ಹೊಸದಿಲ್ಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಹಗರಣ
6-8 ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ಪ್ರಾಸಿಕ್ಯೂಷನ್ ಬದ್ಧವಾಗಿದೆ. ಮುಂದಿನ ಮೂರು ತಿಂಗಳಲ್ಲಿ ಪ್ರಕ್ರಿಯೆಯು ಉದ್ದೇಶಿತ ಗತಿಯಲ್ಲಿ ಮುಗಿಯದಿದ್ದರೆ ಸಿಸೋಡಿಯಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ಕಾನೂನು ಪ್ರಶ್ನೆಗಳನ್ನು ಪರಿಶೀಲಿಸುವುದರಿಂದ ದೂರವಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ:ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್ಗೆ ಜಾಮೀನು ನಿರಾಕರಣೆ
ಈ ತಿಂಗಳ ಆರಂಭದಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು. 51 ವರ್ಷ ವಯಸ್ಸಿನ ಸಿಸೋಡಿಯಾ, ತಮ್ಮ ವಿರುದ್ಧದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ಕೋರಿದ್ದಾರೆ. ಒಂದನ್ನು ಕೇಂದ್ರ ತನಿಖಾ ದಳ ಮತ್ತು ಇನ್ನೊಂದನ್ನು ಜಾರಿ ನಿರ್ದೇಶನಾಲಯ ಸಲ್ಲಿಸಿವೆ.
ಹಿಂದಿನ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರ ಏಜೆನ್ಸಿಗಳಿಗೆ ಸಾಕ್ಷ್ಯಗಳ ಬಗ್ಗೆ ಕಠಿಣ ಪ್ರಶ್ನೆಗಳನ್ನು ಹಾಕಿತ್ತು. “ನೀವು ಸಾಕ್ಷ್ಯಗಳ ಸರಪಳಿಯನ್ನು ಸ್ಥಾಪಿಸಬೇಕು. ಹಣವು ಮದ್ಯದ ಲಾಬಿಯಿಂದ ಆರೋಪಿತನಿಗೆ ಹೋಗಿರುವ ಬಗ್ಗೆ ಸಾಕ್ಷಿಗಳಿದ್ದಲ್ಲಿ ಮಾತ್ರ ಅದು ಅಪರಾಧವೆಂದು ಪರಿಗಣಿಸಬಹುದು. ನೀತಿ ಬದಲಾವಣೆಗಳಲ್ಲಿ ತಪ್ಪಿದ್ದರೂ ಅದರಲ್ಲಿ ಹಣದ ಅಕ್ರಮ ಇಲ್ಲದಿದ್ದರೆ ಅದು ಅಪರಾಧವಲ್ಲ” ಎಂದು ನ್ಯಾಯಾಲಯ ಹೇಳಿತ್ತು.
“ನೀವು ಮನೀಷ್ ಸಿಸೋಡಿಯಾ ಅವರನ್ನು ಮನಿ ಲಾಂಡರಿಂಗ್ ಕಾಯ್ದೆಯಡಿ ಹೇಗೆ ತರುತ್ತೀರಿ? ಹಣವು ಅವರಿಗೆ ಹೋಗುತ್ತಿಲ್ಲ. ಒಂದು ವೇಳೆ ಅದು ಅವರು ಭಾಗಿಯಾಗಿರುವ ಕಂಪನಿಯಾಗಿದ್ದರೆ, ವಿಚಾರಣೆಯಲ್ಲಿ ನಮಗೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಇಲ್ಲದಿದ್ದರೆ ಪ್ರಾಸಿಕ್ಯೂಷನ್ ಎಡವುತ್ತದೆ” ಎಂದು ನ್ಯಾಯಾಧೀಶರು ಹೇಳಿದ್ದರು.
ಸಿಸೋಡಿಯಾ ಅವರನ್ನು ಅನಿರ್ದಿಷ್ಟಾವಧಿಯವರೆಗೆ ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಾಲಯ, ವಿಚಾರಣೆ ಪ್ರಾರಂಭವಾಗಲು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದೆ. “ಒಮ್ಮೆ ಆರೋಪಪಟ್ಟಿ ಸಲ್ಲಿಸಿದ ನಂತರ, ವಾದಗಳನ್ನು ತಕ್ಷಣವೇ ಪ್ರಾರಂಭಿಸಬೇಕು” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠ ಹೇಳಿದೆ.
ಫೆಬ್ರವರಿ 26ರಂದು ದೆಹಲಿ ಮದ್ಯ ಹಗರಣದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸಿದ ನಂತರ ಮಾರ್ಚ್ 9ರಂದು ಸಿಬಿಐನ ಪ್ರಥಮ ಮಾಹಿತಿ ವರದಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು.