ಅಗ್ನಿ ದುರಂತಕ್ಕೆ 27 ಮಂದಿ ಬಲಿ: ಕಟ್ಟಡ ಮಾಲೀಕ ಪರಾರಿ- ಕಟ್ಟಡಕ್ಕಿಲ್ಲ ಅಗ್ನಿಶಾಮಕ ಎನ್‌ಒಸಿ

ದೆಹಲಿ: ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪ ಮೂರು ಮಹಡಿಯ ಕಟ್ಟಡದಲ್ಲಿ ನೆನ್ನೆ (ಮೇ 13) ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ದುರಂತದಲ್ಲಿ ಸುಮಾರು 27 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸಿಸಿಟಿವಿ ಕ್ಯಾಮೆರಾಗಳು ಮತ್ತು ರೂಟರ್ ತಯಾರಿಕಾ ಕಂಪನಿಯ ಕಚೇರಿಯಾಗಿರುವ ಕಟ್ಟಡದ 1ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಜನರು ಸಹಾಯಕ್ಕಾಗಿ ಅಂಗಲಾಚುತ್ತಿರುವದನ್ನು ಕಾಣಬಹುದಾಗಿದೆ. ಇನ್ನೂ ಕೆಲವರು ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಟ್ಟಡದಿಂದ ಜಿಗಿದಿದ್ದಾರೆ.

30ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಶ್ರಮವಹಿಸಿದರು. ಸತತ ಆರು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ತಡರಾತ್ರಿ ಬೆಂಕಿ ಶಮನಗೊಳಿಸಲಾಯಿತು. ಶುಕ್ರವಾರ ಸಂಜೆ 4.45ಕ್ಕೆ ಬೆಂಕಿ ಹೊತ್ತಿಕೊಂಡ ಬಗ್ಗೆ ಪೊಲೀಸರಿಗೆ ಕರೆ ಬಂದಿದ್ದು, ತಕ್ಷಣವೇ ಪೊಲೀಸರು ಕಾರ್ಯಾಚರಣೆಗೆ ಇಳಿದರು.

ದುರ್ಘಟನೆಯಲ್ಲಿ ಹಲವು ಮಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಬೆಂಕಿಯ ಜ್ವಾಲಕ್ಕೆ ನಾಪತ್ತೆಯಾದವರ ಸಂಬಂಧಿಕರು ತಮ್ಮ ಪ್ರೀತಿಪಾತ್ರರನ್ನು ಹುಡುಕಲು ಸಾಧ್ಯವಾಗದೆ ಭಯಭೀತರಾಗಿದ್ದಾರೆ. ಇದು ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವಾಗಿದ್ದು, ಕಂಪನಿಗಳಿಗೆ ಕಚೇರಿ ಸ್ಥಳವನ್ನು ಒದಗಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳು ಮತ್ತು ರೂಟರ್ ತಯಾರಿಕಾ ಕಂಪನಿಯ ಕಚೇರಿ ಮೊದಲನೇ ಮಹಡಿಯಲ್ಲಿದ್ದು, ಅಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಇದೀಗ ಕಂಪನಿ ಮಾಲೀಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ, ವಾಣಿಜ್ಯ ಕಟ್ಟಡ ಮಾಲೀಕ ಅಗ್ನಿಶಾಮಕ ಇಲಾಖೆಯಿಂದ ಸುರಕ್ಷತಾ ಪ್ರಮಾಣಪತ್ರವನ್ನು ಪಡೆಯದೇ ಕಟ್ಟಡ ನಿರ್ಮಿಸಿದ್ದು, ಘಟನೆ ಬಳಿಕ ಮಾಲೀಕ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಕಟ್ಟಡದ ಮಾಲೀಕರನ್ನು ಮನೀಶ್ ಲಾಕ್ರಾ ಎಂದು ಗುರುತಿಸಲಾಗಿದ್ದು, ಆದಷ್ಟು ಬೇಗನೇ ಆತನನ್ನು ಬಂಧಿಸಲಾಗುವುದು ಎಂದು ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ವಾಣಿಜ್ಯ ಕಟ್ಟಡ ಅಗ್ನಿ ದುರಂತ ನಿಯಂತ್ರಣಕ್ಕೆ ಬಂದ ಕೆಲವೇ ಗಂಟೆಗಳ ನಂತರ, ವಾಣಿಜ್ಯ ಕಟ್ಟಡಕ್ಕೆ ಎನ್‌ಒಸಿ ಪಡೆದುಕೊಂಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಗ್ನಿ ಅವಘಡದಲ್ಲಿ ಈವರೆಗೂ ಕಟ್ಟಡದಿಂದ 27 ಶವಗಳನ್ನು ಹೊರತೆಗೆಯಲಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದೀಗ ಸ್ಥಳದಲ್ಲಿ ಅಗ್ನಿ ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *