ಜಗತ್ತಿನ 85 ಭಾಷೆಗಳಲ್ಲಿ ಅನುವಾದಗೊಂಡಿರುವ “ಡೆಸರ್ಟ್ ಫ್ಲವರ್” ಎಂಬ ಇಂಗ್ಲೀಷ್ ನಿರೂಪಣೆಯ ಕನ್ನಡದ ಅನುವಾದ ಕೃತಿಯೇ ‘ಮರುಭೂಮಿಯ ಹೂ’. ಈ ಆತ್ಮಕಥೆಯು ಕಗ್ಗತ್ತಲ ಖಂಡ ಎಂದೇ ಹೆಸರಾದ ಆಫ್ರಿಕಾದ ಸೊಮಾಲಿಯಾದ ಬುಡಕಟ್ಟು ಅಲೆಮಾರಿ ಸಮುದಾಯದ ಮುಸ್ಲಿಂ ಜನಾಂಗದ ಹೆಣ್ಣು ಮಗಳು ವಾರೀಸ್.
ಪವಿತ್ರ ಎಸ್, ಸಹಾಯಕ ಪ್ರಾಧ್ಯಾಪಕರು
ಮರುಭೂಮಿಯಲ್ಲಿ ಬೆಳೆಯುವ ಅತ್ಯಂತ ಸುಂದರವಾದ ಹಳದಿ ಬಣ್ಣದ ಹೂವೇ – ವಾರೀಸ್. ಆ ಹೂವೆಂದರೆ, ವಾರೀಸ್ ನ ತಾಯಿಗೆ ಬಲು ಇಷ್ಟ. ಆ ಹೂವಿನ ಹೆಸರನ್ನೇ ತನ್ನ ಮಗಳಿಗಿಟ್ಟಳು. ಆದರೆ ಎಷ್ಟೋ ವರ್ಷಗಳಕಾಲ ಹೂವಿನಂಥ ಬದುಕು ಮಾತ್ರ ಮರಿಚಿಕೆಯಾಗಿ ಉಳಿಯಿತೇನೋ ಎಂಬ ಭಾವನೆ ತಣ್ಣಗೆ ಕೊರೆಯುತ್ತದೆ. ಮರು
ತಾಯ್ತನದ ಮೂಲಕ ಪೋಷಣೆಗೊಂಡಿರುವ – ಕಷ್ಟ, ಸಹಿಷ್ಣುತೆ, ಸಹನೆ, ಪ್ರೇಮ, ತ್ಯಾಗ ಮುಂತಾದ ಭಾವ ಪ್ರಧಾನ ಗುಣಗಳು ಹೆಣ್ಣನ್ನು ತುಳಿಯುವ ಅಂಶಗಳಾಗಿ ಪಿತೃಪ್ರಧಾನ ಸಮಾಜದಲ್ಲಿ ನೆಲೆಯೂರಿದೆ. ಅಂಥದ್ದೇ ಪ್ರಸಂಗಗಳು ಕಣ್ಣೆದುರಿಗಿದ್ದರೂ ಸಂಪ್ರದಾಯದ ಮುಸುಕಿನಲ್ಲಿ ಸಮಾಜದ ಕಣ್ಣು ಕುರುಡಾಗಿಸಿರುತ್ತದೆ. ಇಂಥಹ ಹೀನ ಸಂಪ್ರದಾಯಗಳ ವಿರುದ್ದ ದನಿ ಏರಿಸದಂತೆ, ಪ್ರಶ್ನೆ ಮಾಡದಂತೆ ಒಪ್ಪಿಸಲಾಗಿದೆ. ಈ ಕೃತಿಯಲ್ಲಿ ಬುಡಕಟ್ಟು ಅಲೆಮಾರಿ ಸಮುದಾಯದ ಮುಸ್ಲಿಂ ಜನಾಂಗದಲ್ಲಿ ಆಚರಣೆಯಲ್ಲಿರುವ, ಮನುಕುಲವೇ ತಲೆತಗ್ಗಿಸುವ ಘಟನೆಯ ಕುರಿತು ಮಾತನಾಡುವ ಜರೂರಿದೆ. ಮರು
ಈ ಆತ್ಮಕತೆಯನ್ನು ಓದಿದಾಗ ಅದನ್ನು ಈ ನಾಲ್ಕು ಅಂಶಗಳ ಮೂಲಕ ವಿವರಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ.
