ಹಾಸನ: ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಅಪ್ರಜಾಸತ್ತಾತ್ಮಕ ನಡವಳಿಕೆ ಮತ್ತು ಬೈಲಾ ತಿದ್ದುಪಡಿಯಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಮಹೇಶ್ ಜೋಶಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಸೂಕ್ತ ತನಿಖೆ ಮತ್ತು ಕಾನೂನು ಕ್ರಮಕ್ಕೆ ಆಗ್ರಹಿಸಿ ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಪ್ರೇಮಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಕಸಾಪ
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಒಂದು ಹೆಮ್ಮೆಯ ಸಂಸ್ಥೆಯಾಗಿದೆ. ನಾಡು – ನುಡಿ ರಕ್ಷಣೆಯ ಭವ್ಯ ಪರಂಪರೆಯನ್ನು ಹೊಂದಿರುವ ಈ ಸಂಸ್ಥೆಯನ್ನು ಕನ್ನಡದ ಹಲವು ಮಹನೀಯರು ಅತ್ಯಂತ ಶ್ರದ್ಧೆ ಮತ್ತು ನಿಸ್ವಾರ್ಥತೆಯಿಂದ ಕಟ್ಟಿ ಬೆಳೆಸಿದ್ದಾರೆ. ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ಮತ್ತು ಕರ್ನಾಟಕಕ್ಕೆ ಸಮಸ್ಯೆ ಎದುರಾದಾಗ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ನೈಜ ಧ್ವನಿಯಾಗಿ ಕೆಲಸ ಮಾಡಿದ ಇತಿಹಾಸವಿದೆ. ಸಮೃದ್ಧ ಕನ್ನಡ ಮತ್ತು ಕರ್ನಾಟಕವನ್ನು ಕಟ್ಟಿ ಬೆಳೆಸುವ ಗುರಿಯೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನು ಓದಿ :-ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧ ಕ್ರಮಕ್ಕೆ ಮಹಿಳಾ ಸಂಘ ಆಗ್ರಹ
ಇಂತಹ ಘನತೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಸ್ತುತ ರಾಜ್ಯ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಗೆ ವಿರುದ್ಧವಾಗಿ ಅಧಿಕಾರ ನಡೆಸುತ್ತಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ಕನ್ನಡದ ಕೆಲಸವನ್ನು ಮಾಡಿದವರು ಅತ್ಯಂತ ಸರಳವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿ ಕನ್ನಡವನ್ನು ಕಟ್ಟುವ ಕೆಲಸ ಮಾಡಿದ್ದರು. ಆದರೆ ಮಹೇಶ್ ಜೋಶಿಯವರು ಅನಗತ್ಯವಾಗಿ ಸರ್ಕಾರದ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನವನ್ನು ಪಡೆದುಕೊಂಡು ಕನ್ನಡದ ಪರವಾಗಿ ಕೆಲಸ ಮಾಡದೆ ಕೇವಲ ಅಧಿಕಾರ ಚಲಾಯಿಸುವುದರಲ್ಲಿ ನಿರತರಾಗಿದ್ದಾರೆ. ಮಹೇಶ್ ಜೋಶಿಯವರು ಮೈತುಂಬಾ ಭ್ರಷ್ಟಾಚಾರದ ಕೆಸರನ್ನು ಮೆತ್ತಿಕೊಂಡಿದ್ದಾರೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರವನ್ನು ಇದುವರೆಗೂ ನೀಡಿಲ್ಲ. ಅವರ ಅಧಿಕಾರ ದುರುಪಯೋಗ ಹಾಗೂ ದುರ್ವರ್ತನೆಯನ್ನು ಪ್ರಶ್ನಿಸಿದವರ ವಿರುದ್ಧ ನೋಟಿಸ್ ನೀಡುವುದು, ಕಸಾಪ ಆಜೀವ ಸದಸ್ಯತ್ವವನ್ನು ರದ್ದುಗೊಳಿಸುವುದು, ಚುನಾವಣೆಯ ಮೂಲಕ ಆಯ್ಕೆಗೊಂಡಿರುವ ಜಿಲ್ಲಾಧ್ಯಕ್ಷರುಗಳ ನಡುವೆ ಆರ್ಥಿಕ ತಾರತಮ್ಯ ಮಾಡುವುದು, ಆರ್ಥಿಕ ಅಶಿಸ್ತು, ಕನ್ನಡ ಸಾಹಿತ್ಯ ಪರಿಷತ್ತಿನ ಸಂವಿಧಾನಕ್ಕೆ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ತಿದ್ದುಪಡಿಗಳನ್ನು ತಂದು ಸಾಹಿತ್ಯ ಪರಿಷತ್ತಿನ ಪರಂಪರೆ ಮತ್ತು ಘನತೆಗೆ ಧಕ್ಕೆ ತರುವಂತಹ ದುರ್ವತ್ರನೆಗಳನ್ನು ತೋರುತ್ತಿರುವ ಸಮಸ್ತ ಕನ್ನಡಿಗರಿಗೆ ಆಘಾತ ತಂದಿದೆ ಎಂದು ಹೇಳಿದ್ದಾರೆ. ಕಸಾಪ
ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಉಂಟಾಗಿದೆ. ಕನ್ನಡ ಭಾಷೆಯ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ಕನ್ನಡದ ಅಸ್ಮಿತೆಗೆ ವಿರುದ್ಧವಾಗಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯಂತಹ ಹಾಗೂ ಕರ್ನಾಟಕವನ್ನು ಆರ್ಥಿಕವಾಗಿ ಹಿಂದಕ್ಕೆ ತಳ್ಳುವ ಒಕ್ಕೂಟ ವಿರೋಧಿ ಕೇಂದ್ರಾಡಳಿತದ ವಿರುದ್ಧ ಕನ್ನಡಿಗರನ್ನು ಜಾಗೃತಗೊಳಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಂಪೂರ್ಣ ನಿಶ್ಕ್ರಿಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿ ಕಟ್ಟುವ ಕೆಲಸ ಮಾಡುವ ಬದಲು ಒಬ್ಬ ವ್ಯಕ್ತಿಯ ವಿಜೃಂಭಣೆ, ಆಡಂಬರ, ಅಧಿಕಾರ ಲಾಲಸೆ ಬಲಿಯಾಗಿ ಹೋಗುತ್ತಿದೆ.
ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸುವ ಹೊಣೆಗಾರಿಕೆ ಕನ್ನಡ ಸಾಹಿತ್ಯ ಪರುಷತ್ತಿನ ಸದಸ್ಯರು ಮತ್ತು ಕನ್ನಡಿಗರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಂಟಕಪ್ರಾಯವಾಗಿರುವ ‘ಮಹೇಶ್ ಜೋಶಿಯನ್ನು ಇಳಿಸಿ; ಕಸಾಪ ಉಳಿಸಿ’ ಎಂಬ ಘೋಷಣೆಯೊಂದಿಗೆ ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರತಿರೋಧ ಆರಂಭವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನು ಓದಿ :-ಮುಸ್ಲಿಂ ಯುವಕನ ಕೊಲೆ : ಶಾಂತಿ ಕಾಪಾಡಲು ಸಿಪಿಐಎಂ ಮನವಿ.
1. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹೇಶ್ ಜೋಶಿ ಅವರನ್ನು ತತ್‌ಕ್ಷಣ ಅಧ್ಯಕ್ಷಗಾದಿಯಿಂದ ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿ, ಆಗಿರುವ ಅಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ.
2. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ನೀಡಿರುವ ಸರ್ಕಾರದ ರಾಜ್ಯ ಸಚಿವ ಸಂಪಟ ದರ್ಜೆಯ ಸ್ಥಾನಮಾನವನ್ನು ಕೂಡಲೇ ಹಿಂಪಡೆಯಬೇಕು.
2. ಮಹೇಶ್ ಜೋಶಿ ಅವರ ಅಧಿಕಾರಾವಧಿಯಲ್ಲಿ ಆಗಿರುವ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿಗಳನ್ನು ತಕ್ಷಣವೇ ರದ್ದುಗೊಳಿಸಬೇಕು.
3. ಮಂಡ್ಯ ಜಿಲ್ಲೆಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ನೇಮಕಗೊಂಡಿದ್ದ ಡಾ. ಮೀರಾಶಿವಲಿಂಗಯ್ಯ ಅವರಿಗೆ ವೇದಿಕೆಯಲ್ಲಿ ಮಾಡಿದ ಅವಮಾನಕ್ಕಾಗಿ ಮಹೇಶ್ ಜೋಶಿ ಅವರು ರಾಜ್ಯದ ಹೆಣ್ಣು ಮಕ್ಕಳ ಕ್ಷಮೆಯನ್ನು ಕೋರಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಮೇಟಿಕೆರೆ ಹಿರಿಯಣ್ಣ, ಡಾ. ಹಂಪನಹಳ್ಳಿ ತಿಮ್ಮೇಗೌಡ, ಧರ್ಮೇಶ್, ಆರ್.ಪಿ. ವೆಂಕಟೇಶ್‌ಮೂರ್ತಿ, ಎನ್.ಎಲ್. ಚನ್ನೇಗೌಡ, ಕೃಷ್ಣದಾಸ್, ವೆಂಕಟೇಶ್, ಉದಯರವಿ, ಸತೀಶ್, ಹರೀಶ್ ಕಟ್ಟೆಬೆಳಗುಲಿ, ಪಿ. ಶಾಡ್ರಾಕ್
ಟಿ.ಆರ್. ವಿಜಯಕುಮಾರ್, ಎಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ ಸೇರಿದಂತೆ ಅನೇಕ ಸಾಹಿತಿಗಳು, ಹೋರಾಟಗಾರರು ಪತ್ರಕ್ಕೆ ಸಹಿ ಹಾಕಿದ್ದಾರೆ. ಕಸಾಪ