- ದೇಶದ ಬಹುದೊಡ್ಡ ಕಾರು ಕಳ್ಳನ ಬಂಧನ
- ಈ ಕದೀಮ ಕದ್ದಿದ್ದು ಬರೋಬ್ಬರಿ 5000 ಕಾರುಗಳು
- ದಿಲ್ಲಿ ಪೊಲೀಸರಿಂದ ಕಳ್ಳ ಅನಿಲ್ ಚೌಹಾಣ್ ಬಂಧನ
ನವದೆಹಲಿ: ಕಳೆದ 27 ವರ್ಷದಿಂದ ಕಳ್ಳತನ ಮಾಡುತ್ತಿದ್ದ ದೇಶದ ಅತಿದೊಡ್ಡ ಕಾರು ಕಳ್ಳನನ್ನು ವಿಶೇಷ ದಳದ ಪೊಲೀಸರು ಸೋಮವಾರ ಸೆರೆ ಹಿಡಿದಿದ್ದಾರೆ. ಕಳ್ಳತನದಲ್ಲಿ ಭಾರೀ ಅನುಭವವನ್ನೇ ಹೊಂದಿರುವ ಆರೋಪಿ ಅನಿಲ್ ಚೌಹಾಣ್(52). ದೆಹಲಿ, ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈತ ಆಸ್ತಿಗಳನ್ನು ಹೊಂದಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದನು.
ಈತ ದೇಶದ ವಿವಿಧೆಡೆ 5,000ಕ್ಕೂ ಹೆಚ್ಚು ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತನನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಆರು ದೇಶೀಯ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಮದ್ದುಗುಂಡು, ಒಂದು ಕದ್ದ ಬೈಕನ್ನು ವಶ ಪಡಿಸಿಕೊಂಡಿದ್ದಾರೆ.
1995ಕ್ಕೂ ಮೊದಲು ದೆಹಲಿಯಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಅನಿಲ್ ಚೌಹಾಣ್, ನಂತರದ ದಿನಗಳಲ್ಲಿ ಕಾರು ಕಳ್ಳತನದ ಕೃತ್ಯಕ್ಕೆ ಇಳಿದ. ಅಸ್ಸಾಂನ ತೇಜ್‌ಪುರ ಮೂಲದ ಖಾನ್‌ಪುರ ಎಕ್ಸ್‌ಟೆನ್ಶನ್‌ನ ನಿವಾಸಿ ಅನಿಲ್ ಚೌಹಾಣ್ 12 ನೇ ತರಗತಿಯವರೆಗೆ ಓದಿದ್ದಾನೆ.
ಆರಂಭದ ದಿನಗಳಲ್ಲಿ ಮಾರುತಿ 800 ಕಾರುಗಳಿಗೇ ಗುರುತಿಸಿ ಕಳ್ಳತನ ಮಾಡುತ್ತಿದ್ದ ಇವನು. ಹೀಗೆ ಕದ್ದ ವಾಹನಗಳನ್ನು ನೇಪಾಳ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದನು. ಕಳ್ಳತನದ ಸಂದರ್ಭದಲ್ಲಿ ಕೆಲವು ಟ್ಯಾಕ್ಸಿ ಚಾಲಕರನ್ನು ಕೊಂದಿದ್ದಾಗಿಯೂ ಆರೋಪಿ ಬಾಯ್ಬಿಟ್ಟಿದ್ದಾನೆ.
ಅನಿಲ್‌ನನ್ನು ಈ ಹಿಂದೆಯೂ ಹಲವು ಬಾರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಿಜಾಮುದ್ದೀನ್ ಪೊಲೀಸ್ ಠಾಣೆಯ ಕ್ರಿಮಿನಲ್ ಕೇಸ್‌ನಲ್ಲಿ ಐದು ವರ್ಷಗಳ ಕಾಲ ಶಿಕ್ಷೆಗೊಳಗಾಗಿದ್ದ. 2015 ರಿಂದ 2020ರವರೆಗೆ ಜೈಲಿನಲ್ಲಿದ್ದ. ಅನಿಲ್ ಚೌಹಾಣ್ ವಿರುದ್ಧ ಒಟ್ಟು 180 ಪ್ರಕರಣಗಳು ದಾಖಲಾಗಿವೆ. ಮೂವರು ಪತ್ನಿಯರು, 7 ಮಂದಿ ಮಕ್ಕಳಿದ್ದಾರೆಂದು ವಿಚಾರಣೆಯ ವೇಳೆ ಗೊತ್ತಾಗಿದೆ.
ಬಂಧನ ಹೇಗಾಯ್ತು?
ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪತ್ತೆ ಹಚ್ಚಲು ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವೇಳೆ ಅನಿಲ್ ಚೌಹಾಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿಯೊಂದಿಗೆ ಡಿಬಿಜಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ ಅನಿಲ್ ಚೌಹಾಣ್‌ನನ್ನು ಸೋಮುವಾರ ಬಂಧಿಸಲಾಗಿದೆ.
ದಂಧೆ ಬದಲಿಸಿದ್ದ
ಇತ್ತೀಚೆಗೆ ಕಾರುಗಳ್ಳತನದಿಂದ ಹೆಚ್ಚು ಲಾಭ ಇಲ್ಲ ಎಂದು ತೀರ್ಮಾನಿಸಿದ್ದ ಖದೀಮ, ದಂಧೆಯನ್ನೇ ಬದಲಾಯಿಸಿದ್ದ. ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಇಳಿದಿದ್ದ. ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಇರುವ ನಿಷೇಧಿತ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದ. ಅದರಿಂದ ಬಂದ ಹಣವನ್ನು ಅದೇ ಭಾಗದಲ್ಲಿ ಹೂಡಿಕೆ ಮಾಡಿದ್ದ. ಈಶಾನ್ಯ ರಾಜ್ಯಗಳಲ್ಲಿ ಸ್ವತ್ತುಗಳನ್ನು ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.