1. ಲೈಂಗಿಕ ಕಿರುಕುಳ.
2. ಯೋನಿಚ್ಛೇಧನ.
3. ರೂಪದರ್ಶಿಯಾಗಿ ಫ್ಯಾಷನ್ ಲೋಕದಲ್ಲಿ ನಕ್ಷತ್ರದಂತೆ ಮಿಂಚಿದ್ದು.
4. ವಿಶ್ವಸಂಸ್ಥೆಯ ರಾಯಭಾರಿಯಾಗಿ ನೇಮಕಗೊಂಡಿದ್ದು.
ಇದನ್ನೂ ಓದಿ: ನವದೆಹಲಿ| ಅಂಗಡಿ ವ್ಯಾಪಾರಿಯಿಂದ 80 ಲಕ್ಷ ರೂ ದರೋಡೆ
1. ಲೈಂಗಿಕ ಕಿರುಕುಳ:
ವಾರೀಸ್ ನಾಲ್ಕು ವರ್ಷದವಳಿದ್ದಾಗ ತಂದೆಯ ಸ್ನೇಹಿತ ಕಥೆ ಹೇಳುತ್ತೀನಿ ಎಂದು ದೂರಕ್ಕೆ ಕರೆದುಕೊಂಡು ಹೋಗಿ ವಾರೀಸ್ ಳ ಪಕ್ಕದಲ್ಲಿ ಮಲಗಿ ಗಡುಸಾದ ವಸ್ತುವಿನಿಂದ ಗುದ್ದಿ, ವಾರೀಸ್ ಬಟ್ಟೆಯ ಮೇಲೆ ವೀರ್ಯ ಚೆಲ್ಲುತ್ತಾನೆ. ಆ ಅಸಹ್ಯಕರವಾದ ಅಂಟು ಅಂಟಾದ ರಸವನ್ನು ಕಂಡಾಗ ಹೇಸಿಗೆಯಿಂದ ತಾಯಿಯ ಬಳಿ ಓಡಿಹೋಗುವ ಆಕೆಗೆ ಮುಗ್ದತೆಯ ಮೊದಲ ಮುಸುಕು ಕಳಚಿದಂತಾಗುತ್ತದೆ. ಮರುಭೂಮಿಯಲ್ಲಿ ನೀರಿಗಾಗಿ ಕೀ.ಮೀ. ಗಟ್ಟಲೇ ಅಲೆಯುವ ಈ ಜನಾಂಗದಲ್ಲಿ ಹೆಣ್ಣು ಬಾಯಿಬಿಡದ ಅಧೀನ ಜೀವಿ. ಪುರುಷ ಯಜಮಾನಿಕೆಯ ಗುತ್ತಿಗೆ ಹಿಡಿದ ಅಧಿಕಾರದ ಕೇಂದ್ರ. ತಂದೆಯ ಸ್ನೇಹಿತ ಕೊಟ್ಟ ಲೈಂಗಿಕ ಕಿರುಕುಳವನ್ನು ಯಾರಿಗಾದರೂ ಹೇಳಿದರೆ ಮಾನ ಹೋಗುತ್ತದೆ ಎಂದು ಬಾಯಿಬಿಡದೆ ಮೂಕವಾಗಿ ಸಹಿಸಿಕೊಳ್ಳುವ ಹೆಣ್ಣುಗಳು ಎಲ್ಲಾ ಸಮುದಾಯಗಳಲ್ಲೂ ಇದ್ದಾರೆ. ಇಂಥಹ ಪಿತೃ ಪ್ರಧಾನ ವ್ಯವಸ್ಥೆ ಹೆಣ್ಣು ಘಾಸಿಗೊಳಿಸುವುದರ ಜೊತೆಗೆ ಬಲಹೀನತೆಯನ್ನು ಒಪ್ಪಿಸಿದೆ, ಒಪ್ಪಿಸಲಾಗುತ್ತಿದೆ. ಮರು
ತನ್ನ ತಂದೆ ಕೇವಲ ಐದು ಒಂಟೆಗಳಿಗಾಗಿ ಅರವತ್ತು ವರ್ಷದ ಮುದುಕನನ್ನು ಹದಿಮೂರು ವರ್ಷದ ವಾರೀಸ್ ಗೆ ಮದುವೆ ಮಾಡಲು ನಿಶ್ಚಯ ಮಾಡಿಕೊಂಡು ಬಂದಾಗ ತನ್ನ ತಾಯಿಯ ಸಹಾಯ ಪಡೆದು ಮನೆಯಿಂದ ಬೆಳಗಿನ ಜಾವ ಬಿಡಾರದಿಂದ ಹೊರಟು ಬಿಡುತ್ತಾಳೆ. ಹೊರಡುವ ದಾರಿ ಹೋರಾಟದ ಹಾದಿ ಎಂದು ಎಣಿಸಿರಲಿಲ್ಲವೇನೋ. ಚಕ್ಕಳ ಹೊಂದಿದ ದೇಹವನ್ನು ತಿನ್ನದೇ ಬಿಟ್ಟ ಕಾಡು ಪ್ರಾಣಿಗಿಂತ ಹೀನಾಯವಾದ ಮುಖವಾಡ ತೊಟ್ಟಿರುವ ಮನುಷ್ಯರೆದುರಾಗುತ್ತಾರೆ ಎಂಬ ಆಲೋಚನೆಯೂ, ಮುಂದಿನ ದಾರಿ ಹೇಗೆ ಕ್ರಮಿಸಬೇಕೆಂಬ ನಿರ್ಧಾರ ಇಲ್ಲದ, ಎಲ್ಲಿ ತಲುಪಬೇಕೆಂಬ ಗುರಿಯಿರುವ ಪ್ರಯಾಣ ವಾರೀಸ್‌ಳದ್ದು. ಮರು
ಸೊಮಾಲಿಯಾದ ರಾಜಧಾನಿ ಮೊಗದೀಶು ನಗರವನ್ನು ತಲುಪಲು ಲಾರಿಯೊಂದನ್ನು ಹತ್ತುವ ಆಕೆ ಮುಂದಾಗುವ ಅನಾಹುತದ ಕಲ್ಪನೆಯನ್ನು ಸಹ ಮಾಡಿರುವುದಿಲ್ಲ. ಲಾರಿ ಕಾಡಿನೊಳಗೆ ಹೋಗುತ್ತಿದ್ದಂತೆ ಆ ಲಾರಿಯ ಕ್ಲೀನರು ಓಡುವ ಲಾರಿಯಲ್ಲೇ ಹಿಂದಕ್ಕೆ ಬಂದು ವಾರೀಸ್‌ಳ ಮೇಲೆ ಎರಗಿದಾಗ ಹದಿಮೂರು ವರ್ಷದ ವಾರೀಸ್ ಪ್ರತಿಭಟಿಸುತ್ತಾಳೆ. ಆ ಪ್ರತಿಭಟನೆಯನ್ನು ಹತ್ತಿಕ್ಕಿ ದೇಹದ ಮೇಲೆ ಅಧಿಕಾರ ಸಾದಿಸುವ ಕ್ಲೀನರ್‌ನ ಮೇಲೆ ಹಲ್ಲೆ ಮಾಡಿ ಉಪಾಯದಿಂದ ತಪ್ಪಿಸಿಕೊಳ್ಳುವುದು 13ರ ಬಾಲೆಗೆ ನಿಜಕ್ಕೂ ಸವಾಲೇ ಸರಿ. ಮರು
2. ಯೋನಿಚ್ಛೇಧನ
