂಬುದು. ಸರ್ಕಾರಗಳು ಈಗಲೂ ಎಚ್ಚೆತ್ತುಕೊಂಡ ಪ್ರತಿಯೊಬ್ಬ ಭಾರತೀಯನಿಗೆ ಲಸಿಕೆ ಕೊಡದೇ ಹೋದರೆ, ಎರಡನೇ ಅಲೆಯಲ್ಲಿ ಜೀವ ಉಳಿಸಿಕೊಂಡವರು ಮೂರನೇ ಅಲೆಯಲ್ಲಿ ಜೀವ ಉಳಿಸಿಕೊಳ್ಳಬಹುದು ಎಂಬ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ.
ದೇಶವನ್ನಾಳುವ ಜನರಿಗೆ ಮಹಲುಮಂಟಪಗಳು, ಧರ್ಮ ದೇವರು ದೇವಸ್ಥಾನಗಳು, ಪ್ರತಿಮೆ ಸ್ಮಾರಕಗಳೇ ಮುಖ್ಯವಾಗಿ ಆರೋಗ್ಯ-ಶಿಕ್ಷಣದಂಥ ಮೂಲಭೂತ ಸೇವೆಗಳು ತೆರೆಮರೆಗೆ ಸರಿದರೆ ಏನೇನು ಅನಾಹುತವಾಗಬಹುದೋ ಅದೆಲ್ಲವೂ ಈಗ ದೇಶದಲ್ಲಿ ನಡೆಯುತ್ತಿವೆ.