ಪೆಗಾಸಸ್‌ ಬಗೆಗಿನ ಆರೋಪ ಆಧಾರರಹಿತ-ತನಿಖೆಗೆ ತಜ್ಞರ ಸಮಿತಿ ರಚನೆ: ಸುಪ್ರೀಂಗೆ ಕೇಂದ್ರದ ಮಾಹಿತಿ

ನವದೆಹಲಿ: ಪೆಗಾಸಸ್ ಬೇಹುಗಾರಿಕೆ ಬಗೆಗೆ ಸ್ವತಂತ್ರ ತನಿಖೆಗೆ ಒಳಪಡಿಸಬೇಕೆಂದು ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಆಧಾರರಹಿತವಾಗಿವೆ. ಅಪೂರ್ಣ ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡ ಆಧಾರ ರಹಿತ ಮಾಹಿತಿಗಳನ್ನೇ ಉಲ್ಲೇಖಿಸಿ ದೂರು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಅಫಿಡವಿಟ್‌ ಸಲ್ಲಿಸಿದೆ.

ದೇಶದಲ್ಲಿ ಪೆಗಾಸಸ್‌ ಬೇಹುಗಾರಿಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಲು ಇಸ್ರೇಲಿ ಪೆಗಾಸಸ್ ಸ್ಪೈವೇರ್ ಅನ್ನು ಬಳಸಲಾಗಿದೆ ಎಂಬ ಇತ್ತೀಚಿನ ವರದಿಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನ ವಿಚಾರಣೆ ಸಂದರ್ಭದಲ್ಲಿ ಆರೋಪಗಳನ್ನು ಕೇಂದ್ರ ಸರಕಾರ ನಿರಾಕರಿಸಿದೆ.

ಇದನ್ನು ಓದಿ: ಪೆಗಾಸಸ್‌ ಆರೋಪಗಳಲ್ಲಿ ಸತ್ಯಾಂಶವಿದ್ದರೇ, ಅದು ಗಂಭೀರವಾದದ್ದೇ: ಸುಪ್ರೀಂ ಕೋರ್ಟ್

“ಪಟ್ಟಭದ್ರ ಹಿತಾಸಕ್ತಿಗಳಿಂದ ಹರಡಿರುವ ಯಾವುದೇ ತಪ್ಪು ನಿರೂಪಣೆಯನ್ನು ಹೋಗಲಾಡಿಸಲು ಮತ್ತು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಪರಿಶೀಲಿಸುವುದಕ್ಕಾಗಿ ನಾವು ತಜ್ಞರ ಸಮಿತಿಯನ್ನು ರಚಿಸುತ್ತೇವೆ. ಅದು ಸಮಸ್ಯೆಯ ಎಲ್ಲಾ ಅಂಶಗಳನ್ನು ಪರಿಶೀಲಿಸಲಿದೆʼʼ ಎಂದು ಕೇಂದ್ರ  ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಲ್ಲಿಸಿದ ಎರಡು ಪುಟಗಳ ಅಫಿಡವಿಟ್ ಪ್ರಕಾರ “ಈ ಎಲ್ಲಾ ಆರೋಪಗಳನ್ನು ಕೇಂದ್ರ ಸರ್ಕಾರವು ನಿರಾಕರಿಸುತ್ತದೆ. ಇದು ಬರಿಯ ಸುಳ್ಳು ಆರೋಪಗಳಾಗಿವೆ. ಆರೋಪಗಳು ನಿಜವಲ್ಲ. ಬರೀ ಊಹೆಗಳನ್ನು ಒಳಗೊಂಡಿವೆ. ಯಾವುದೇ ಆಧಾರಗಳು ಇಲ್ಲ. ಪೆಗಾಸಸ್‌ ತಂತ್ರಜ್ಞಾನದ ಮೂಲಕ ಬೇಹುಗಾರಿಕೆ ನಡೆಸಲಾಗಿದೆ ಎಂಬ ಎಲ್ಲಾ ಮಾಧ್ಯಮ ವರದಿಗಳು ಸುಳ್ಳು ಅಥವಾ ಅಪೂರ್ಣ ಅಥವಾ ದೃಢೀಕರಿಸಿದ ವಿಷಯವಾಗಿದೆ ಹಾಗೂ ಆಧಾರ ರಹಿತವಾಗಿದೆ ಎಂದು ನಾವು ಸ್ಪಷ್ಟಪಡಿಸು‌ತ್ತೇವೆʼʼ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

