ಬಾಗಲಕೋಟೆ| ಗಲಭೆಗೆ ಕಾರಣರಾದವರ ಮೇಲೆ‌ ಕಠಿಣ ಕ್ರಮಕ್ಕೆ ಆಗ್ರಹ

ಬಾಗಲಕೋಟೆ: ನಗರದಲ್ಲಿ ನಡೆದ ಗಲಭೆಗೆ ಕಾರಣರಾದವರ ಮೇಲೆ‌ ಕಠಿಣ ಕ್ರಮಕ್ಕಾಗಿ ಸೌಹಾರ್ದ ಕರ್ನಾಟಕದ ಸಂಯೋಜಕ ಡಾ. ಎಸ್.ವೈ. ಗುರುಶಾಂತ್ ಆಗ್ರಹಿಸಿದ್ದಾರೆ.

ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ ಛತ್ರಪತಿ  ಶಿವಾಜಿ ಜಯಂತಿ ಸಂದರ್ಭದಲ್ಲಿ ನಡೆದಿರುವ ಘಟನೆಗಳು  ದುರದೃಷ್ಟಕರವಾದದ್ದು. ಹಿಂದೂ ಮುಸ್ಲಿಮ್ ಎಂದು ಸಮಾಜವನ್ನು ವಿಭಜಿಸಲು ಬಯಸಿರುವ ಶಕ್ತಿಗಳ ಇಚ್ಚೆಗೆ ಪೂರಕವಾಗಿಯೇ ಘಟನೆಗಳು ಜರುಗುತ್ತಿರುವುದು  ಆತಂಕಕಾರಿಯಾಗಿದೆ ಎಂದು ಹೇಳಿದರು.

ಶಿವಾಜಿ ಮಹಾರಾಜರ ಜಯಂತಿ ಸಂದರ್ಭವನ್ನು ನೆಪವಾಗಿರಿಸಿ ಕೋಮು ವಿಭಜನೆ ತರಲು ಕೆಲವು ಶಕ್ತಿಗಳು ಅತ್ಯಂತ ಪ್ರಚೋದನಾತ್ಮಕವಾಗಿ, ವ್ಯವಸ್ಥಿತವಾಗಿ ಕೆಲಸ ಮಾಡಿರುವುದು ಮೇಲ್ನೋಟದಲ್ಲಿ ಕಂಡು ಬರುತ್ತದೆ. ರಾಜ್ಯವ್ಯಾಪಿಯಾಗಿ, ದೇಶವ್ಯಾಪಿ ನಡೆಯುತ್ತಿರುವ ಇಂತಹ ಸರಣಿ ಘಟನೆಗಳ ಭಾಗವಾಗಿ ಈ ಪ್ರಚೋದನೆ ನಡೆದಿರುವುದು ಸ್ಪಷ್ಟವಾಗಿದೆ. ಮೆರವಣಿಗೆಯ ಮೇಲೆ ಕಲ್ಲು ಎಸೆದ ಪ್ರಕರಣದ ಸಂಬಂಧ 8 ಜನ ಅಲ್ಪಸಂಖ್ಯಾತ ಸಮುದಾಯವರನ್ನು ಬಂಧಿಸಲಾಗಿದೆ. ತಪ್ಪು ಮಾಡಿದ ಅಪರಾಧಿಗಳ ವಿರುದ್ಧ ನಿಸ್ಪಕ್ಷಪಾತವಾದ ಕಾನೂನುಕ್ರಮ ಜರುಗಬೇಕಿದೆ.

ಇದನ್ನೂ ಓದಿ: ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

ಇಲ್ಲಿನ ಒಟ್ಟು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ, ಮತ್ತು ಗಲಭೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಲ್ಲಿಯೂ ಪೋಲಿಸ್ ಮತ್ತು ಆಡಳಿತದ ವೈಫಲ್ಯ ಕಂಡು ಬರುತ್ತದೆ. ಹಾಗೂ ಮೆರವಣಿಗೆಯ ಶರತ್ತುಗಳನ್ನು ಉಲ್ಲಂಘಿಸಿ ಮಸೀದಿಯ ಮುಂದೆ ಡಿ.ಜೆ. ಹಚ್ಚಿ ಕುಣಿದು ಪ್ರಚೋದನಕಾರಿಯಾಗಿ ವರ್ತಿಸಿದ ಹಿಂದುತ್ವವಾದಿ ಕಾರ್ಯಕರ್ತರು, ಮುಖಂಡರ ವಿರುದ್ಧ ಸೂಕ್ತ ಕ್ರಮ ವಹಿಸಿಲ್ಲದಿರುವುದು ವಿಷಾದನೀಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪೋಲಿಸ್ ಇಲಾಖೆಯ ಅನುಮತಿ ಪ್ರಕಾರ ಫೆಬ್ರವರಿ 19 ರಂದು ಸಂಜೆ 7 ಗಂಟೆಗೆ ಮೆರವಣಿಗೆ ಮುಗಿಯ ಬೇಕಿತ್ತು. ಆದರೆ ನಗರದ ಮೆರವಣಿಗೆ ಇತರ ಪ್ರದೇಶಗಳನ್ನು ಹಾದು ಪಂಕಾ ಮಸೀದಿ ಮುಂದೆ ಬಂದಾಗ ರಾತ್ರಿ 9 ಗಂಟೆ ಆಗಿತ್ತು. ಆ ಹೊತ್ತಿನಲ್ಲೂ ಮಸೀದಿಯ ಮುಂದೆ ಸುಮಾರು 45 ನಿಮಿಷಗಳ ಕಾಲ ಮೆರಣಿಯನ್ನು ಸ್ಥಗಿತಗೊಳಿಸಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿ, ಅಬ್ಬರದ ಡಿ.ಜೆ. ಸಂಗೀತದೊಂದಿಗೆ ಪ್ರಚೋದನಕಾರಿಯಾಗಿ ವರ್ತಿಸಲಾಗಿದೆ.

