ಭೂಸ್ವಾಧೀನ ರದ್ದು ಆದೇಶಕ್ಕೆ ಗ್ರಹಣ: ಮೂರು ತಿಂಗಳಾದರೂ ಹೊರಬೀಳದ ಡಿನೋಟಿಫಿಕೇಶನ್‌; ಸರ್ಕಾರದ ವಿರುದ್ಧ ಹೋರಾಟ ಪುನರಾರಂಭಿಸುವ ಎಚ್ಚರಿಕೆ!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರೈತರು ಮತ್ತೊಮ್ಮೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೈಗಾರಿಕಾ ವಲಯಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದ ತಮ್ಮ ಕೃಷಿ ಭೂಮಿಯನ್ನು ರದ್ದುಪಡಿಸುವ ಕುರಿತು ಮುಖ್ಯಮಂತ್ರಿಗಳು ಘೋಷಣೆ ಮಾಡಿ ಮೂರು ತಿಂಗಳೇ ಕಳೆದರೂ, ಇಲ್ಲಿಯವರೆಗೆ ಅಧಿಕೃತ ಆದೇಶ  ಹೊರಬೀಳದಿರುವುದು ರೈತ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಭೂಸ್ವಾಧೀನ

ಇದನ್ನೂ ಓದಿ : ಯಲ್ಲಾಲಿಂಗ ಕೊಲೆ ಪ್ರಕರಣ| ಬಲಾಡ್ಯರ ಕಡೆ ವಾಲಿದ ನ್ಯಾಯ – ಮತ್ತೊಮ್ಮೆ ಯಲ್ಲಾಲಿಂಗನ ಕೊಲೆ

ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಯು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ ಸುಮಾರು 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು.

ಈ ಅಧಿಸೂಚನೆ ವಿರೋಧಿಸಿ ರೈತರು ಸತತವಾಗಿ ಸಾವಿರಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆಸಿದ್ದರು.

ರೈತರ ತೀವ್ರ ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಳೆದ ಜುಲೈ 15 ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು, ಭೂಮಿಯನ್ನು ಡಿನೋಟಿಫೈ (ಅಧಿಸೂಚನೆ ರದ್ದು) ಮಾಡುವುದಾಗಿ ಘೋಷಿಸಿದ್ದರು.

ಸರ್ಕಾರದ ಘೋಷಣೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡು, ಅದನ್ನು ‘ರೈತಪರ ನಿರ್ಧಾರ’ ಎಂದು ಬಿಂಬಿಸಲಾಗಿತ್ತು. ಆದರೆ, ಮೂರು ತಿಂಗಳು ಕಳೆದರೂ ಭೂಸ್ವಾಧೀನ ರದ್ದುಗೊಳಿಸುವ ಅಧಿಕೃತ ಗೆಜೆಟ್ ಅಧಿಸೂಚನೆ (Official Gazette Notification) ಮಾತ್ರ ಹೊರಬಿದ್ದಿಲ್ಲ.

“ಸರ್ಕಾರ ಉದ್ದೇಶಪೂರ್ವಕವಾಗಿ ಕಾಲಹರಣ ಮಾಡುತ್ತಿದೆ. ರೈತರ ನಡುವೆ ಒಡಕು ಮೂಡಿಸಿ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಇದು” ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಆರೋಪಿಸಿದ್ದಾರೆ.

ಜಿಲ್ಲೆಗೆ ಆಗಮಿಸಲಿರುವ ಕೈಗಾರಿಕಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿ ಭೂಸ್ವಾಧೀನ ರದ್ದು ಆದೇಶ ಹೊರಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಒಂದು ವೇಳೆ ಸರ್ಕಾರ ಶೀಘ್ರವೇ ಆದೇಶ ಹೊರಡಿಸದಿದ್ದರೆ, ಸಂಯುಕ್ತ ಹೋರಾಟ ಮತ್ತು ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಮತ್ತೊಂದು ಸುತ್ತಿನ ತೀವ್ರ ಹೋರಾಟವನ್ನು ಪುನರಾರಂಭಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಅತಂತ್ರ ಪರಿಸ್ಥಿತಿಯಲ್ಲಿರುವ ರೈತರು, ಸರ್ಕಾರ ಕೂಡಲೇ ಆದೇಶ ಹೊರಡಿಸುವ ಮೂಲಕ ತಮಗೆ ನೆಮ್ಮದಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ : ಉತ್ತರ ಕನ್ನಡ | ಎಮರ್ಜೆನ್ಸಿಯಲ್ಲಿ ಜೀವ ಉಳಿಸಿಕೊಳ್ಳಲು ಸುಸಜ್ಜಿತ ಆಸ್ಪತ್ರೆ ಇಲ್ಲ | ಯಮುನಾ ಗಾಂವ್ಕರ್

Donate Janashakthi Media

Leave a Reply

Your email address will not be published. Required fields are marked *