ನವದೆಹಲಿ: ಸಿಎನ್‌ಜಿ ಗ್ಯಾಸ್ ಹಾಗೂ ಪೆಟ್ರೋಲ್ ಬೆಲೆಗಳನ್ನು ಸತತವಾಗಿ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಬೇಸತ್ತ ದೆಹಲಿ ಆಟೋ, ಟ್ಯಾಕ್ಸಿ ಮತ್ತು ಮಿನಿಬಸ್ ಚಾಲಕರು ಇಂದು(ಏಪ್ರಿಲ್ 18) ಮತ್ತು ನಾಳೆ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ.
ಬೆಲೆ ಏರಿಕೆ ವಿರೋಧಿಸಿ ವಿವಿಧ ಸಂಘಟನೆಗಳು ಮುಷ್ಕರ ನಡೆಸಿದ್ದು, ಹೆಚ್ಚಿನ ಯೂನಿಯನ್‌ಗಳು ಒಂದು ದಿನದ ಮುಷ್ಕರ ನಡೆಸುವುದಾಗಿ ಹೇಳಿದರೆ, ಕ್ಯಾಬ್ ಅಗ್ರಿಗೇಟರ್‌ಗಳಿಗೆ ಚಾಲನೆ ಮಾಡುವ ಸದಸ್ಯರನ್ನು ಹೊಂದಿರುವ ಸರ್ವೋದಯ ಡ್ರೈವರ್ ಅಸೋಸಿಯೇಷನ್ ದೆಹಲಿಯು “ಅನಿರ್ದಿಷ್ಟ” ಮುಷ್ಕರವನ್ನು ನಡೆಸಲಿದೆ ಎಂದು ಹೇಳಿಕೆ ನೀಡಿದ್ದವು.
ಕೇಂದ್ರ ಸರಕಾರ ಮತ್ತ ದೆಹಲಿ ಸರಕಾರ ಎರಡೂ ಕೂಡ ತಮ್ಮ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೆಹಲಿ ಆಟೋರಿಕ್ಷಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೋನಿ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪೂರಕವಾಗಿ 90,000 ಆಟೋಗಳು ಮತ್ತು 80,000 ಕ್ಕೂ ಹೆಚ್ಚು ನೋಂದಾಯಿತ ಟ್ಯಾಕ್ಸಿಗಳಿವೆ.
ಮೀಟರ್ ದರ ಏರಿಕೆಗಿಂತ ಇಂಧನ ದರ ಇಳಿಸಬೇಕು ಎಂಬುದು ಮುಖ್ಯ ಬೇಡಿಕೆ
ಮೀಟರ್ ದರ ಏರಿಸುವುದರಿಂದ ಸಾಮಾನ್ಯ ಜನರ ಜೀವನಕ್ಕೆ ಕಷ್ಟ ಆಗುತ್ತದೆ. ಆದ್ದರಿಂದ ಸರಕಾರ ಇಂಧನ ಬೆಲೆ ಏರಿಕೆ ಮಾಡಬಾರದು, ಸಿಎನ್‌ಜಿಗೆ ಸಬ್ಸಿಡಿ ಕೊಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ ಎಂದು ಅವರು ತಿಳಿಸಿದ್ದಾರೆ. ಒಂದು ಕಿಲೋ ಸಿಎನ್‌ಜಿಗೆ 35 ರೂ ಸಬ್ಸಿಡಿ ಕೊಡಬೇಕು ಎಂಬುದು ಕಾರ್ಮಿಕ ಸಂಘಟನೆಗಳು ಬೇಡಿಕೆ ಮುಂದಿಟ್ಟಿವೆ. ದೆಹಲಿಯಲ್ಲಿ ಒಂದು ಕಿಲೋ ಸಿಎನ್‌ಜಿ ಸದ್ಯ 71.61 ಕಿಲೋ ಇದೆ.
ಸಿಎನ್‌ಜಿಗೆ ಸಬ್ಸಿಡಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಮಾರ್ಚ್ 30ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆಯಲಾಗಿತ್ತು. ಆದರೆ, ಅದಕ್ಕೆ ಯಾವ ಸ್ಪಂದನೆಯೂ ಸಿಗಲಿಲ್ಲ. ಎರಡು ದಿನ ಪ್ರತಿಭಟನೆಗಳನ್ನೂ ಮಾಡಿದೆವು. ಅದರಿಂದಲೂ ಪ್ರಯೋಜನೆ ಆಗದ ಹಿನ್ನೆಲೆಯಲ್ಲಿ ಈಗ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಯಾಣ ದರ ಪರಿಷ್ಕರಣೆ ಪರಿಗಣಿಸಲು ಕಾಲಮಿತಿಯೊಳಗೆ ಸಮಿತಿ ರಚಿಸುತ್ತೇವೆಂದು ದೆಹಲಿ ಸರ್ಕಾರ ಘೋಷಣೆ ಮಾಡಿದೆ ಆದರೆ, ಪ್ರಮುಖವಾಗಿ ಬೆಲೆಗಳನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿರುವ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ಹಿಂಪಡೆಯಲು ನಿರಾಕರಿದ್ದವು.