ದೇಶದ ಮೂಲ ನಿವಾಸಿಗಳು ನಾವು-ನಮ್ಮನ್ಯಾಕೆ ನೀವು ಜೊತೆ ಸೇರಿಸಿಕೊಳ್ಳಲ್ಲ; ಖರ್ಗೆ

ಬೀದರ್: ʻದೇಶದ ಮೂಲ ನಿವಾಸಿಗಳು ನಾವು, ನೀವು (ಆರ್ಯ ಸಮಾಜ) ಗಂಗಾ ನದಿ ತೀರದಿಂದ ಮಧ್ಯ ಏಷ್ಯಾದಿಂದ ಬಂದವರು, ನಮ್ಮನ್ನು ಹಿಂದೂಗಳ ಜತೆ ಸೇರಿಸಿಕೊಳ್ಳಲ್ಲ ಯಾಕೆ? ದೇಗುಲಗಳಿಗೆ ಬರಲು ಬಿಡಲ್ಲ, ನೀರು ಕೊಡಲ್ಲ, ಚಾಯ್ ಕೊಡಲ್ಲ ನಮ್ಮನ್ನು ಯಾಕೆ ನಿಮ್ಮ ಜೊತೆ ತಿರುಗಾಡಲು ಬಿಡಲ್ಲ ಎಂದು ನಾನು ಕೇಳುತ್ತೇನೆʼ ಹೀಗಿ ಹೇಳಿದವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಳತ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ವಿಧಾನಸಭೆ ಹಾಗೂ ಲೋಕಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಹೊಸ ಗೊಂದಲಗಳನ್ನು ಸೃಷ್ಠಿಸಲಾಗುತ್ತಿದೆ. ಈ ಲೌಡ್ ಸ್ಪೀಕರ್ ದಂಗಲ್ ಅಜಾನ್ ವರ್ಸಸ್- ಸುಪ್ರಭಾತ ಗೊಂದಲ ಸೃಷ್ಟಿ ಮಾಡಿದ್ದಾರೆ. ಇಲ್ಲಿವರೆಗೂ ಇವರು ಎಲ್ಲಿಗೆ ಹೋಗಿದ್ದರು, ಹನುಮಾನ್ ಚಾಲೀಸಾ ಆಗಲಿ, ರಾಮ ಭಕ್ತರೆ ಆಗಲಿ ಎಲ್ಲಿಗೆ ಹೋಗಿದ್ದರು. ಈ ವಿಷಯದಲ್ಲಿ ನಾವು ಶೋಷಿತರ ಪರವಾಗಿ ನಿಲ್ಲುತ್ತೇವೆ. ಯಾರಿಗೆ ಅನ್ಯಾಯವಾಗುತ್ತೊ ಅವರ ಪರ ನಿಲ್ಲುತ್ತೇವೆ ಎಂದರು.

ಮುಸ್ಲಿಂರ ಮೇಲೆ‌ ಅನ್ಯಾಯವಾದರೆ, ನಾವು ಮಾತನಾಡೋದು ತಪ್ಪಾ? ದಲಿತರು, ಲಿಂಗಾಯತ ರೈತರು, ಹಿಂದೂಳಿದ ಜನಾಂಗದ ಮೇಲೆ ಅನ್ಯಾಯವಾದರೆ, ನಾವು ಮಾತನಾಡೋದು ತಪ್ಪಾ? ಎಲ್ಲಿ, ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತೆಯೋ ಅಲ್ಲಿ ಕಾಂಗ್ರೆಸ್ ಮುಂದಾಳತ್ವದಲ್ಲಿ ಪ್ರತಿಭಟನೆ ಮಾಡುತ್ತೆವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಮಾಜವನ್ನು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೇಶಕ್ಕೆ ಉಳಿಗಾಲವಿಲ್ಲ ಎಂದಿದ್ದಾರೆ.

ಕೇಂದ್ರ, ರಾಜ್ಯ ಸರಕಾರಗಳು ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಆದರೆ, ಜನ ಮಾತ್ರ ಮೌನ ವಹಿಸಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. ದೇಶದ ಜನರ ರಕ್ಷಣೆಗೆ ಇರುವ ಸಂವಿಧಾನ, ಪ್ರಜಾಪ್ರಭುತ್ವ ಬದಲಾವಣೆಗೆ ಹುನ್ನಾರ ನಡೆಯುತ್ತಿದೆ. ಹೀಗಾದರೆ  ಮುಂದೆ ಗುಲಾಮರಾಗಿ ಬದುಕು ನಡೆಸುವ ಪರಿಸ್ಥಿತಿ ತಲೆದೋರಲಿದೆ. ಇನ್ನಾದರೂ ಜನ ಒಗ್ಗಟ್ಟಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಇರುವ ಸಮಸ್ಯೆಗಳನ್ನು ಅಂದಿನ ಪ್ರಧಾನಿ ಮನಮೋಹನಸಿಂಗ್‌, ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟು 371(ಜೆ) ಕಾಯ್ದೆ ತಿದ್ದುಪಡಿ ತಂದಿರುವುದರಿಂದ ಈ ಭಾಗದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತಿದೆ ಎಂದು ಇದೇ ವೇಳೆ ಉಲ್ಲೇಖಿಸಿದರು.

Donate Janashakthi Media

Leave a Reply

Your email address will not be published. Required fields are marked *