ಹೆಣ್ಣಾಗಲು ಕಾಯುವುದೆಂದರೆ, ಇಲ್ಲಿ ಬೇರೆಯೇ ನಿರ್ವಚನ, ಹೆಣ್ಣು ಮಕ್ಕಳು ಮೈನೆರೆಯುವ ಮೊದಲೇ ಅಂದರೆ ಕೇವಲ ಐದು ವರ್ಷದಕ್ಕೇ ಯೋನಿಯ ತುಟಿಗಳನ್ನು ಸೀಳಿ, ಒಂದು ಸಣ್ಣ ರಂಧ್ರವನ್ನು ಮಾತ್ರ ಮೂತ್ರ ವಿಸರ್ಜಿಸಲು ಬಿಟ್ಟು ಉಳಿದ ಭಾಗವನ್ನು ಹೊಲಿದು ಬಿಡುವುದು. ಇಂತಹ ಹೆಣ್ಣು ಮಕ್ಕಳು ಬುಡಕಟ್ಟು ಜನಾಂಗದಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಗಳಿದ್ದಂತೆ. ಮರು
ಈ ಕ್ರಿಯೆಯನ್ನು ನಡೆಸಲು ಶುಚಿಯಿಲ್ಲದ, ತುಕ್ಕುಹಿಡಿದ ವಸ್ತುಗಳನ್ನು ಬಳಸಲಾಗುತ್ತದೆ. ಇದರ ಸೋಂಕಿಗೆ ತುತ್ತಾಗಿ ಸಾಯುವವರೆಷ್ಟೋ, ರಕ್ತಸ್ರಾವದಿಂದ ಸಾಯುವವರೆಷ್ಟೋ, ಒಟ್ಟಿನಲ್ಲಿ ಪತಿವ್ರತೆಯರಾಗಲು ಈ ಯೋನಿಚ್ಛಿಧನಕ್ಕೊಳಗಾಗಲೇಬೇಕು.
ಸ್ವತಃ ವಾರೀಸ್‌ಳೇ ಐದು ವರ್ಷದವಳಿದ್ದಾಗ ಯೋನಿಚ್ಛೇಧನಕ್ಕೆ ಒಳಗಾಗಿದ್ದಳೆಂಬುದು ಅವಳೇ ಹೇಳಿಕೊಳ್ಳುವ ವರೆಗೂ ಇಂಥದ್ದೊಂದು ಹೀನ ಪದ್ದತಿ ಜಗತ್ತಿನಲ್ಲಿದೆ ಎಂಬುದೇ ತಿಳಿದಿರಲಿಲ್ಲ. ಯೋನಿಚ್ಛೇಧನದ ಸಂದರ್ಭದಲ್ಲಿ ಅಳುವನ್ನು ತಡೆಯುವ, ಯೋನಿಚ್ಛೇಧನವನ್ನು ಮಾಡಿಸಿಕೊಳ್ಳುವ ಹೆಣ್ಣುಮಕ್ಕಳು ಶ್ರೇಷ್ಠ ಎಂಬ ಭಾವನೆಯನ್ನು ಪಿತೃ ಪ್ರಧಾನ ಸಮಾಜದಲ್ಲಿ ಬಿತ್ತಲಾಗಿದೆ. ಇಂತಹ ಹೆಣ್ಣುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಾರೆ.
ಇದನ್ನೂ ಓದಿ: ಶಾಸಕರನ್ನು ಅಪಮಾನಿಸಿದ ಅಧಿಕಾರಿಗಳ ವಿರುದ್ಧ ಕ್ರಮ: ಯು.ಟಿ. ಖಾದರ್ ಆಗ್ರಹ
ಯೋನಿಚ್ಛೇಧನದ ನಂತರ ಮೂತ್ರ ವಿಸರ್ಜಿಸಲು ಹೋದಾಗ ಸರಾಗವಾಗಿ ಹೋಗಲು ಸಾಧ್ಯವಿಲ್ಲದಿರುವಂತಹ ಹೆಣ್ಣು ಹೆಚ್ಚಿನ ಸಮಯ ತೆಗೆದುಕೊಂಡು ಹನಿ ಹನಿಯಾಗಿ ಮೂತ್ರ ವಿಸರ್ಜಿನೆ ಮಾಡುವುದು ಮುಟ್ಟಿನ ಸಮಯದಲ್ಲಿ ಸಹಿಸಲಸಾಧ್ಯವಾದ ನೋವು ಬರುವುದು. ಎಲ್ಲಾ ಹೆಣ್ಣು ಮಕ್ಕಳಿಗೂ ಮುಟ್ಟು ಐದು ದಿನಗಳ ಕ್ರಿಯೆಯಾದ್ದರೆ ಯೋನಿಚ್ಛೇಧನ ಮಾಡಿಸಿಕೊಂಡ ಹೆಣ್ಣುಗಳಿಗೆ 10 -12 ದಿನಗಳ ನೋವಿನ ಅವಧಿಯದು ಎಂದರೆ ಪಿತೃ ಪ್ರಧಾನ ಸಮಾಜ ತಲೆ ತಗ್ಗಿಸಲೇಬೇಕು.
ಎಷ್ಟೋ ಯೋನಿಚ್ಛೇಧನ ಮಾಡಿಸಿಕೊಂಡ ಹೆಣ್ಣು ಮಕ್ಕಳು ತಮ್ಮ ಮೊದಲ ಹೆರಿಗೆಯಲ್ಲಿಯೇ ಅತಿಯಾದ ನೋವಿನಿಂದ, ಅತಿಯಾದ ರಕ್ತಸ್ರಾವದಿಂದ. ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲೇ ಮರಣ ಹೊಂದುತ್ತಾರೆ.
ದುರಂತವೆಂದರೆ, ಹೆಂಡತಿ ಸತ್ತ 5 ದಿನಗಳ ನಂತರ ಆ ಪುರುಷ ಮರು ಮದುವೆಯಾಗಲು ಯೋನಿಚ್ಛೇಧನಕ್ಕೆ ಒಳಗಾಗಿರುವ ಹೆಣ್ಣನ್ನೇ ಹುಡುಕುತ್ತಾನೆ ಎಂದರೆ ಪುರುಷನ ಮನಸ್ಥಿತಿ ಹೆಣ್ಣನ್ನು ಯಾವ ನೆಲೆಯಲ್ಲಿಟ್ಟಿದೆ ಎಂದು ತಿಳಿಯುತ್ತದೆ.
ವಾರೀಸ್ ಗೆ ಸಹಿಸಲಸಾಧ್ಯವಾದ ಹೊಟ್ಟೆಯ ನೋವು ಬಂದಾಗ ಆಸ್ಪತ್ರೆಗೆ ಹೋಗಿ ತೋರಿಸುತ್ತಾಳೆ. ಪರೀಕ್ಷೆ ಮಾಡಿದ ಡಾಕ್ಟರ್ ಅಪರೇಷನ್ ಮಾಡಿದರೆ ಸರಿಹೋಗುತ್ತದೆ ಎಂದು ಹೇಳುತ್ತಾರೆ. ಆದರೆ ಭಾಷೆ ಅರ್ಥವಾಗದ ಕಾರಣ ಸೊಮಾಲಿಯ ಭಾಷೆ ಮಾತನಾಡುವ ಯಾರನ್ನಾದರೂ ಕರೆದುಕೊಂಡು ಬನ್ನಿ ಎಂದಾಗ ನರ್ಸ್ ಅಲ್ಲಿ ಕೆಲಸ ಮಾಡುವ ಸೋಮಾಲಿಯಾದ ಪುರುಷನನ್ನು ಕರೆದು ಕೊಂಡು ಬರುತ್ತಾನೆ.
ಡಾಕ್ಟರ್ ಹೇಳದ ಮಾತನ್ನು ಅವನು ನಿನಗೆ ನಮ್ಮ ಧರ್ಮದ ಮೇಲೆ ಅಷ್ಟೊಂದು ತಿರಸ್ಕಾರನಾ ಇದು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಗುಡುಗುತ್ತಾನೆ. ಪಿತೃ ಸಂಸ್ಕೃತಿಯನ್ನು ಪೋಷಿಸುವ ಇಂಥಹ ಅನಿಷ್ಟ ಪದ್ದತಿಗಳು ಹೆಣ್ಣನ್ನು ಘಾಸಿಗೊಳಿಸಿವೆ, ಈಗಲೂ ಘಾಸಿಗೊಳಿಸುತ್ತಲೇ ಇವೆ.
ಯೋನಿಚ್ಚೇಧನದ ಮೂಲ ಉದ್ದೇಶ :
• ಹೆಣ್ಣಿನ ಲೈಂಗಿಕ ಹಸಿವನ್ನು ತಣಿಸುವುದು.
• ಮದುವಿಗೂ ಮುನ್ನ ಕನ್ಯತ್ವವನ್ನು ಕಾಪಾಡಿಕೊಳ್ಳುವುದು.
• ಮದುವೆಯಾದವನಿಗೆ ಅಗಾಧ ಸುಖವನ್ನು ಕೊಡುವುದು.
• ಚಾರಿತ್ರ್ಯವನ್ನು ಕಾಪಾಡಿಕೊಳ್ಳುವುದು.
3. ರೂಪದರ್ಶಿಯಾಗಿ ಫ್ಯಾಷನ್ ಲೋಕದಲ್ಲಿ ನಕ್ಷತ್ರದಂತೆ ಮಿಂಚಿದ್ದು.
ಹಲವಾರು ಅಡೆತಡೆಗಳನ್ನು ದಾಟಿ ರೂಪದರ್ಶಿಯಾದದ್ದೊಂದು ದೊಡ್ಡ ತಿರುವು ವಾರೀಸ್ ಳ ಬದುಕಿನಲ್ಲಿ. ಬರೀ ಬಿಳೀ ತೊಗಲನ್ನೇ ನೋಡಿ ಬೆಸತ್ತಿದ್ದ ಫ್ಯಾಷನ್ ಜಗತ್ತು ಕಪ್ಪು ಕಲ್ಲಿನಲ್ಲಿ ಕಡೆದ ಶಿಲ್ಪದಂತಿದ್ದ, ಪುಟ್ಟ ಬಾಯಿಯ, ತೆಳ್ಳಗಿನ ದೇಹದ ಈ ಚೆಲುವೆಯನ್ನು ಸೌಂಧರ್ಯವರ್ಧಕಗಳ ಬಹುರಾಷ್ಟ್ರೀಯ ಕಂಪನಿ “ರೆವಲಾನ್” ಎಷ್ಟೋ ವರ್ಷಗಳಕಾಲ ತನ್ನ ವಸ್ತುಗಳ ಬ್ರಾಂಡ್ – ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿತು. ಹಾಗೆಂದ ಮಾತ್ರಕ್ಕೆ ವರ್ಣ ತಾರತಮ್ಯವಿರಲಿಲ್ಲ ಎಂದೇನೂ ಅರ್ಥವಲ್ಲ.
ರೂಪದರ್ಶಿಯಾದ ನಂತರ “ಮೇರಿಕ್ಲೇರ್” ಎಂಬ ಪತ್ರಕೆಗೆ ಸಂದರ್ಶನ ನೀಡಿದಾಗ ಅದರಲ್ಲಿ “ ಹೆಣ್ಣೊಬ್ಬಳ ಗುಪ್ತಾಂಗ ಛೇಧನದ ದುರಂತ ಕಥೆ” ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತದೆ. ಈ ಸುದ್ದಿಯನ್ನು ಓದಿದ ಅಮೇರಿಕಾದ ಜನರು ಬೆಚ್ಚಿಬಿದ್ದಿದ್ದರು.
ಬಿಬಿಸಿ ಚಾನೆಲ್ ನವರು ವಾರೀಸ್ ಬಗ್ಗೆ ಡಾಕ್ಯುಮೆಂಟರಿ ತಯಾರಿಸಿ ಪ್ರದರ್ಶನ ಮಾಡಿದಾಗ ಅದನ್ನು ವೀಕ್ಷಿಸಿದ ವಿಶ್ವಸಂಸ್ಥೆ ವಾರೀಸ್ಳನ್ನು “ಆಫ್ರಿಕಾದಲ್ಲಿ ಹೆಣ್ಣಮಕ್ಕಳ ಮೇಲೆ ನಡೆಯುತ್ತಿದ್ದ ಗುಪ್ತಾಂಗ ಛೇಧನ ಕ್ರಿಯೆಯ ಕುರಿತು ಅರಿವು ಮೂಡಿಸುವ ಆಂದೋಲನದ ರಾಯಭಾರಿ”ಯಾಗುವಂತೆ ಕೇಳಿಕೊಂಡಾಗ ಅದನ್ನು ಒಪ್ಪಿದ ವಾರೀಸ್ ಗೆ ಕೊಲೆ ಬೆದರಿಕೆಗಳು ಬಂದವು ಅದಕ್ಕೆಲ್ಲ ಹೆದರದೆ ದಿಟ್ಟವಾಗಿ ಕೆಲಸ ಮಾಡಿದವಳು ವಾರೀಸ್.
ಇಷ್ಟೆಲ್ಲಾ ಸಾಹಸಗಾಥೆಗೆ ಕಾರಣಳಾದ ವಾರೀಸ್ ಅನಕ್ಷರಸ್ಥಳೆಂಬುದು ಮರೆಯುವಂತಿಲ್ಲ ಅಕ್ಷರಸ್ಥರಿಗಿಂತ ಹೆಚ್ಚಿನ ಕೆಲಸ ಮಾಡಿದವಳು ವಾರೀಸ್.
ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕರೊಬ್ಬರು ವಾರೀಸ್ ಳ ಆತ್ಮಕಥೆಯನ್ನಾಧರಿಸಿ “ಡೆಸರ್ಟ್ ಫ್ಲವರ್” ಎಂಬ ಹೆಸರಿನಲ್ಲಿ ಚಲನಚಿತ್ರ ಒಂದನ್ನು ನಿರ್ದೇಶನ ಮಾಡಿದ್ದಾರೆ.
ಪುಸ್ತಕದ ಹೆಸರು : ಮರುಭೂಮಿಯ ಹೂ – ಸ್ತ್ರೀವಾದಿ ನಿರ್ವಚನ
ಮೂಲ ಲೇಖಕರು : ವಾರೀಸ್ ಡಿರೀಸ್
ಕನ್ನಡಕ್ಕೆ : ಜಗದೀಶ್ ಕೊಪ್ಪ
ಪ್ರಕಾಶನ : ಮಣಿ ಪ್ರಕಾಶನ, ಬೆಂಗಳೂರು
ಇದನ್ನೂ ನೋಡಿ: ರಾಜ್ಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ಸಿಕ್ಕಿದ್ದೇನು? – ಬಿ.ಶ್ರೀಪಾದ್ ಭಟ್ Janashakthi Media