ಮುಂಬೈ: ಹಸ್ರತ್ ನಿಜಾಮುದ್ದೀನ್ ಕಡೆಯಿಂದ ಗೋವಾ ಕಡೆಗೆ ಬರುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸುರಂಗದೊಳಗೆ ಶನಿವಾರ ಬೆಳಗ್ಗೆ ಹಳಿ ತಪ್ಪಿದ ಘಟನೆ ನಡೆದಿದ್ದು, ಯಾವುದೆ ಹಾನಿ ಸಂಭವಿಸಿಲ್ಲ, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ರೈಲು ಸಂಖ್ಯೆ 02414 ಗೋವಾದ ಮಡಂಗಾವ್ ಗೆ ಹಸ್ರತ್ ನಿಜಾಮುದ್ದೀನ್ ಕಡೆಯಿಂದ ಬರುತ್ತಿತ್ತು. ಇಂದು ನಸುಕಿನ ಜಾವ 4.15ರ ಸುಮಾರಿಗೆ ಮುಂಬೈಯಿಂದ 325 ಕಿಲೋ ಮೀಟರ್ ದೂರದಲ್ಲಿ ಕರ್ಬುಡೆ ಸುರಂಗದ ಒಳಗೆ ರೈಲಿನ ಹಳಿ ತಪ್ಪಿತು ಎಂದು ಕೊಂಕಣ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.
ದೊಡ್ಡ ಬಂಡೆ ಕಲ್ಲೊಂದು ಹಳಿಯ ಮೇಲೆ ಬಿದ್ದಿದ್ದರಿಂದ ರೈಲು ಹಳಿ ತಪ್ಪಿತು. ರಾಜಧಾನಿ ಸೂಪರ್ ಫಾಸ್ಟ್ ರೈಲು ಚಲಿಸುತ್ತಿರುವಾಗ ಮುಂದಿನ ಚಕ್ರ ಕರ್ಬುಡೆ ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದೆ. ಸ್ಥಳಕ್ಕೆ ರೈಲು ಉಸ್ತುವಾರಿ ವೆಹಿಕಲ್ ಹಾಗೂ ಅಧಿಕಾರಿಗಳು ದೌಡಾಯಿಸಿ ಹಳಿ ತಪ್ಪಿದ ರೈಲನ್ನು ಸರಿಪಡಿಸಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳ ಮೂಲಕ ಹಲವಾರು ನದಿಗಳು, ದಟ್ಟ ಕಾನನಗಳು ಹಾಗೂ ಗುಹೆಗಳ ಮೂಲಕ ಹಾದು ಹೋಗುವ ರಾಜಧಾನಿ ಎಕ್ಸ್‍ಪ್ರೆಸ್ ಮುಂಬೈ ಸಮೀಪದ ರೋಹಾದಿಂದ 756 ಕಿ.ಮೀ. ಸಂಚರಿಸಿ ಗೋವಾ ತಲುಪಲಿದೆ.