ನವದೆಹಲಿ: ವಾಯುವ್ಯ ದೆಹಲಿಯ ರೋಹಿಣಿಯಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ನಿಗೂಢ ಸ್ಫೋಟ ಸಂಭವಿಸಿದ ಪರಿಣಾಮ ಒಬ್ಬ ಸಿಬ್ಬಂದಿಗೆ ಗಾಯವಾಗಿದೆ. ಘಟನೆಯು ಇಂದು ಬೆಳಿಗ್ಗೆ 10.30ರ ಸುಮಾರಿಗೆ ಸಂಭವಿಸಿದೆ. ನ್ಯಾಯಾಲಯದ 102ನೇ ನಂಬರ್ ನ ಚೇಂಬರ್ ನಲ್ಲಿ ಸ್ಫೋಟ ಸಂಭವಿಸಿದೆ. ಕೋರ್ಟ್ ಆವರಣದಲ್ಲಿ ಉಂಟಾದ ಸ್ಫೋಟದಿಂದಾಗಿ ಅಲ್ಲಿದ್ದ ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಸ್ಫೋಟದ ತೀವ್ರತೆಯು ಅಲ್ಪಪ್ರಮಾಣದಲ್ಲಿ ಉಂಟಾಗಿದ್ದರಿಂದ ಯಾವುದೇ ಹೆಚ್ಚಿನ ಹಾನಿ ಸಂಭವಿಸಲಿಲ್ಲ. ಗಾಯಗೊಂಡ ವ್ಯಕ್ತಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಅಗ್ನಿಶಾಮಕ ದಳದ ಅಧಿಕಾರಿಗಳು ವಿವರ ನೀಡಿದ್ದಾರೆ.
ಘಟನೆಯ ನಂತರ ಕೋರ್ಟ್ ನಲ್ಲಿನ ನಡೆಯುತ್ತಿದ್ದ ಎಲ್ಲಾ ಕಲಾಪಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಲ್ಯಾಪ್ ಟಾಪ್ ನಿಂದಾಗಿ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದ್ದಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ಬಗ್ಗೆ ಅಧಿಕಾರಿಗಳು ಇನ್ನಷ್ಟೇ ನಿಖರ ಮಾಹಿತಿ ನೀಡಬೇಕಾಗಿದೆ ಎಂದು ವರದಿ ತಿಳಿಸಿದೆ.
ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ. ತನಿಖೆಯ ಪ್ರಾಥಮಿಕ ಹಂತದಲ್ಲಿ ಕಚ್ಚಾ ಬಾಂಬ್ ಅನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. ಫೋರೆನ್ಸಿಕ್ ಮತ್ತು ಎನ್‌ಎಸ್‌ಜಿ (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್) ತಂಡಗಳು ಹೆಚ್ಚಿನ ಪರಿಶೀಲನೆ ಕೈಗೊಂಡಿದ್ದಾರೆ.
ಲ್ಯಾಪ್‌ಟಾಪ್ ನೆಲದ ಮೇಲೆ ಬಿದ್ದಿರುವ ವಿಡಿಯೋಗಳು ವೈರಲ್ ಆಗಿವೆ. ಸ್ಫೋಟದ ನಂತರ ಎಲ್ಲಾ ವಕೀಲರು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಓಡಿಬಂದಿದ್ದಾರೆ. ವಿಷಯ ತಿಳಿದ ಕೂಡಲೇ ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು. ಆರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಈ ಹಿಂದೆ ಸೆಪ್ಟೆಂಬರ್ 24ರಂದು ರೋಹಿಣಿ ಕೋರ್ಟ್‌ನ ನ್ಯಾಯಾಲಯದ ಕೊಠಡಿಯಲ್ಲಿ ಮೂವರನ್ನು ಹತ್ಯೆಗೈದ ಶೂಟೌಟ್‌ಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯು ದೆಹಲಿಯ ಹೈಕೋರ್ಟ್ ನಡೆಯುತ್ತಿದೆ. ದೆಹಲಿ ಹೈಕೋರ್ಟ್ ಕಳೆದ ತಿಂಗಳು ನ್ಯಾಯಾಲಯಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಿತ್ತು.