ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ದೊಡ್ಡ ಹಿನ್ನಡೆಯಾಗಿದ್ದು, ರೋಸ್ ಅವೆನ್ಯೂ ಕೋರ್ಟ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಏಪ್ರಿಲ್ 26ರಂದು ಅವರ ಜಾಮೀನಿನ ಆದೇಶ ಹೊರಬರಬೇಕಿತ್ತು. ಆದರೆ ವಿಚಾರಣೆಯನ್ನು ನ್ಯಾಯಾಲಯದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ತದನಂತರ, ಏಪ್ರಿಲ್ 18 ರಂದು ಈ ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತ್ತು. ಆದರೆ ಇಂದು ಜಾಮೀನು ಅರ್ಜಿ ವಜಾಗೊಳಿಸಿರುವುದರಿಂದ ಮನೀಶ್ ಸಿಸೋಡಿಯಾ ಇದೀಗ ಜಾಮೀನು ಕೋರಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಿಬೇಕಿದೆ.
ಫೆಬ್ರವರಿ 26 ರಂದು ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಜೈಲಿನಲ್ಲಿಯೂ ಇಡಿ ವಿಚಾರಣೆ ನಡೆಸಿತ್ತು. ಇಡಿ ವಿಚಾರಣೆಯ ನಂತರ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 9 ರಂದು ಜೈಲಿನಿಂದಲೇ ಬಂಧಿಸಲಾಯಿತು. ಇಡಿ ಕೂಡ ಸಿಸೋಡಿಯಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಈ ಪ್ರಕರಣದಲ್ಲಿ ಜಾಮೀನು ಕೋರಿ ಸಿಸೋಡಿಯಾ ಅವರು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ಸಹ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು, ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಮನೀಶ್ ಸಿಸೋಡಿಯಾ ವಿರುದ್ಧದ ಆರೋಪಗಳೇನು? 2021ರ ನವೆಂಬರ್ 17ರಂದು ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತು.
ಈ ನೀತಿಯ ಅನುಷ್ಠಾನದ ನಂತರ, ಆದಾಯ ಹೆಚ್ಚಳದ ಜೊತೆಗೆ ಮಾಫಿಯಾ ಆಡಳಿತವನ್ನು ಕೊನೆಗೊಳಿಸಲು ದೆಹಲಿ ಸರ್ಕಾರ ವಾದಿಸಿತ್ತು. ಆದರೆ ಇದು ವಿಫಲವಾಗಿತ್ತು. ದೆಹಲಿ ಸರ್ಕಾರಕ್ಕೆ ಆದಾಯ ನಷ್ಟವಾಗಿದೆ. 2022ರಲ್ಲಿ ಜುಲೈನಲ್ಲಿ ದೆಹಲಿಯ ಆಗಿನ ಮುಖ್ಯ ಕಾರ್ಯದರ್ಶಿ ಎಲ್ಜಿ ವಿಕೆ ಸಕ್ಸೇನಾ ಅವರು ವರದಿ ಸಲ್ಲಿಸಿದರು. ಇದರಲ್ಲಿ ಮನೀಶ್ ಸಿಸೋಡಿಯಾ ಅವರು ಮದ್ಯದ ವ್ಯಾಪಾರಿಗಳಿಗೆ ಅನಗತ್ಯ ಲಾಭಗಳನ್ನು ನೀಡಿದ್ದಾರೆ ಎಂದು ಆರೋಪಿಸಿತ್ತು. ಈ ಕುರಿತು ಸಿಬಿಐ ತನಿಖೆ ನಡೆಸುವಂತೆ ಎಲ್ಜಿ ಶಿಫಾರಸು ಮಾಡಿದ್ದರು. ಎಲ್ಜಿಯವರ ಶಿಫಾರಸಿನ ನಂತರ, 2022ರ ಆಗಸ್ಟ್ 17ರಂದು ಸಿಬಿಐ ಪ್ರಕರಣವನ್ನು ದಾಖಲಿಸುವ ಮೂಲಕ ತನಿಖೆಯನ್ನು ಪ್ರಾರಂಭಿಸಿತು. ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಸೇರಿದಂತೆ 15 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ : ಅಬಕಾರಿ ನೀತಿ ಹಗರಣ : ಸಿಸೋಡಿಯಾ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ
ಆಗಸ್ಟ್ 22 ರಂದು ಇಡಿ ಅಬಕಾರಿ ನೀತಿಯಲ್ಲಿ ಮನಿ ಲಾಂಡರಿಂಗ್ ಪ್ರಕರಣವನ್ನೂ ದಾಖಲಿಸಿತ್ತು. ಸುಮಾರು ಆರು ತಿಂಗಳ ತನಿಖೆಯ ನಂತರ, ಫೆಬ್ರವರಿ ತಿಂಗಳಲ್ಲಿ ಸಿಬಿಐ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತು. ಅಂದಿನಿಂದ ಮನೀಶ್ ಸಿಸೋಡಿಯಾ ಕಂಬಿ ಹಿಂದೆ ಬಿದ್ದಿದ್ದಾರೆ.