ನವದೆಹಲಿ: 5ಜಿ ನೆಟ್‌ವರ್ಕ್‌ನ್ನು ಭಾರತ ದೇಶದಲ್ಲಿ ಜಾರಿಗೊಳಿಸಬಾರದು. ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ಅವರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಹಾಗೆಯೇ, ನ್ಯಾಯಾಲಯವು ಅವರಿಗೆ ₹20 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
‘ಈ ಅರ್ಜಿ ದೋಷಯುಕ್ತವಾಗಿದೆ ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ‘ ಎಂದು ನ್ಯಾಯಮೂರ್ತಿ ಜೆ ಆರ್ ಮಿಧಾ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.
ಇದನ್ನು ಓದಿ: ಮಧ್ಯಪ್ರದೇಶದಲ್ಲಿ 3000 ಕಿರಿಯ ವೈದ್ಯರು ರಾಜೀನಾಮೆ
‘ಈ ಅರ್ಜಿಯ ವಿಚಾರಣೆ ನಡೆಯುವ ಸಮಯದಲ್ಲಿ ವಿಡಿಯೋ ಸಂವಾದವನ್ನು ಜೂಹಿ ಜಾವ್ಲಾ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ವಿಚಾರಣೆ ವೇಳೆ ಹಿಂದಿ ಹಾಡುಗಳನ್ನು ಕೇಳಿಸಲಾಗಿದೆ. ಇದನ್ನೆಲ್ಲ ನೋಡಿದರೆ ಪ್ರಚಾರಕ್ಕೆ‘ ಈ ಕೆಲಸ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಜೆ ಆರ್ ಮಿಧಾ ಹೇಳಿದ್ದಾರೆ.
‘ಅರ್ಜಿದಾರರು 5ಜಿ ನೆಟ್‌ವರ್ಕ್ ಸಂಬಂಧ ಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಸಂಪರ್ಕಿಸಬೇಕಿತ್ತು ಮತ್ತು ಒಂದು ವೇಳೆ ಸರ್ಕಾರ ನಿರಾಕರಿಸಿದರೆ ನಂತರದಲ್ಲಿ ಅವರು ನ್ಯಾಯಾಲಯಕ್ಕೆ ಬರಬಹುತ್ತಿತ್ತು‘ ಎಂದಿದ್ದಾರೆ.
ದೆಹಲಿ ಉಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಜೂಹಿ ಚಾವ್ಲಾ ಅವರು ‘ಈ ಆದೇಶವನ್ನು ಪ್ರಶ್ನಿಸಿ ತಡೆಗಾಗಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು‘ ಎಂದು ಹೇಳಿದ್ದಾರೆ.
ಇದನ್ನು ಓದಿ: ಲಸಿಕೆ ನೀತಿ ಕೇಂದ್ರ ಸರ್ಕಾರ ಕಾಳಸಂತೆಗೆ ನೆರವು ನೀಡುವಂತಿದೆ: ಕೇರಳ ಸರ್ಕಾರ
ಜೂಹಿ ಚಾವ್ಲಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವೀರೇಶ್ ಮಲಿಕ್ ಮತ್ತು ಟಿನಾ ವಚಾನಿ ಸಲ್ಲಿಸಿದ್ದ ಅರ್ಜಿಯು 5ಜಿ ತಂತ್ರಜ್ಞಾನವನ್ನು ಜಾರಿಗೆ ತರಲು ದೂರಸಂಪರ್ಕ ಉದ್ಯಮವು ಯೋಜನೆ ರೂಪಿಸಿದ್ದಾರೆ, ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ ಮತ್ತು ಭೂಮಿಯ ಮೇಲಿನ ಯಾವುದೇ ಸಸ್ಯಗಳು ಈ ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ದಿನದ 24 ಗಂಟೆಗಳು, ವರ್ಷದ 365 ದಿನಗಳು, ಆರ್‌ಎಫ್ ವಿಕಿರಣದ ಮಟ್ಟವು ಇಂದು ಅಸ್ತಿತ್ವದಲ್ಲಿರುವುದಕ್ಕಿಂತ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ ಎಂದು ವಿವರಿಸಿದ್ದಾರೆ.