ಬೆಂಗಳೂರು: ಕಾರ್ಮಿಕರ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯ ಎಂಬ ಕಾರ್ಮಿಕ ಇಲಾಖೆ ಆದೇಶ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿಯ ಸದಸ್ಯರು ಆಗಸ್ಟ್ 24 ರಂದು ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗಸ್ಟ್-24 ರಂದು ದೇಶಾದ್ಯಾಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ
ರಾಜ್ಯದಲ್ಲಿ ಬಾಕಿ ಇರುವ 2021-22ನೇ ಶೈಕ್ಷಣಿಕ ಸಾಲಿನ ಅರ್ಜಿಗಳಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸಲು ಇರುವ ಮಿತಿಯನ್ನು ತೆಗೆದು ಹಾಕಬೇಕು. ನಕಲಿ ಕಾರ್ಡ್‌ಗಳ ಹಾವಳಿ ನಿಯಂತ್ರಿಸಿ, ನೈಜ ಕಾರ್ಮಿಕರನ್ನು ಮಾತ್ರ ನೋಂದಾಣಿ ಮಾಡಿಕೊಳ್ಳಬೇಕು. ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರ ಕುಟುಂಬಗಳಿಗೂ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಒತ್ತಾಯಿಸಿದ್ದಾರೆ.
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ದುರ್ಬಳಕೆ ಸ್ಥಗಿತಗೊಳಿಸಬೇಕು. ಮಂಡಳಿಯಿಂದ ಆರಂಭಿಸಲಾದ ಶಿಶುವಿಹಾರ ಹಾಗೂ ಮೊಬೈಲ್ ಕ್ಲಿನಿಕ್‌ಗಳು, ವಿವಿಧ ಕಿಟ್, ಬಸ್ ಪಾಸ್ ಸೇವೆ ಸ್ಥಗಿತಗೊಳಿಸಬೇಕು. ಮನೆ ನಿರ್ಮಾಣಕ್ಕೆ ₹ 5ಲಕ್ಷ ಸಹಾಯಧನ ನೀಡಿ, ಕೊಳಚೆ ನಿರ್ಮೂಲನೆ ಮಂಡಳಿಗೆ ನೀಡಿದ್ದ ಹಣ ಹಿಂಪಡೆಯಬೇಕು. ನಿರ್ಮಾಣ ಕಾರ್ಮಿಕರಿಗೆ ಭವಿಷ್ಯನಿಧಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕರ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸಬೇಕು. 1996ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ, 1996ರ ಸೆಸ್ ಕಾಯ್ದೆ ಹಾಗೂ 1979ರ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆಗಳನ್ನು ಬಲಪಡಿಸಬೇಕು ಎಂದು ಪ್ರತಿಭಟನಕಾರರು ಹೇಳಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಭಾರತಿ.ಡಿ. ಅವರು ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ರಾಜ್ಯವ್ಯಾಪಿ ನಡೆದ ಹೋರಾಟದ ದೃಶ್ಯಗಳು