ಲಖಿಂಪುರ ಖೇರಿ: ಮೂರು ಪ್ರಮುಖ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಸೇರಿದಂತೆ ಹಲವು ಮಹತ್ವದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ನಡೆಸಿದ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಆರೋಪಿಸಿದೆ.
ಎಸ್‌ಕೆಎಂ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕ ಶಿವಕುಮಾರ್ ಶರ್ಮಾ ಉತ್ತರಪ್ರದೇಶದ ಜನತೆ ಬಿಜೆಪಿಗೆ ತಕ್ಕಶಿಕ್ಷೆ ನೀಡಬೇಕೆಂದು ಮನವಿ ಮಾಡಿದ್ದಾರೆ. ರೈತ ನಾಯಕ ರಾಕೇಶ್ ಟಿಕಾಯತ್, ಯೋಗೇಂದ್ರ ಯಾದವ್ ಮತ್ತು ಹನ್ನಾನ್ ಮೊಲ್ಲಾ ಸೇರಿದಂತೆ ಎಸ್‌ಕೆಎಂ ನಾಯಕರು ಗೋಷ್ಠಿಯಲ್ಲಿ ಹಾಜರಿದ್ದರು.
‘ಕಕ್ಕಾಜಿ’ ಅವರು, ‘ರೈತರ ಪ್ರತಿಭಟನೆ ವೇಳೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು(ಎಂಎಸ್‌ಪಿ) ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕೇಂದ್ರವು ಆ ಭರವಸೆಯನ್ನು ಈಡೇರಿಸಿಲ್ಲ’ ಎಂದು ಆರೋಪಿಸಿದರು.
ಮೋದಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ರೈತರಿಗೆ ಮೋಸ ಮಾಡಿದೆ ಇತ್ತೀಚಿನ ಕೇಂದ್ರ ಬಜೆಟ್ ಕೃಷಿ ಸಬ್ಸಿಡಿಗಳನ್ನು ತೀವ್ರವಾಗಿ ಕಡಿತಗೊಳಿಸಿದ್ದು ರೈತ ಸಮುದಾಯಕ್ಕೆ ಏನೂ ಇಲ್ಲದಂತೆ ಮಾಡಿದೆ.
‘ಕೇಂದ್ರವು ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಸುಮಾರು 46,000 ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲಾಗುವುದು, ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಆರ್ಥಿಕ ಪರಿಹಾರ ನೀಡಲಾಗುವುದು, ರೈತರನ್ನು ವಿದ್ಯುತ್ ಬಿಲ್‌ಗಳ ವ್ಯಾಪ್ತಿಯಿಂದ ದೂರವಿಡಲಾಗುವುದು ಎಂಬ ಭರವಸೆಗಳನ್ನು ನೀಡಲಾಗಿತ್ತು. ಪ್ರಧಾನಿ ಅವರು 2021ರ ನವೆಂಬರ್ 19ರಂದು ಎಂಎಸ್‌ಪಿ ಖಾತರಿಪಡಿಸಲು ಸಮಿತಿ ರಚನೆ ಮಾಡಲಾಲಾಗುವುದೆಂದು ಘೋಷಿಸಿದ್ದರು. ಆದರೆ, ಇದುವರೆಗೆ ಕೇಂದ್ರ ಸರ್ಕಾರ ಯಾವ ಸಮಿತಿಯನ್ನೂ ರಚನೆ ಮಾಡಿಲ್ಲ’ ಎಂದು ಶರ್ಮಾ ತಿಳಿಸಿದರು.
‘ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕಳೆದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಎಂಎಸ್‌ಪಿ ಸಮಿತಿ ರಚನೆಗಾಗಿ ಸರ್ಕಾರ ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗುವುದು ಎಂದು ಹೇಳಿದ್ದರು. ಆದರೂ ಸಮಿತಿ ರಚನೆಯಾಗಿಲ್ಲ. ಸರ್ಕಾರ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ‘ ಎಂದು ದೂರಿದರು.
‘ಮೋದಿ ಸರ್ಕಾರ ಡಿಸೆಂಬರ್ 9 ರಂದು ಲಿಖಿತ ಭರವಸೆ ನೀಡಿದ್ದರೂ, ರೈತರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಎಂಎಸ್‌ಪಿ ಸೇರಿದಂತೆ ಇತರ ಐದು ಅಂಶಗಳನ್ನು ಈಡೇರಿಸುವ ಜವಾಬ್ದಾರಿಯನ್ನು ಸರ್ಕಾರ ಮಾಡಲಿಲ್ಲ. ಹಾಗಾಗಿ, ಜನವರಿ 31ರಂದು ಎಸ್‌ಕೆಎಂ ದೇಶದಾದ್ಯಂತ ‘ದ್ರೋಹ ದಿನ’ ಆಚರಿಸಿತು.
ಸಂಯುಕ್ತ ಕಿಸಾನ್ ಮೋರ್ಚಾ, ಉತ್ತರ ಪ್ರದೇಶ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ನೇರವಾಗಿ ಪ್ರಚಾರ ಮಾಡಲು “ಮಿಷನ್ ಉತ್ತರ ಪ್ರದೇಶ” ಪ್ರಾರಂಭಿಸಿದೆ. ಜೊತೆಗೆ ಯೋಗಿ ನೇತೃತ್ವದ ಸರ್ಕಾರವನ್ನು ಹೊರಹಾಕುವಂತೆ ರೈತರನ್ನು ಕೇಳಿದೆ.
ನಾವು ಯಾರಿಗೆ ಮತ ಹಾಕಬೇಕೆಂದು ಹೇಳುವುದಿಲ್ಲ. ಆದರೆ, ಬಿಜೆಪಿಯನ್ನು ಶಿಕ್ಷಿಸಿ. ಯಾರಿಗೆ ಮತ ಹಾಕಬೇಕೆಂದು ರೈತನಿಗೆ ಗೊತ್ತು. ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ನಿರ್ಧರಿಸುವುದು ನಮ್ಮ ಕೆಲಸವಲ್ಲ. ನಮಗೆ ಯಾರು ಬೆಂಬಲ ನೀಡುತ್ತಾರೆ ಎಂಬುದನ್ನು ಆಧರಿಸಿ ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ’ ಎಂದು ಶರ್ಮಾ ಹೇಳಿದರು.
ಎಐಕೆಎಸ್ ರಾಷ್ಟ್ರೀಯ ಅಧ್ಯಕ್ಷ ಹನ್ನಾನ್ ಮೊಲ್ಲಾ ಮಾತನಾಡಿ, ಕೃಷಿ ಸಚಿವಾಲಯಕ್ಕೆ 2021-22ರ ಬಜೆಟ್‌ನಿಂದ ₹123017.57 ಕೋಟಿಗಳಿಂದ 2022-23ಕ್ಕೆ ₹124000 ಕೋಟಿ ನಿಗದಿಪಡಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಇದು ಅತ್ಯಲ್ಪ ಮೊತ್ತವಾಗಿದೆ. ಅಲ್ಲದೆ, ಕೃಷಿ ಆದಾಯವನ್ನು ಹೆಚ್ಚಿಸಲು ಡ್ರೋನ್‌ಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪರಿಚಯಿಸಲು ಬಜೆಟ್ ಪ್ರಸ್ತಾಪಿಸಿದೆ. ರೈತರು ತಮ್ಮ ಉತ್ಪನ್ನಗಳಿಗೆ ಮೂಲ ಬೆಲೆಗಳನ್ನು ಪಡೆಯದಿರುವಾಗ ಡ್ರೋನ್‌ಗಳನ್ನು ಹೇಗೆ ಖರೀದಿಸಬಹುದು? ಎಂದು ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಭರವಸೆಗಳನ್ನು ನೀಡಿ ಮೋಸ ಮಾಡಿದೆ ಎಂದು ಆರೋಪಿಸಿದರು.