ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಧಾರಾಕಾರ ಮಳೆ ಸುರಿದ ಪರಿಣಾಮವಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ನಗರದಲ್ಲಿನ ರಸ್ತೆಗಳೆಲ್ಲ ಜಲಾವೃತವಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆಯ ಪ್ರಮಾಣ ಮುಂದುವರೆದಿದ್ದು, ಗುಡುಗು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯ ಪ್ರಗತಿ ಮೈದಾನ, ಐಟಿಒ, ಲಜಪತ್ ನಗರ ಮತ್ತು ಜಂಗಪುರದ ಪ್ರಮುಖ ವಾಣಿಜ್ಯ ಪ್ರದೇಶದ ರಸ್ತೆಗಳಲ್ಲಿ ಮಳೆಯಿಂದ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರಿದಾಡುತ್ತಿರುವ ಪರಿಸ್ಥಿತಿ ಎದುರಾಗಿದೆ.
ಆಜಾದ್ ಮಾರ್ಕೆಟ್ ಅಂಡರ್‌ಪಾಸ್‌ನಲ್ಲಿ 1.5 ಅಡಿ ನೀರು ತುಂಬಿಕೊಂಡಿದ್ದು, ರಸ್ತೆಯಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ಮೂಲ್‌ಚಂದ್ ಅಂಡರ್‌ಪಾಸ್‌ನಲ್ಲಿ ಸಹ ಮಳೆಯಿಂದ ಜಲಾವೃತ್ತವಾಗಿವೆ. ಮಿಂಟೋ ಸೇತುವೆಯ ಸಹ ಮಳೆಯ ಕಾರಣದಿಂದ ಸೇತುವೆಯ ಮೇಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ನಗರದ ಪುಲ್ ಪ್ರಹ್ಲಾದಪುರ ಅಂಡರ್‌ಪಾಸ್ ಸಹ ಮಳೆಯಿಂದ ಜಲಾವೃತವಾಗಿದೆ. ಎಂಬಿ ರಸ್ತೆಯಲ್ಲಿ ಮಳೆಯಿಂದಾಗಿ ವಾಹನ ಸವಾರರು ಮಥುರಾ ರಸ್ತೆಯಲ್ಲಿ ಸಂಚರಿಸಬೇಕಿದೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಇನ್ನು ಹಲವಾರು ಪ್ರದೇಶಗಳಲ್ಲಿ ಮಳೆ ಮುಂದುವರೆಯಲಿದೆ. ದೆಹಲಿ, ಎನ್‌ಸಿಆರ್ (ಬಹದ್ದೂರ್‌ಘರ್, ಫರಿದಾಬಾದ್, ಬಲ್ಲಭಘರ್, ಲೋನಿ ದೇಹತ್, ಹಿಂಡನ್ ಎಎಫ್ ಸ್ಟೇಷನ್, ಗಾಜಿಯಾಬಾದ್, ಇಂದಿರಪುರಂ, ನೋಯ್ಡಾ, ಗ್ರೇಟರ್ ನೋಯ್ಡಾ) ಕೈತಲ್, ಕರ್ನಾಲ್, ರಾಜೌಂಡ್, ಅಸ್ಸಂಧ್, ಪಾಣಿಪತ್, ಗೊಹಾನಾ, ಗನ್ನೌರ್, ಸೋನಿಪತ್, ನರ್ವಾನಾ, ಜಿಂದ್, ರೋಹ್ಟಕ್, ಜಜ್ಜರ್, ಫರುಖ್ ನಗರ, ಸೋಹಾನಾ, ಪಲ್ವಾಲ್, ಪಾಣಿಪತ್, ಕರ್ನಾಲ್, ಗೋಹಾನಾ, ಗನ್ನೌರ್ (ಹರಿಯಾಣ) ಸಹರಾನ್ಪುರ, ಗಂಗೋಹ್, ದೇವಬಂದ್, ಮುಜಾಫರ್ ನಗರ, ಶಮ್ಲಿ, ಬಾರತ್ ಜತ್ತಾರಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ವರದಿ ಮಾಡಿದೆ.
ದೆಹಲಿಯಲ್ಲಿ ಶುಕ್ರವಾರ, 32.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣತೆ ದಾಖಲಾಗಿದೆ, ಸರಾಸರಿಗಿಂತ ಒಂದು ಹಂತ ಕಡಿಮೆಯಾಗಿದೆ ಮತ್ತು ಕನಿಷ್ಠ ತಾಪಮಾನವು 27.3 ಡಿಗ್ರಿ ಸೆಲ್ಸಿಯಸ್‌ಗಿಂತ ಸಾಮಾನ್ಯವಾಗಿದೆ. ತೇವಾಂಶದ ಮಟ್ಟವು ಶೇಕಡಾ 97 ರಿಂದ 70 ರಷ್ಟು ಏರಿಳಿತ ಕಂಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಶನಿವಾರ 32 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.
ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಮತ್ತು ಭಾನುವಾರ ಎಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಇಲಾಖೆಯು ಆಗಸ್ಟ್ 23 ರಿಂದ ಆಗಸ್ಟ್ 26 ರವರೆಗೆ ಗ್ರೀನ್ ಅಲರ್ಟ್ ಘೋಷಿಸಿದೆ.