ನವದೆಹಲಿ: ಕಳೆದ ವರ್ಷ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಲಯದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಜೈರಾಮ್ ಬಂಭಾನಿ ಅವರನ್ನೊಳಗೊಂಡ ನ್ಯಾಯಪೀಠ, ಮೂವರಿಗೂ ಜಾಮೀನು ನೀಡಿದೆ.
ಇದನ್ನು ಓದಿ: ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್ ಬಂಧನ: ಸಿಪಿಐಎಂ ಖಂಡನೆ
ವಿದ್ಯಾರ್ಥಿಗಳನ್ನು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ (ಯುಎಪಿಎ) ಯಲ್ಲಿ ಪೊಲೀಸರು ಬಂಧಿಸಿದ್ದರು. ಪ್ರಕರಣ ಗಂಭೀರವಾಗಿರುವ ಕಾರಣದಿಂದ ವಿಚಾರಣಾ ನ್ಯಾಯಾಲಯವು ಮೂವರನ್ನು ಕಳೆದ ವರ್ಷ ಮೇ ತಿಂಗಳಿನಲ್ಲಿ ಇವರಿಗೆ ಜಾಮೀನು ನೀಡಲು ನಿರಾಕರಿಸಿತು. ಈ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದ ಆರೋಪಿಗಳಿಗೆ ಈಗ ಜಾಮೀನು ಲಭಿಸಿದೆ.
ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಾದ ನಂತರ ಫೆಬ್ರುವರಿ 24ರಂದು ನಡೆದ ಘರ್ಷಣೆ ಹಿಂಸಾರೂಪ ಪಡೆದಿತ್ತು. ಹಿಂಸಾಚಾರದಲ್ಲಿ 53 ಮಂದಿ ಸಾವಿಗೀಡಾಗಿದ್ದರು ಮತ್ತು 200 ಮಂದಿ ಗಾಯಗೊಂಡಿದ್ದರು. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಈ ಮೂವರೂ ತೀವ್ರವಾಗಿ ಪ್ರಯತ್ನಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದರು.
ಇದನ್ನು ಓದಿ: ದಿಲ್ಲಿ ಹಿಂಸಾಚಾರದ ಬಗ್ಗೆ ದಿಲ್ಲಿ ಪೊಲೀಸ್ ತನಿಖೆ ವಿಶ್ವಾಸಯೋಗ್ಯವಾಗಿಲ್ಲ
ನ್ಯಾಯಾಲಯವು ರೂ. 50,000 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಎರಡು ಸ್ಥಳೀಯ ಶ್ಯೂರಿಟಿಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಪಿಂಜ್ರಾ ಟೊಡ್ ಸಂಘಟನೆಯ ಕಾರ್ಯಕರ್ತರಾಗಿರುವ ನರ್ವಾಲಾ ಮತ್ತು ಕಾಳಿತಾ ಮತ್ತು ತನ್ಹಾ ಅವರಿಗೆ ತಮ್ಮ ಪಾಸ್ಪೋರ್ಟ್ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿತು. ಜತೆಗೆ, ಸಾಕ್ಷ್ಯಗಳನ್ನು ಪ್ರಚೋದಿಸಬಾರದು ಮತ್ತು ನಾಶ ಮಾಡಬಾರದು ಎಂದು ಸೂಚಿಸಿತು.
ಇದನ್ನು ಓದಿ: ಸಿದ್ದಿಕಿ ಕಪ್ಪನ್ ಬಂಧನ- ಉತ್ತರಪ್ರದೇಶ ಪೋಲೀಸಿಗೆ ನೋಟೀಸು, ಮಧ್ಯಂತರ ಆದೇಶದ ಮಾತಿಲ್ಲ
ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪರ್ಷಿಯನ್ ಕುರಿತು ಬಿ ಎ ಆನರ್ಸ್ ವ್ಯಾಸಂಗ ಮಾಡುತ್ತಿದ್ದ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು 2020ರ ಮೇನಲ್ಲಿ ಬಂಧಿಸಲಾಗಿತ್ತು. ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದರು. ಇವರು ಪಿಂಜ್ರಾತೋಡ್ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ. ಇವರನ್ನು ಕೂಡ 2020ರ ಮೇನಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಇವರು ಜೈಲುವಾಸ ಅನುಭವಿಸುತ್ತಿದ್ದರು.
ದೇವಂಗನಾ ಕಲಿತಾ ಮತ್ತು ನತಾಶಾ ನರ್ವಾಲ್ ಪರವಾಗಿ ವಕೀಲರಾದ ಅದಿತ್ ಎಸ್ ಪೂಜಾರಿ, ತುಷಾರಿಕಾ ಮಟ್ಟೂ, ಕುನಾಲ್ ನೇಗಿ ಹಾಜರಿದ್ದರು. ಆಸಿಫ್ ಇಕ್ಬಾಲ್ ತನ್ಹಾ ಅವರ ಪರವಾಗಿ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಅಗರ್ವಾಲ್, ವಕೀಲರಾದ ಸೌಜನ್ಯಾ ಶಂಕರನ್, ಸಿದ್ಧಾರ್ಥ್ ಸತಿಜಾ, ಅಭಿನವ್ ಸೆಖಾರಿ, ನಿತಿಕಾ ಖೈತಾನ್ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ಗಳಾದ ಅಮಿತ್ ಮಹಾಜನ್, ಅಮಿತ್ ಪ್ರಸಾದ್, ರಜತ್ ನಾಯರ್ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.