ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಇಂದು ತನ್ನ ಅಂತಿಮ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆಗಾಗಿ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಮೂವರು ಸದಸ್ಯರಿರುವ ಆಯೋಗದ ಅವಧಿಯು ನಾಳೆ (ಮೇ 6) ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ವರದಿಯನ್ನು ಸಲ್ಲಿಸಿದೆ.
ಜಮ್ಮುವಿಗೆ 43 ವಿಧಾನಸಭಾ ಕ್ಷೇತ್ರಗಳನ್ನು ನೀಡಲಾಗಿದ್ದರೆ, ಕಾಶ್ಮೀರಕ್ಕೆ 47 ಕ್ಷೇತ್ರಗಳನ್ನು ಶಿಫಾರಸು ಮಾಡಲಾಗಿದೆ. ಇದೇ ಮೊದಲ ಬಾರಿಗೆ, ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ. ಅವುಗಳಲ್ಲಿ ಆರು ಜಮ್ಮುವಿನಲ್ಲಿ ಮತ್ತು ಮೂರು ಕಾಶ್ಮೀರದಲ್ಲಿವೆ. ಈ ಹಿಂದಿನ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ನೀಡಿರಲಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 90 ವಿಧಾನಸಭಾ ಕ್ಷೇತ್ರಗಳಲ್ಲಿ 43 ಜಮ್ಮು ಪ್ರದೇಶದ ಭಾಗವಾಗಿರಲಿವೆ. 47 ಕ್ಷೇತ್ರಗಳು ಕಾಶ್ಮೀರ ಪ್ರದೇಶಕ್ಕೆ ಸೀಮಿತವಾಗಿರುತ್ತವೆ ಎಂದು ಕ್ಷೇತ್ರ ಮರುವಿಂಗಡಣೆ ಅಂತಿಮ ಆದೇಶದಲ್ಲಿ ಹೇಳಲಾಗಿದೆ.
ಜಮ್ಮುವಿನ ರಜೌರಿ, ದೋಡಾ, ಉಧಂಪುರ್, ಕಿಶ್ತ್ವಾರ, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಹೊಸದಾಗಿ ಒಂದು ಕ್ಷೇತ್ರವನ್ನು ಸೃಷ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ. ಈವರೆಗೆ ಕಾಶ್ಮೀರದಲ್ಲಿ 46 ಕ್ಷೇತ್ರಗಳಿದ್ದವು. ಜಮ್ಮುವಿನಲ್ಲಿ 37 ಸ್ಥಾನಗಳಿದ್ದವು.