“ಪ್ರಾಥಮಿಕ ಸಾಕ್ಷ್ಯಗಳಿವೆ ಮತ್ತು ವರದಿಗಳಲ್ಲಿ ವಿಶ್ವಾಸಾರ್ಹತೆ ಇದೆ ಎಂದು ನಿಮಗೆಲ್ಲರಿಗೂ ತಿಳಿದಿದೆ, ಅದರ ಆಧಾರದ ಮೇಲೆ ನಾವು ವಿಚಾರಣೆಗೆ ಆದೇಶಿಸಬಹುದು ಇತ್ಯಾದಿ ಯಾವುದೇ ಪ್ರಯತ್ನ ಮಾಡಲಾಗಿದೆಯೇ ಎಂದು ನನಗೆ ಗೊತ್ತಿಲ್ಲ. ರಿಟ್ ಅರ್ಜಿಗಳನ್ನು ಸಲ್ಲಿಸಿದ ವ್ಯಕ್ತಿಗಳು ಸಂಪನ್ಮೂಲಗಳನ್ನು ಹೊಂದಿರುವ ಜ್ಞಾನವುಳ್ಳ ವ್ಯಕ್ತಿಗಳಾಗಿರುತ್ತಾರೆ. ಅವರು ಹೆಚ್ಚಿನ ಮಾಹಿತಿಯನ್ನು ತರಲು ಹೆಚ್ಚಿನ ಪ್ರಯತ್ನವನ್ನು ಮಾಡಿರಬೇಕು. ಮನವಿ ಸಲ್ಲಿಸಿದ ಅರ್ಜಿದಾರರಲ್ಲಿ ಕೆಲವರು ಪರಿಣಾಮ ಬೀರುವುದಿಲ್ಲ ಮತ್ತು ಕೆಲವರು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಕ್ರಿಮಿನಲ್ ದೂರು ದಾಖಲಿಸಲು ಪ್ರಯತ್ನಿಸಿಲ್ಲ” ಎಂದು ಸಿಜೆಐ ಹೇಳಿದರು.

ಇದನ್ನು ಓದಿ: ಪೆಗಾಸಸ್‌ ಹಗರಣ ವಿಚಾರಣೆ: ಸಾಮಾಜಿಕ ಜಾಲತಾಣ ಚರ್ಚೆಗಳಿಂದ ದೂರವಿರಲು ಅರ್ಜಿದಾರರಿಗೆ ಸುಪ್ರೀಂ ಸೂಚನೆ

ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಈ ಹಿಂದೆ ಪ್ರಕರಣವನ್ನು ಆಲಿಸುವಾಗ, ಆರೋಪಗಳನ್ನು “ಗಂಭೀರ” ಎಂದು ವಿವರಿಸಿದ್ದರು. ಆದರೆ ಫೋನ್ ಹ್ಯಾಕ್ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳಿದ್ದಲ್ಲಿ ಇಲ್ಲಿಯವರೆಗೆ ಏಕೆ ಎಫ್ಐಆರ್ ದಾಖಲಿಸಿಲ್ಲ ಎಂದು ಕೇಳಿದ್ದರು.

ಪೆಗಾಸಸ್‌ ತಂತ್ರಜ್ಞಾನ ಬಳಸಿ ರಾಜಕಾರಣಿಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪಗಳು ಇವೆ. ಸ್ವತಂತ್ರ ತನಿಖೆ ನಡೆಸುವಂತೆ ಒಂದು ಗುಂಪು ಸಲ್ಲಿಸಿದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಪೆಗಾಸಸ್ ಅನ್ನು ಸರ್ಕಾರ ಬಳಸುತ್ತಿರುವ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸದನದಲ್ಲಿ ಭಾರೀ ಗದ್ದಲ ಎಬ್ಬಿಸಿದ್ದವು, ಆದರೆ ಸರ್ಕಾರ ಮಾತ್ರ ಈ ಆರೋಪವನ್ನು ನಿರಂತರವಾಗಿ ಅಲ್ಲಗಳೆಯುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಕೇಂದ್ರ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿದೆ.

Donate Janashakthi Media

Leave a Reply

Your email address will not be published. Required fields are marked *