ಜಹಾಂಗಿರ್‌ಪುರಿ: ನವದೆಹಲಿಯ ಜಹಾಂಗಿರ್‌ಪುರಿ ಪ್ರದೇಶದಲ್ಲಿ ಹನುಮ ಜಯಂತಿ ಅಂಗವಾಗಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಹಿಂಸಾಚಾರ ನಡೆದಿತ್ತು. ಹಿಂಸಾಚಾರದ ವೇಳೆ ಗುಂಡು ಹಾರಿಸಿದ್ದ ಆರೋಪ ಹೊತ್ತಿರುವ ವ್ಯಕ್ತಿಯ ಮನೆಗೆ ತೆರಳಿದ ದೆಹಲಿ ಪೊಲೀಸ್ ತನಿಖಾ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣ ಇಂದು ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲು ತೂರಾಟ ನಡೆಸಿದ್ದ ಪರಿಣಾಮ ಕೆಲ ಪೊಲೀಸರು ಗಾಯಗೊಂಡಿದ್ದು, ವಾಹನಗಳು ಜಖಂಗೊಂಡಿದ್ದವು. ಹಿಂಸಾಚಾರದ ವೇಳೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇದಾ ಲಾಲ್ ಮೇಲೆ ಗುಂಡು ಹಾರಿಸಿದ್ದ ಘಟನೆಯೂ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಪ್ರಕರಣದ ತನಿಖೆ ನಡೆಸುತ್ತಿದೆ.
ಇದನ್ನು ಓದಿ: ದೆಹಲಿ ಹನುಮ ಜಯಂತಿ ಮೆರವಣಿಗೆ: ಕಲ್ಲು ತೂರಾಟ-14 ಮಂದಿ ಬಂಧನ
ʻʻಸಿಡಿ ಪಾರ್ಕ್‌ನಲ್ಲಿರುವ ಆರೋಪಿ ಮನೆಗೆ ಶೋಧ ನಡೆಸಲು ಮತ್ತು ಮನೆಯವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ತೆರಳಿದ್ದ ಸಂದರ್ಭದಲ್ಲಿ ಆರೋಪಿಯ ಕುಟುಂಬದವರು ತನಿಖಾ ತಂಡದ ಮೇಲೆ ಕಲ್ಲು ತೂರಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆʼʼ ಎಂದು ವಾಯವ್ಯ ದೆಹಲಿ ಡಿಸಿಪಿ ಉಷಾರಾಣಿ ತಿಳಿಸಿದ್ದಾರೆ.
ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆ ಸಂದರ್ಭದಲ್ಲಿ ಶನಿವಾರ(ಏಪ್ರಿಲ್ 16) ಸಂಜೆ ಜಹಾಂಗಿರ್‌ಪುರಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ನಡೆದ ಕಲ್ಲುತೂರಾಟದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಉದ್ರಿಕ್ತರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು.
ಇದನ್ನು ಓದಿ: ಹುಬ್ಬಳ್ಳಿ ಗಲಭೆ: 40 ಮಂದಿ ವಶಕ್ಕೆ, ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ಜಾರಿ
ಈ ಮಧ್ಯೆ, ಜಹಾಂಗಿರ್‌ಪುರಿ ಹಿಂಸಾಚಾರಕ್ಕೆ ಸಂಬಂಧಿಸಿ ಇದುವರೆಗೆ 23 ಮಂದಿಯನ್ನು ಬಂಧಿಸಲಾಗಿದೆ.
ಇಬ್ಬರು ಆರೋಪಿಗಳಾದ ಅನ್ಸಾರ್ ಮತ್ತು ಅಸ್ಲಾಂ ಅವರನ್ನು 1 ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದ್ದು, 12 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧಿಸಲಾಗಿರುವ ಆರೋಪಿಗಳಲ್ಲಿ ಎಂಟು ಮಂದಿ ವಿರುದ್ಧ ಈಗಾಗಲೇ ಹಲವು ಕ್ರಮಿನಲ್ ಪ್ರಕರಣಗಳು ದಾಖಲಾಗಿವೆ.
ಮಸೀದಿಯಲ್ಲಿ ಕೇಸರಿ ಧ್ವಜ ಹಾರಿಸಲು ಯತ್ನ ಆರೋಪ ಸುಳ್ಳು
ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಆಸ್ತಾನ ಮಾತನಾಡಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ 23 ಜನರ ಬಂಧನ ಮಾಡಲಾಗಿದೆ. ಸಣ್ಣ ವಿಚಾರಕ್ಕಾಗಿ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ಆರಂಭಗೊಂಡಿದ್ದು, ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅದರ ಆಧಾರದ ಮೇಲೆ ಆರೋಪಿಗಳ ಬಂಧನ ಮಾಡಲಾಗಿದೆ ಎಂದರು.
ಹನುಮ ಜಯಂತಿ ‘ಶೋಭಾ ಯಾತ್ರೆ’ ಮೆರವಣಿಗೆ ವೇಳೆ ದೆಹಲಿಯ ಜಹಾಂಗೀರ್‌ಪುರಿಯಲ್ಲಿರುವ ಸ್ಥಳೀಯ ಮಸೀದಿಯಲ್ಲಿ ಕೇಸರಿ ಧ್ವಜ ಹಾರಿಸಲು ಯತ್ನಿಸಲಾಗಿದೆ ಎಂಬ ಆರೋಪವನ್ನು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನ ನಿರಾಕರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ.
ನಾವು ಸಾಮಾಜಿಕ ಮಾಧ್ಯಮವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ತಪ್ಪು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.