ರಂಜಾನ್ ಹಬ್ಬದ ದಿನಗಳಾಗಿರುವುದರಿಂದ ಪಂಕಾ ಮಸೀದಿಯಲ್ಲಿ ನಮಾಜ್ ಗಾಗಿ ಹೆಚ್ಚಿನ ಜನ ಸೇರಿದ್ದರು ಎಂದೂ ತಿಳಿದು ಬಂದಿದೆ. ಮೆರವಣಿಗೆಯ ಮೇಲೆ ಕಲ್ಲು ಎಸೆದವರ ವಿರುದ್ಧ ಕಾನೂನುಕ್ರಮ ಜರುಗುತ್ತಿರುವಂತೆ, ಪೋಲಿಸ್ ಇಲಾಖೆಯ ಅನುಮತಿ ಮತ್ತು ಕಾನೂನನ್ನು ಮೀರಿ ದುರುದ್ದೇಶ ಪೂರ್ವಕವಾಗಿ ಪ್ರಚೋದನಕಾರಿಯಾಗಿ ವರ್ತಿಸಿದವರ ವಿರುದ್ಧವು ಕಾನೂನು ಕ್ರಮ ಜರುಗುವುದೇ ಸಹಜ ನ್ಯಾಯವಾಗಿದೆ ಎಂದರು.

ಈ ಬೆಳವಣಿಗೆಗಳ ನಂತರ ಬಾಗಲಕೋಟೆ ನಗರದಲ್ಲಿ ನಿಷೇದಾಜ್ಞೆ ವಿಧಿಸಿದ್ದಾಗಲೂ ಹಲವು ತರಕಾರಿ ಮತ್ತು ಮಾಂಸದ ಅಂಗಡಿಗಳ ಮೇಲೆ ದಾಳಿ ಮಾಡಿರುವುದು ಸಹ ವರದಿಯಾಗಿದೆ. ಹಿಂದುತ್ವವಾದಿ ಸಂಘಟನೆಗಳು ಮಸೀದಿಯ ಮೌಲ್ವಿ ಮುಂತಾದವರ ವಿರುದ್ಧ ಕ್ರಮಕ್ಕೆ ಒತ್ತಡ ಹೇರುತ್ತಿದ್ದು ಫೆಬ್ರವರಿ 26 ರಂದು ಬಾಗಲಕೋಟೆ ಚಲೋ ನಡೆಸುವುದಾಗಿ ಘೋಷಿಸಿರುವುದು ಸಹ ಒತ್ತಡ ತಂತ್ರದ ಭಾಗವೇ ಆಗಿದೆ.

ಈ ಒಟ್ಟು ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಮತ್ತು ಸರಕಾರ ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೇ ನಿಸ್ಪಕ್ಷಪಾತವಾಗಿ ಮತ್ತು ದೃಢವಾಗಿ ವರ್ತಿಸಬೇಕೆಂದು ಸೌಹಾರ್ದ ಕರ್ನಾಟಕವು ಒತ್ತಾಯಿಸುತ್ತದೆ ಎಂದು ತಿಳಿಸಿದರು.

ಒಂದೊಮ್ಮೆ ಬಂಧಿತರಲ್ಲಿ ನಿರಪರಾಧಿಗಳಿದ್ದಲ್ಲಿ ಅವರನ್ನು ಬಿಡುಗಡೆ ಮಾಡಬೇಕೆಂದು, ಗಲಭೆಗೆ ಪ್ರಚೋದನೆ ನೀಡಿದವರು ಇನ್ನೂ ಬಂಧಿತರಾಗಿಲ್ಲದೇ  ಇರುವುದರಿಂದ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ವಹಿಸಬೇಕೆಂದು, ಕೋಮು ವಿಭಜನೆ ಸೃಷ್ಟಿಸುವ ಶಕ್ತಿಗಳನ್ನು ಹತ್ತಿಕ್ಕಬೇಕು ಎಂದು ಒತ್ತಾಯಿಸುತ್ತದೆ. ಇದರ ಜೊತೆಗೆ ಜನತೆ ಸುಳ್ಳು ವದಂತಿಗಳಿಗೆ ಕಿವಿಗೊಡದೇ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೌಹಾರ್ದ ಕರ್ನಾಟಕವು ಜನರಲ್ಲಿ ಮನವಿ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: “ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎನ್ನುವ ಪ್ರಚಾರ: ನಿಜವೇ, ರಾಜಕೀಯ ಆಟವೇ?” – ಶಿವಸುಂದರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *