ಜೋಶಿಮಠದ ಅಪಾಯಕಾರಿ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭ – 678 ಕಟ್ಟಡಗಳು ಅಸುರಕ್ಷಿತ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಜೋಶಿಮಠ ಗಿರಿಧಾಮದಲ್ಲಿ ಭೂಮಿ ಕುಸಿತದಿಂದಾಗಿ ಭಾರೀ ಪ್ರಮಾಣದ ಹಾನಿಯಾಗಿದ್ದು, ಬಹುತೇಕ ಕಟ್ಟಡಗಳು ಬಿರುಕುಬಿಟ್ಟಿದ್ದು, ಅವುಗಳನ್ನು ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ. 678 ಕಟ್ಟಡಗಳು ಅಸುರಕ್ಷಿತ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.

ಉತ್ತರಾಖಂಡದ ಜೋಶಿಮಠದಲ್ಲಿ ಎಲ್ಲೆಡೆ ಭೂಕುಸಿತ ಉಂಟಾಗುತ್ತಿದ್ದು, ಕಟ್ಟಡಗಳು ಬಿರುಕು ಬಿಡುತ್ತಿವೆ. ರಸ್ತೆಗಳಲ್ಲಿಯೂ ಸಹ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲಿನ ಜನರು ಆತಂಕದಿಂದಿದ್ದು, ಮುಳುಗಡೆಯ ಭೀತಿಯನ್ನು ಎದುರಿಸುತ್ತಿದ್ದಾರೆ. ಸಂತ್ರಸ್ತರ ರಕ್ಷಣೆ ಹಾಗೂ ಜೋಶಿಮಠವನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮನವಿ ಮಾಡಿದ್ದಾರೆ.

ಇದನ್ನು ಓದಿ: ಉತ್ತರ ಭಾರತದಲ್ಲಿ ತೀವ್ರ ಚಳಿ: ಕಾನ್ಪುರದಲ್ಲಿ 98 ಜನ ಸಾವು !

ಭೂಕುಸಿತದಿಂದಾಗಿ ಮನೆಗಳು ಬಿರುಕುಬಿಟ್ಟಿದ್ದು, ಅವುಗಳಲ್ಲಿ ಹೆಚ್ಚಿನವುಗಳನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ನೆಲಸಮಗೊಳಿಸುವಂತಹ ಕಟ್ಟಡಗಳಿಗೆ ಈಗಾಗಲೇ ಕೆಂಪು ಬಣ್ಣದ ಗುರುತುಗಳನ್ನು ಮಾಡಲಾಗಿದೆ.

ಜನರ ರಕ್ಷಣೆ ಮತ್ತು ಕಾರ್ಯಾಚರಣೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌)ನ ಎಂಟು ತಂಡವನ್ನು ನಿಯೋಜಿಸಲಾಗಿದ್ದು, ಇವರು ರಕ್ಷಣಾ ಪಡೆಗಳೊಂದಿಗೆ ನಿಕಟ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಹಾನಿಗೊಳಗಾದ ಕಟ್ಟಡಗಳ ಸ್ಥಳ ಪರಿಶೀಲನೆಯ ಜೊತೆಗೆ ಅಪಾಯದಲ್ಲಿರುವ ಜನರ ರಕ್ಷಣೆಗೂ ಕೆಲಸ ಮಾಡುತ್ತಿವೆ ಎಂದು ಎಸ್‌ಡಿಆರ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ರಿದ್ಧಿಮ್ ಅಗರವಾಲ್ ತಿಳಿಸಿದರು.

ಈಗಾಗಲೇ ಅಸುರಕ್ಷಿತ ವಲಯದ ಕೆಲವು ಸ್ಥಳಗಳಲ್ಲಿ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ತಜ್ಞರು ಕಟ್ಟಡ ನೆಲಸಮ ‌ಕಾಮಗಾರಿ ನಡೆಸಲಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಚಂಡಮಾರುತ ಆರ್ಭಟ: ತಮಿಳುನಾಡು ತತ್ತರ-ಚೆನ್ನೈ, ಕಾಂಚೀಪುರಂನಲ್ಲಿ ಮಳೆಗೆ ನಾಲ್ವರು ಬಲಿ

678 ಕಟ್ಟಡಗಳನ್ನು ಅಸುರಕ್ಷಿತ ಎಂದು ಗುರುತಿಸಲಾಗಿದ್ದು, ಅವುಗಳನ್ನು ತೆರವುಗೊಳಿಸಲು ಪ್ರಾರಂಭಿಸಲಾಗಿದೆ. 81 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಗತ್ಯವಿರುವಂತಹ ಕೆಲವು ಪ್ರದೇಶಗಳಿಗೆ ಸಂಪೂರ್ಣ ನಿಷೇಧವನ್ನು ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ನೆಲಸಮಕ್ಕೆ ಸ್ಥಳೀಯರ ವಿರೋಧ

ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಗಾಗಿ ಕೈಗೊಂಡ ನಿರ್ಮಾಣ ಕಾಮಗಾರಿಯೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ವಿರುದ್ಧ ಸ್ಥಳೀಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆದರೆ ಎನ್‌ಟಿ‍ಪಿಸಿ ಈ ಆರೋಪವನ್ನು ತಳ್ಳಿ ಹಾಕಿದ್ದು, ನಮ್ಮ ಸುರಂಗ ಮಾರ್ಗ ಜೋಶಿಮಠವನ್ನು ಹಾದು ಹೋಗಿಲ್ಲ ಎಂದು ಸ್ಪಷ್ಟ‍ಪಡಿಸಿದೆ.

ಇಲ್ಲಿನ ನೂರಾರು ಮನೆಗಳನ್ನು ನೆಲಸಮಗೊಳಿಸುವುದಕ್ಕೆ ಜಿಲ್ಲಾಡಳಿತ ಮುಂದಾಗಿರುವುದಕ್ಕೆ ಸ್ಥಳೀಯರ ಪ್ರತಿಭಟನೆಗೆ ಕಾರಣವಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *